ಇಂದಿನ ಕಾಲಮಾನದಲ್ಲಿ ನಮ್ಮ ಜನರು ಅನೇಕ ರೀತಿಯ ಸೋಂಕುಗಳಿಗೆ ಬಲಿಯಾಗುತ್ತಿದ್ದಾರೆ ಈ ಸೋಂಕುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮೂತ್ರದ ಸೋಂಕು ಅಥವಾ ಉರಿಮೂತ್ರ ಒಂದಾಗಿದೆ ಯುಟಿಐ ಎಂದು ಈ ರೋಗವನ್ನು ಕರೆಯಲಾಗುತ್ತದೆ. ಈ ಸೋಂಕು ಮೂತ್ರ ಜನಕಾಂಗದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಉದಾಹರಣೆಗೆ ಮೂತ್ರಪಿಂಡ ಮೂತ್ರ ವಾಹಿನಿ ಮೂತ್ರಕೋಶ ಅಥವಾ ಮೂತ್ರ ಮಾರ್ಗ. ಯುಟಿಐ ಹೆಚ್ಚಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ.
ಮೂತ್ರಕೋಶದ ಸೋಂಕು ಇ. ಕೊಲೈ ಎಂಬ ಬ್ಯಾಕ್ಟೀರಿಯದಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಗಳು ಕರುಳು ಮತ್ತು ಮಲದಲ್ಲಿ ಸಾಮಾನ್ಯವಾಗಿ ಇರುತ್ತವೆ. ಮಹಿಳೆಯರ ದೇಹ ವಿನ್ಯಾಸವೇ ಅವರನ್ನು ಹೆಚ್ಚಾಗಿ ಮೂತ್ರ ಕೋಶದ ಸೋಂಕಿಗೆ ಈಡು ಮಾಡುತ್ತದೆ.
ಈ ಸೋಂಕಿನ ಲಕ್ಷಣಗಳು ಯಾವುದೆಂದರೆ ನೀವು ಮೂತ್ರ ವಿಸರ್ಜನೆ ಮಾಡಬೇಕೆಂದು ಭಾವಿಸಬಹುದು, ಆದರೆ ನೀವು ಮೂತ್ರ ವಿಸರ್ಜಿಸುವಾಗ ಪ್ರಮಾಣವೂ ತುಂಬಾ ಕಡಿಮೆ ಮತ್ತು ವಿಸರ್ಜಿಸುವ ಸಮಯದಲ್ಲಿ ಮೂತ್ರದ ಉರಿ ಮತ್ತು ನೋವು ಅನುಭವಿಸುವುದು ಆಗಿರುತ್ತದೆ. ಈ ಸಮಯದಲ್ಲಿ ರೋಗಿಗೆ ಜ್ವರ ಕೂಡ ಬರಬಹುದು
UTI ನ ಇತರ ಲಕ್ಷಣಗಳೆಂದರೆ ಮೂತ್ರದ ಬಣ್ಣ ಕೋಲಾ ಅಥವಾ ಚಹಾದಂತೆ ಬದಲಾಗುವುದು,
ಮೂತ್ರದಲ್ಲಿ ರಕ್ತ,
ಮೂತ್ರದಲ್ಲಿ ಕೀವು,
ಮೂತ್ರದ ವಾಸನೆ,
ಮಹಿಳೆಯರ ಸೊಂಟದಲ್ಲಿ ನೋವು,
ಪುರುಷರ ಗುದನಾಳದಲ್ಲಿ ನೋವು,
ಅತಿ ತೀವ್ರವಾದರೆ, ಸೋಂಕು ಕಿಡ್ನಿಗಳಿಗೆ ಹರಡಿ, ಕಿಡ್ನಿ ಫೇಲ್ಯೂರ್ ಆಗುವ ಸಾಧ್ಯತೆ ಕೂಡ ಇರುತ್ತದೆ.
ಮೂತ್ರದ ಸೋಂಕು ಯುಟಿಐ ಗುರುತಿಸಲು ಕೆಳಗಿನ ಪರೀಕ್ಷೆಗಳನ್ನು ಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ: ಯೂರಿನ್ ಅನಲೈಸಿಸ್, ಯೂರಿನ್ ಕಲ್ಚರ್, ಅಲ್ಟ್ರಾ ಸೌಂಡ್, ಸಿಸ್ಟೋಸ್ಕೋಪಿ.
ಮೂತ್ರದ ಸೋಂಕನ್ನು ಈ ಕೆಳಗಿನ ಮನೆಮದ್ದುಗಳಿಂದಲೂ ಸರಿಪಡಿಸಿಕೊಳ್ಳಬಹುದು. ಅವುಗಳೆಂದರೆ,
ಪ್ರತಿ ದಿನ 6- 8 ಗ್ಲಾಸ್ ನೀರನ್ನು ಕುಡಿಯುವುದು. ಇದರಿಂದ ಮೂತ್ರದ ಉತ್ಪಾದನೆ ಜಾಸ್ತಿಯಾಗಿ ಮೂತ್ರನಾಳದಲ್ಲಿರುವ ಬ್ಯಾಕ್ಟೀರಿಯಗಳು ಬೇಗನೆ ಹೊರ ಹಾಕಲು ಸಹಕರಿಸುತ್ತದೆ.
ನಮ್ಮ ವೈಯುಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡುವುದು ಹಾಗೂ ಸ್ನಾನ ಗ್ರಹಕ್ಕೆ ಹೋದಾಗ ಮೂತ್ರನಾಳಗಳನ್ನು ಸರಿಯಾಗಿ ಸ್ವಚ್ಛಗೊಳಿಸಿಕೊಳ್ಳುವುದು. ಆದಷ್ಟು ಸ್ವಚ್ಛವಾಗಿರುವ ಬಾತ್ ರೂಮಗಳನ್ನು ಉಪಯೋಗಿಸುವುದು. ವಿಟಮಿನ್ ಸಿ ಇರುವ ಆಹಾರವನ್ನು ದಿನ ಪ್ರತಿ ಸೇವಿಸುವುದು.
ಮೂತ್ರದ ಸೋಂಕಿನ ಕಾರಣಗಳು :-
ಕರುಳಿನಿಂದ ಬ್ಯಾಕ್ಟೀರಿಯಾ (E.Coli) ಕೆಲವೊಮ್ಮೆ ನಿಮ್ಮ ಗುದದ್ವಾರದಿಂದ ಮೂತ್ರನಾಳವನ್ನು ಪ್ರವೇಶಿಸುತ್ತದೆ. ಇದರ ನಂತರ, ಬ್ಯಾಕ್ಟೀರಿಯಾವು ಮೂತ್ರನಾಳದಿಂದ ಮೂತ್ರಕೋಶದವರೆಗೆ ಮತ್ತು ನಂತರ ಮೂತ್ರಪಿಂಡಕ್ಕೆ ಹೋಗುತ್ತದೆ.
ಅಸುರಕ್ಷಿತ ಲೈಂಗಿಕತೆಯು ನಿಮ್ಮ ಮೂತ್ರನಾಳ ಹಾಗು ಮೂತ್ರಕೋಶದ್ಯೊಳಗೆ ಬ್ಯಾಕ್ಟೀರಿಯಾವನ್ನು ಪ್ರವೇಶಿಸಲು ಕಾರಣವಾಗಬಹುದು.
ಕೆಲವು ಮಹಿಳೆಯರು ತಮ್ಮ ಆನುವಂಶಿಕ ಪ್ರಕರಣಗಳಿಂದಾಗಿ ಯುಟಿಐ ಹೊಂದುವ ಸಾಧ್ಯತೆ ಹೆಚ್ಚು.
ಮಧುಮೇಹ ಹೊಂದಿರುವ ಮಹಿಳೆಯರು ಮತ್ತು ಪುರುಷರು ಯುಟಿಐ ಪಡೆಯುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ, ಏಕೆಂದರೆ ಅವರ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತವೆ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಶಕ್ತಿ ಇರುವುದಿಲ್ಲ.
ಪುರುಷರಲ್ಲಿ ದೊಡ್ಡದಾದ ಪ್ರಾಸ್ಟೇಟ್ ಗ್ರಂಥಿ ಅಥವಾ ಮೂತ್ರಕೋಶ, ಮೂತ್ರ ವಿಸರ್ಜನೆಯನ್ನು ತಡೆಯುತ್ತದೆ, ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
ಈ ಕಾಯಿಲೆ ಗೊತ್ತಾದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅದಕ್ಕೆ ಸಂಬಂಧಪಟ್ಟ ಔಷಧವನ್ನು ತೆಗೆದುಕೊಂಡು ಗುಣಪಡಿಸಿ ಕೊಳ್ಳುವುದು ಉತ್ತಮ.