ಅನಾನಸ್ ಹಣ್ಣುಗಳು ಪ್ರಮುಖ ವಾಣಿಜ್ಯ ಹಣ್ಣಿನ ಬೆಳೆಗಳಲ್ಲಿ ಒಂದಾಗಿದೆ. ಎಲ್ಲ ಕಾಲದಲ್ಲೂ ಬೇಡಿಕೆಯಿರುವ ಅನಾನಸ್ ಕೃಷಿಯತ್ತ ಈಗ ರೈತರು ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ. ಅನಾನಸ್ ಕೃಷಿಯನ್ನು ಸರಿಯಾದ ಕಾಳಜಿ ಮತ್ತು ಉತ್ತಮ ನಿರ್ವಹಣೆ ಕೌಶಲ್ಯಗಳೊಂದಿಗೆ ಮಾಡಿದರೆ ಒಳ್ಳೆಯ ಲಾಭವನ್ನು ಗಳಿಸಬಹುದು.
ಅನಾನಸ್ ಕೃಷಿ ಮಾಡುವುದು ಹೇಗೆ?
ಅನಾನಸ್ ತಳಿ:
ಅನಾನಸ್ ನಲ್ಲಿ ಮುಖ್ಯವಾಗಿ ಕ್ಯೂ ಮತ್ತು ‘ಕ್ವೀನ್’ ಕ್ಯೂ ಜಾತಿಗೆ ಸೇರಿದ ಎರಡು ಪ್ರಮುಖವಾದವು. ಈ ಗಿಡಗಳಲ್ಲಿ ಮುಳ್ಳುಗಳಿರುವುದಿಲ್ಲ, ಅಲ್ಲದೆ ಹಣ್ಣುಗಳ ಗಾತ್ರ ಹಿರಿದಾಗಿರುತ್ತದೆ. ಸಾಮಾನ್ಯವಾಗಿ ಒಂದೂವರೆ ಕೆ.ಜಿ ಯಿಂದ ಮೂರು ಕೆ.ಜಿ ತನಕವೂ ತೂಕವಿರುತ್ತದೆ. ಕ್ವೀನ್ಸ್ ತಳಿಗಳು ರುಚಿಯಾಗಿದ್ದು, ಹಣ್ಣುಗಳ ಗಾತ್ರ ಚಿಕ್ಕದಾಗಿರುತ್ತವೆ. ಇದು ಅರ್ಧ ಕೆ.ಜಿಯಿಂದ ಒಂದೂವರೆ ಕೆ.ಜಿ ತನಕ ತೂಕವಿರುತ್ತದೆ.
ಅನಾನಸ್ ಗಿಡಗಳ ನಾಟಿ:
ಅನಾನಸ್ ಕೃಷಿ ಮಾಡಲು ಜಾಗವನ್ನು ಚೆನ್ನಾಗಿ ಉಳುಮೆ ಮಾಡಿ ಇಲ್ಲಿರುವ ಕಳೆ, ಕಸ, ಮುಂತಾದವುಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. ಆನಂತರ ಸುಮಾರು ಎರಡು ಅಡಿ ಅಂತರದಲ್ಲಿ ಮುಕ್ಕಾಲು ಅಡಿ ಆಳ, ಎರಡು ಅಡಿ ಅಗಲದ ಚರಂಡಿ ತೆಗೆದು ಅದನ್ನು ಕೊಟ್ಟಿಗೆ ಗೊಬ್ಬರ ಹಾಗೂ ರಂಜಕ ಯುಕ್ತ ಗೊಬ್ಬರವನ್ನು ಬೆರೆಸಿ ಮುಚ್ಚಿ ನಂತರ ಚರಂಡಿಯಲ್ಲಿ ಒಂದು ಅಡಿ ಅಂತರದಲ್ಲಿ ಎರಡು ಸಸಿಗಳನ್ನು ನೆಡಬೇಕಾಗುತ್ತದೆ. ಹೀಗೆ ನೆಡುವಾಗ ಸಸಿಯ ಸುಳಿಗೆ ಮಣ್ಣು ಬೀಳದಂತೆ ಎಚ್ಚರ ವಹಿಸುವುದು ಒಳ್ಳೆಯದು.
ಅನಾನಸ್ ಸಸ್ಯಾಭಿವೃದ್ಧಿಯನ್ನು ಅನಾನಸ್ ಗಿಡದಲ್ಲಿ ಹುಟ್ಟುವ ಕಂದುಗಳಿಂದ, ಹಣ್ಣಿನ ಕೆಳಭಾಗದಲ್ಲಿರುವ ಚಿಗುರು (ಸ್ಲಿಪ್ಸ್) ಹಣ್ಣಿನ ಮೇಲ್ಭಾಗದಲ್ಲಿರುವ ಚಿಗುರು (ಕ್ರೌನ್ಸ್) ಗಳಿಂದ ಮಾಡಬಹುದಾಗಿದೆ. ಕಂದುಗಳು ಮತ್ತು ಸ್ಲಿಪ್ಸ್ ಗಳನ್ನು ನಾಟಿಗೆ ಉಪಯೋಗಿಸುವುದರಿಂದ ಗಿಡಗಳು ಹುಲುಸಾಗಿ ಬೆಳೆಯುವುದಲ್ಲದೆ ಬಹುಬೇಗ ಫಸಲನ್ನು ಸಹ ನೀಡುತ್ತವೆ.
ನೀರಿನ ಪೂರೈಕೆ:
ಅನಾನಸ್ ಹೆಚ್ಚು ನೀರನ್ನು ಆವಲಂಬಿಸಿರುವ ಕೃಷಿಯಾಗಿರುವುದರಿಂದ ಸರಿಯಾದ ರೀತಿಯಲ್ಲಿ ಗಿಡಗಳಗೆ ನೀರಿನ ಪೂರೈಕೆಯನ್ನು ಮಾಡಬೇಕು. ಸಸಿಯನ್ನು ನೆಟ್ಟ ನಂತರ ಮಳೆ ಬೀಳುತ್ತಿದ್ದರೆ ನೀರು ಹಾಯಿಸುವ ಅಗತ್ಯವಿರುವುದಿಲ್ಲ. ಆದರೆ ಬೇಸಿಗೆಯ ಸಂದರ್ಭವಾದರೆ ನೀರು ಹಾಯಿಸುವುದು ಅತ್ಯಗತ್ಯ.
ರೋಗಭಾದೆ:
ಅನಾನಸ್ ಗಿಡಕ್ಕೆ ಕೆಲವು ರೋಗಗಳು ಬಾಧಿಸುತ್ತಿದ್ದು, ಅವುಗಳಲ್ಲಿ ಎಲೆ ಸೊರಗು ರೋಗ ಹಾಗೂ ಕಾಂಡ ಕೊಳೆರೋಗ ಮುಖ್ಯವಾಗಿದೆ. ಸಸಿ ನೆಡುವ ಮೊದಲು ಸಸಿಗಳನ್ನು ಕೀಟನಾಶಕಗಳಿಂದ ತೊಯ್ದು ನೆಡುವುದು ಒಳ್ಳೆಯದು. ಇದರಿಂದ ರೋಗ ತಡೆಗಟ್ಟಲು ಸಾಧ್ಯವಾಗುತ್ತದೆ. ಎಲೆ ಸೊರಗು ರೋಗ ಬಂದರೆ ಗಿಡದ ತಳಭಾಗದ ರೋಗಬಾಧಿತ ಎಲೆಗಳನ್ನು ಕತ್ತರಿಸಿ ತೆಗೆಯಬೇಕು. 20 ಕಿ.ಗ್ರಾಂ. ಡೈಪೋಲಿಟಾನ್ ಅಥವಾ 23 ಗ್ರಾಂ ಜೈನೆಬ್ ಗಳನ್ನು 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಅನಾನಸ್ ಕೊಯ್ಲು:
ಸಾಮಾನ್ಯವಾಗಿ, ಅನಾನಸ್ ಗಿಡವನ್ನು ಕೃಷಿ ಮಾಡಿದ ಬಳಿಕ ಸುಮಾರು 12 ರಿಂದ 15 ತಿಂಗಳ ನಂತರ ಹೂ ಬಿಡಲು ಪ್ರಾರಂಭಿಸುತ್ತದೆ. ಅನಾನಸ್ ಬೆಳೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಸಂಪೂರ್ಣವಾಗಿ ತಳಿ, ತೋಟದ ವಾತಾವರಣದ ಹವಾಮಾನದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ, ಸಾಮಾನ್ಯವಾಗಿ, ನಾಟಿ ಮಾಡಿದ ಸುಮಾರು ಎರಡು ವರ್ಷಗಳಲ್ಲಿ, ಅನಾನಸ್ ಬೆಳೆ ಕೊಯ್ಲಿಗೆ ಸಿದ್ಧವಾಗುತ್ತದೆ.