ಬೆಂಗಳೂರು: ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಪಟ್ಟಿ ಮಾಡಲಾಗಿರುವ ಸ್ವತಂತ್ರ ಕಂಪನಿಯಾಗಿ ಕಾರ್ಯಾರಂಭ ಮಾಡಿರುವ ಬೆನ್ನಲ್ಲಿಯೇ ಜಿಇ ಏರೋಸ್ಪೇಸ್ ಪುಣೆಯಲ್ಲಿನ ತನ್ನ ಉತ್ಪಾದನಾ ಘಟಕವನ್ನು ವಿಸ್ತರಿಸಲು ಮತ್ತು ಅಪ್ಗ್ರೇಡ್ ಮಾಡಲು 240 ಕೋಟಿ ರೂಪಾಯಿಗಳಷ್ಟು (~USD 30 ಮಿಲಿಯನ್) ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಈ ಹೂಡಿಕೆಯು ಕಂಪನಿಯ ಈಗ ಇರುವ ಉತ್ಪನ್ನಗಳ ಸಾಮರ್ಥ್ಯ ವನ್ನು ಹೆಚ್ಚಿಸಲಿದೆ. ಜೊತೆಗೆ ಹೊಸ ಯಂತ್ರಗಳು/ಸಾಧನಗಳು ಮತ್ತು ವಿಶೇಷ ಪರಿಕರಗಳನ್ನು ಅಳವಡಿಸಿಕೊಳ್ಳಲು ಬಳಕೆಯಾಗಲಿದೆ. ಅವೆಲ್ಲದರ ಜೊತೆಗೆ ಕಂಪನಿಗೆ ಹೊಸ ಯೋಜನೆಗಳು ಮತ್ತು ಹೊಸ ಉತ್ಪಾದನಾ ಪ್ರಕ್ರಿಯೆಗಳನ್ನು ತರುವ ಕೆಲಸವನ್ನು ಮಾಡಲಿದೆ.
“ಪುಣೆಯಲ್ಲಿರುವ ನಮ್ಮ ಬಹು-ಮಾದರಿ ಉತ್ಪಾದನಾ ಘಟಕದಲ್ಲಿರುವ ತಂಡವು ನಮ್ಮ ಗ್ರಾಹಕರಿಗೆ ಸುರಕ್ಷತೆ, ಗುಣಮಟ್ಟ ಮತ್ತು ವಿತರಣೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಈಗಾಗಲೇ ನಮ್ಮ ಏರ್ಕ್ರಾಫ್ಟ್ ಎಂಜಿನ್ ಘಟಕಗಳ ಜಾಗತಿಕ ಪೂರೈಕೆ ಸರಪಳಿಗೆ ಪ್ರಮುಖ ಕೊಡುಗೆ ನೀಡುತ್ತಿರುವ ಈ ಘಟಕವನ್ನು ವಿಸ್ತರಣೆ ಮಾಡಲು ನಾನು ಸಂತೋಷ ಪಡುತ್ತೇನೆ” ಎಂದು ಜಿಇ ಏರೋಸ್ಪೇಸ್ನ ಗ್ಲೋಬಲ್ ಸಪ್ಲೈ ಚೈನ್ನ ಉಪಾಧ್ಯಕ್ಷ ಮೈಕ್ ಕೌಫ್ಮನ್ ಹೇಳಿದರು.
“ಈ ಹೂಡಿಕೆಯು ಭಾರತದ ಏರೋಸ್ಪೇಸ್ ವಿಭಾಗದಲ್ಲಿ ನಮ್ಮ ಅಭಿವೃದ್ಧಿಯನ್ನು ಮುಂದುವರಿಸಲು ನಮಗೆ ನೆರವಾಗಲಿದೆ. ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ನಮಗೆ ನೀಡುತ್ತದೆ. ಈ ಮೂಲಕ ನಾವು ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು ಪೂರೈಸಲಿದ್ದೇವೆ” ಎಂದು ಜಿಇ ಏರೋಸ್ಪೇಸ್ನ ಪುಣೆ ಘಟಕದ ವ್ಯವಸ್ಥಾಪಕ ನಿರ್ದೇಶಕ ಅಮೋಲ್ ನಾಗರ್ ಹೇಳಿದರು.
ಫೆಬ್ರವರಿ 2015ರಲ್ಲಿ ಪ್ರಧಾನಿ ಮೋದಿಯವರಿಂದ ಉದ್ಘಾಟಿಸಲ್ಪಟ್ಟ ಈ ಘಟಕವು ಕಮರ್ಷಿಯಲ್ ಜೆಟ್ ಎಂಜಿನ್ ಗಳ ಘಟಕಗಳನ್ನು ತಯಾರಿಸುತ್ತದೆ. ಅವುಗಳನ್ನು ಜಿಇಯ ಜಾಗತಿಕ ಕಾರ್ಖಾನೆಗಳಿಗೆ ಸರಬರಾಜು ಮಾಡಲಾಗುತ್ತದೆ. ಅಲ್ಲಿ ಅವುಗಳನ್ನು ಜಿಇ ಮತ್ತು ಸಫ್ರಾನ್ ನ ಜಂಟಿ ಉದ್ಯಮವಾಗಿರುವ ಸಿಎಫ್ಎಂನ ಲೀಪ್ ಎಂಜಿನ್ ಗಳು ಮತ್ತು ವಿಶ್ವದ ಅತ್ಯಂತ ಶಕ್ತಿಯುತ ಕಮರ್ಷಿಯಲ್ ಜೆಟ್ ಎಂಜಿನ್ ಗಳಾಗಿರುವ ಜಿ90, ಜಿಇಎನ್ಎಕ್ಸ್, ಜಿಇ 9ಎಕ್ಸ್ ಜೋಡಣೆಗೆ ಬಳಸಲಾಗುತ್ತದೆ. ಘಟಕ ಪ್ರಾರಂಭವಾದಾಗಿನಿಂದಲೂ ನಿಖರವಾದ ಏರೋಸ್ಪೇಸ್ ಉತ್ಪಾದನಾ ಪ್ರಕ್ರಿಯೆಗಳಲ್ಲಿ 5000ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದೆ. ಸ್ಥಳೀಯ ಏರೋಸ್ಪೇಸ್ ತಯಾರಿಕಾ ವಿಭಾಗದ ಪ್ರತಿಭೆಗಳನ್ನು ಬೆಳೆಸುವಲ್ಲಿ ಈ ಘಟಕವು ಮಹತ್ವದ ಕೆಲಸ ಮಾಡುತ್ತಿದೆ.
ISO14001 ಮತ್ತು ISO45001 ಅಡಿಯಲ್ಲಿ ಪ್ರಮಾಣೀಕರಿಸಲ್ಪಟ್ಟಿರುವ ಈ ಘಟಕವು ಪರಿಸರಕ್ಕೆ ನೆರವಾಗುವ ಅಭ್ಯಾಸಗಳನ್ನು ಪಾಲಿಸುತ್ತಾ ಬಂದಿದೆ. ಉದಾಹರಣೆಗೆ ಹೇಳುವುದಾದರೆ ಈ ಘಟಕದಲ್ಲಿ ಬಳಸಲಾಗುವ ವಿದ್ಯುತ್ ಬಳಕೆಯ 30% ನವೀಕರಿಸಬಹುದಾದ ಮೂಲಗಳಿಂದ ಬರುತ್ತದೆ. ಜೊತೆಗೆ ಇದು ಶೂನ್ಯ ದ್ರವ ವಿಸರ್ಜನೆ ವ್ಯವಸ್ಥೆ ಹೊಂದಿದೆ. ಪ್ರತಿ ವರ್ಷ ಸುಮಾರು 1 ಕೋಟಿ ಲೀಟರ್ ನೀರನ್ನು (100 ಮಿಲಿಯನ್ ಲೀಟರ್) ನೀರನ್ನು ಮರುಬಳಕೆ ಮಾಡುತ್ತದೆ ಮತ್ತು 20 ಮೆಟ್ರಿಕ್ ಟನ್ ಪ್ಲಾಸ್ಟಿಕ್ ಅನ್ನು ರೀಸೈಕಲ್ ಮಾಡುತ್ತದೆ.