ಕರ್ನಾಟಕದ ಮಾಜಿ ವಿಕೆಟ್ ಕೀಪರ್ ಮತ್ತು ರಣಜಿ ಟ್ರೋಫಿ ವಿಜೇತ, ತಿಲಕ್ ನಾಯ್ಡು ಅವರನ್ನು ಬಿಸಿಸಿಐನ ಜೂನಿಯರ್ (ಪುರುಷರು) ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ನಾಯ್ಡು ಅವರನ್ನು ಕೆಲ ದಿನಗಳ ಹಿಂದೆ ಸಮಿತಿಗೆ ನೇಮಕ ಮಾಡಲಾಗಿತ್ತು ಐದು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ಅವರೇ ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ರಣದೇಬ್ ಬೋಸ್, ಹರ್ವಿಂದರ್ ಸಿಂಗ್ ಸೋಧಿ, ಪಥಿಕ್ ಪಟೇಲ್ ಮತ್ತು ಕೃಷ್ಣ ಮೋಹನ್ ಸಮಿತಿಯ ಇತರ ಸದಸ್ಯರು ಗಳಾಗಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್ಗೆ ಪೂರ್ವಭಾವಿಯಾಗಿ ಆಟಗಾರರನ್ನು ಗುರುತಿಸುವುದು ಮತ್ತು ಅವರನ್ನು ಸಿದ್ಧಪಡಿಸುವುದು ನಾಯ್ಡು ಅವರ ಸಮಿತಿಯ ಮೊದಲ ಕಾರ್ಯವಾಗಿದೆ.
ತಿಲಕ್ ನಾಯ್ಡು ಕ್ರಿಕೆಟ್ ಅನುಭವ:
*ನಾಯ್ಡು ಅವರು ತಮ್ಮ ವೃತ್ತಿಜೀವನದಲ್ಲಿ ಒಟ್ಟು 93 ಪಂದ್ಯಗಳಲ್ಲಿ ಆಡಿದ್ದಾರೆ,
* 220 ಕ್ಯಾಚ್ಗಳನ್ನು ಮತ್ತು 18 ಸ್ಟಂಪಿಂಗ್ಗಳನ್ನು ಮಾಡಿದ್ದಾರೆ.
*ನಾಯ್ಡು ಅವರು ಆಕ್ರಮಣಕಾರಿ ಕೆಳ ಕ್ರಮಾಂಕದ ಬ್ಯಾಟರ್ ಆಗಿದ್ದರು.
* ಎಂಟು ಶತಕಗಳನ್ನು ಒಳಗೊಂಡಂತೆ 3480 ರಲ್ಲಿ 4386 ರನ್ ಗಳಿಸಿದ್ದರು.
*ನಾಯ್ಡು ಅವರು 2013-16 ರಿಂದ ಕರ್ನಾಟಕದ ಜೂನಿಯರ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು,
* 2015-16 ರಲ್ಲಿ ಹಿರಿಯ ಆಯ್ಕೆ ಸಮಿತಿಯ ಭಾಗವಾಗಿದ್ದರು.
ಮಹಿಳಾ ತಂಡದ ಆಯ್ಕೆ ಸಮಿತಿಗೆ ಬಂಗಾಳ ಮತ್ತು ರೈಲ್ವೆ ತಂಡದ ಆಟಗಾರ್ತಿಯಾಗಿದ್ದ ಶ್ಯಾಮಾ ಡೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 51 ವರ್ಷ ದ ಶ್ಯಾಮಾ ಅವರು 1995 ರಲ್ಲಿಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಎರಡು ಅರ್ಧ ಶತಕಗಳನ್ನು ಗಳಿಸಿದ್ದರಲ್ಲದೆ, ಐದು ವಿಕಟ್ ಪಡೆದಿದ್ದರು. 1995–97ರ ಅವಧಿಯಲ್ಲಿ ಐದು ಏಕದಿನ ಪಂದ್ಯಗಳಲ್ಲಿ ಆಡಿದ್ದರು. ದೇಸಿ ಕ್ರಿಕೆಟ್ನಲ್ಲಿ ಅವರು ಬಂಗಾಳ (1985– 1997) ಹಾಗೂ ರೈಲ್ವೇಸ್ (1998) ತಂಡಗಳನ್ನು ಪ್ರತಿನಿಧಿಸಿದ್ದರು.
ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಅರ್ಜಿ ಗಳ ಪರಿಶೀಲನೆ ನಡೆಸಿ ತಿಲಕ್ ನಾಯ್ಡು ಮತ್ತು ಶ್ಯಾಮಾ ಡೆ ಅವರನ್ನು ಕ್ರಮವಾಗಿ ಜೂನಿಯರ್ ಹಾಗೂ ಮಹಿಳಾ ತಂಡದ ಆಯ್ಕೆ ಸಮಿತಿಗೆ ನೇಮಕಮಾಡಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.