ಬೆಂಗಳೂರು: ಐಸಿಸಿ ವಿಶ್ವ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಸೋಲು ಕಂಡ ಟೀಂ ಇಂಡಿಯಾಗೆ ಐಸಿಸಿ ಶಾಕ್ ನೀಡಿದ್ದು, ತಂಡದ ಸ್ಟಾರ್ ಆಟಗಾರನಿಗೆ ದಂಡ ವಿಧಿಸಿದೆ.
ಒಂದೆಡೆ ಟೆಸ್ಟ್ ನ ನಾಲ್ಕನೇ ದಿನ ಗಿಲ್ ಔಟ್ ಆದ ಬಳಿಕ ಅಂಪೈರ್ ನೀಡಿದ ತೀರ್ಪಿಗೆ ಮೈದಾನದಲ್ಲೇ ಅಸಮಾಧಾನ ಹೊರಹಾಕಿದ್ದು, ಆರಂಭಿಕ ಬ್ಯಾಟರ್ ಶುಭ್ ಮನ್ ಗಿಲ್ ಗೆ ಐಸಿಸಿ ಎಚ್ಚರಿಕೆಯೊಂದಿಗೆ ದಂಡ ವಿಧಿಸಿದೆ. ಪಂದ್ಯದ ಸಂಭಾವನೆಯ ಶೇ.115ರಷ್ಟು ದಂಡವನ್ನು ಗಿಲ್ ಐಸಿಸಿಗೆ ತೆರಬೇಕಾಗಿದೆ.
ತಾವು ಔಟ್ ಆದ ಬಳಿಕ ಮೈದಾನದಲ್ಲಿ ಅಸಮಾಧಾನ ಹೊರ ಹಾಕಿದ್ದು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ನಿಧಾನಗತಿಯ ಬೌಲಿಂಗ್ ಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳಿಗೆ ದಂಡ ಹೇರಿದ್ದು, ಭಾರತ ತಂಡಕ್ಕೆ ಸಂಭಾವನೆಯ ಶೇ.100ರಷ್ಟು ದಂಡ ಮತ್ತು ಆಸ್ಟ್ರೇಲಿಯಾ ತಂಡಕ್ಕೆ ಶೇ.80ರಷ್ಟು ದಂಡ ಹೇರಲಾಗಿದೆ.
ಭಾರತ ಸರಾಸರಿ 5 ಓವರ್ ಗಳ ಕೊರತೆ ಎದುರಿಸಿದ್ದು, ಆಸ್ಟ್ರೇಲಿಯಾ ತಂಡ 4 ಓವರ್ ಗಳ ಕೊರತೆ ಎದುರಾಗಿತ್ತು. ಇನ್ನು ಐಸಿಸಿ ನೀತಿ ಸಂಹಿತೆ ಆರ್ಟಿಕಲ್ 2.22 ಅನುಸಾರ ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲವಾದ ಪ್ರತಿ ಓವರ್ ಗೆ ಆಟಗಾರರು ತಮ್ಮ ಪಂದ್ಯದ ಶೇ.20ರಷ್ಟು ದಂಡ ನೀಡಬೇಕು.