ಚಾಣಕ್ಯನ ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರದ ಬಗ್ಗೆ ನಮಗೆ ಎಂದೂ ಏನೂ ಕಲಿಸಲಾಗಿಲ್ಲ. ಎಡಮ್ ಸ್ಮಿಥ್ ನೇ ಅರ್ಥಶಾಸ್ತ್ರದ ಪಿತಾಮಹ ಎಂದೇ ಕಲಿಸಲಾಗುತ್ತದೆ. ಅರ್ಥಶಾಸ್ತ್ರದ ಪ್ರಾಧ್ಯಾಪಕರು ಅಪ್ಪಿತಪ್ಪಿ ಕೂಡಾ ಚಾಣಕ್ಯನ ಹೆಸರನ್ನು ಕ್ಲಾಸಿನಲ್ಲಿ ತೆಗೆದುಕೊಳ್ಳುವುದಿಲ್ಲ. ನಿಜ ಹೇಳಬೇಕೆಂದರೆ ನಮ್ಮದು ಎನ್ನುವ ಎಲ್ಲದರ ಬಗ್ಗೆ ಕೀಳರಿಮೆ ಬರುವಂತೆ ನಮಗೆ ಕಲಿಸಲಾಗುತ್ತದೆ. ಯಾವುದೇ ಅರ್ಥಶಾಸ್ತ್ರದ ಪ್ರಾಧ್ಯಾಪಕರು ಚಾಣಕ್ಯನನ್ನು ಓದಿರುವ ಬಗ್ಗೆ ನನಗೆ ಸಂಶಯವಿದೆ. ನಾನು ಕೂಡ ಇತ್ತಿತ್ತಲಾಗಿ ಇದರ ಬಗ್ಗೆ ವಿಚಾರ ಮಾಡಲಾರಂಭಿಸಿದ್ದೇನೆ. ಹಳೆಯ ಪ್ರಾಧ್ಯಾಪಕರಂತೂ ಬ್ರಿಟಿಷರ ವಾರಸುದಾರರಂತೆ ಕೆಲಸ ಮಾಡಿ ಮುಗಿಸಿದ್ದಾರೆ. ಕ್ಯಾಂಪಸ್ಸಿನಲ್ಲಿ ಕನ್ನಡ ಮಾತನಾಡುವುದೇ ನಿಷಿದ್ಧವೆನ್ನುವಂಥ ವಾತಾವರಣ ಒಂದೊಮ್ಮೆ ಇತ್ತು. ಈಗಲೂ ಕ್ಲಾಸಿಗೆ ಪ್ರವೇಶಿಸಿದ ಕೂಡಲೇ ಇಂಗ್ಲೀಷ ಭೂತ ನಮ್ಮ ಮೇಲೆ ಸವಾರಿ ಮಾಡುತ್ತದೆ. ತಪ್ಪೋ, ಸರಿಯೋ, ಮಕ್ಕಳಿಗೆ ತಿಳಿಯುವುದೋ ಇಲ್ಲವೋ, ಒಟ್ಟು ಇಂಗ್ಲೀಷಿನಲ್ಲೇ ಮಾತನಾಡಬೇಕು, ಇಂಗ್ಲೀಷ ಜನರ ಉದಾಹರಣೆಗಳನ್ನೇ ಕೊಡಬೇಕು. ಅವರೇ ಶ್ರೇಷ್ಠರು, ನಮ್ಮದೆಲ್ಲ ಕಳಪೆ, ಉಪಯೋಗಕ್ಕೆ ಬಾರದ ಜ್ಞಾನ ಎನ್ನುವ ಭ್ರಮೆಯನ್ನೇ ನಿಜವೆಂದು ನಂಬಿ ಇನ್ನಷ್ಟು ಅಧ್ಯಾಪಕರು ಕ್ಯಾಂಪಸ್ಸಿನಿಂದ ಹೊರಬಂದು ಕಣಕ್ಕಿಳಿಯುತ್ತಾರೆ. ಹೀಗೆಯೇ ಇದು ಸಾಗುತ್ತಿದೆ.
ಕಾರ್ಪೋರೇಟ್ ಗವರ್ನನ್ಸ್ ಹೇಳಲು ತಯಾರಿ ಮಾಡುವಾಗ ಮೊದಲ ಬಾರಿ ನಾನು ಚಾಣಕ್ಯ ಇದರ ಬಗ್ಗೆ ಏನು ಹೇಳಿರಬಹುದು ಎಂದು ಹುಡುಕಿದೆ. ಇದು, ಮತ್ತು ಇನ್ನಷ್ಟು ಮಾಹಿತಿ ಸಿಕ್ಕಿತು. (ಚಾಣಕ್ಯನ ಅರ್ಥಶಾಸ್ತ್ರದ ಇಂಗ್ಲೀಷ ಪುಸ್ತಕ ಬಹಳ ದೊಡ್ಡದೇ ಇದೆ. ಎಡಮ್ ಸ್ಮಿಥ್ ಹುಟ್ಟುವುದಕ್ಕೆ ಎಷ್ಟೋ ಶತಮಾನಗಳ ಮೊದಲು ಬರೆದ ನೀತಿ ಅದು)