ಏನಿದು ಬಾಲನರೆ?
ಮಗುವಿನ ಶೈಶವಾವಸ್ಥೆಯಿಂದ ಹಿಡಿದು ವೃದ್ಧಾಪ್ಯದವರೆಗೂ ದೇಹದ ಪ್ರತಿಯೊಂದು ಅಂಗಗಳು ಒಂದ್ಲ್ಲಿಲೊಂದು ಬದಲಾವಣೆಗೆ ಒಳಪಡುತ್ತಿರುತ್ತವೆ, ಅದು ಪ್ರಕೃತಿ ಸಹಜ. ಅದೇ ತರಹ ಕೂದಲು ಕಪ್ಪು ಬಣ್ಣ ಪಡೆಯಲು ಮೇಲಾನಿನ್ ಎನ್ನುವ ರಾಸಾಯನಿಕದ ಸಹಾಯ ಪಡೆಯುತ್ತದೆ.
ಮೇಲಾನಿನ್ ಪ್ರಮಾಣ ಕಡಿಮೆಯಾದಾಗ ಅಥವಾ ಅಗತ್ಯ ಪೋಷಕಾಂಶಗಳ ಕೊರತೆ ಉಂಟಾದಾಗ ಕೂದಲು ತನ್ನ ಸಹಜ ಬಣ್ಣವನ್ನು ಕಳೆದುಕೊಳ್ಳುತ್ತದೆ. ಈ ಕ್ರಿಯೆ ಮಗುವಿನಲ್ಲಿ ಬೇಗ ಆರಂಭಗೊಂಡು ಕೂದಲು ಬೆಳ್ಳಗಾದಾಗ ಅದು `ಬಾಲ ನರೆ~ ಎನಿಸಿಕೊಳ್ಳುತ್ತದೆ.
ಯಾಕೆ ಹೀಗೆ?
ಇದಕ್ಕೆ ಹಲವು ಕಾರಣಗಳಿವೆ
ಗರ್ಭಾವಸ್ಥೆಯಲ್ಲಿ ತಾಯಿಗೆ ಸರಿಯಾದ ಪೋಷಕಾಂಶಗಳು ದೊರೆಯದೆ ಹೋದಾಗ, ಅದರ್ಲ್ಲಲೂ ವಿಟಮಿನ್ ಬಿ3, ಬಿ5 (ಪ್ಯಾಂಟೋಥೋನಿಕ್ ಆಸಿಡ್) ಬಿ8 (ಬಯೋಟಿನ್), ಜಿಂಕ್, ಕ್ಯಾಲ್ಸಿಯಂ ಕೊರತೆ ಎದುರಾದಾಗ,ಹುಟ್ಟಿನಿಂದಲೇ ಹೊಟ್ಟಿನ ಸಮಸ್ಯೆ ಇದ್ದರೆ ,ಸರಿಯಾದ ಆರೈಕೆ, ಸ್ವಚ್ಛತೆಯ ಕೊರತೆ, ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ, ಶೇಕಡ 50 ರಷ್ಟು ಭಾಗ ವಂಶಾನುಗತವಾಗಿ ಬರುತ್ತದೆ. (ಅಜ್ಜ, ಅಜ್ಜಿ, ಅಥವಾ ಕುಟುಂಬದಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ ಬಾಲನೆರೆ ಕಂಡುಬರುವ ಪ್ರಮಾಣ ಹೆಚ್ಚು.)
ಪರಿಹಾರ ಏನು?
- ಇದು ಒಂದು ಭಯಂಕರವಾದ ಸಮಸ್ಯೆ ಎನ್ನುವುದರಿಂದ ಮೊದಲು ಹೊರಬರಬೇಕು… ಬಾಲ ನರೆ ಅವಳ/ನ ಸಹಜ ಸಾಮಾಜಿಕ ಬೆಳವಣಿಗೆಗೆ ಅಡ್ಡಿಯುಂಟು ಮಾಡಬಾರದು ಎಂಬುದನ್ನು ಮೊದಲು ಪಾಲಕರು ನೆನಪಿನಲ್ಲಿಟ್ಟು ಕೊಳ್ಳಬೇಕು.
- ಮಗುವಿಗೆ ಸರಿಯಾದ ಪೋಷಕಾಂಶದ ಪೂರೈಕೆ ಅತ್ಯಗತ್ಯ. ಹೆಚ್ಚಿನ ಪ್ರೊಟೀನ್, ವಿಟಮಿನ್ಸ್ ಕೊಡುವುದರ ಕಡೆ ಗಮನ ವಹಿಸಬೇಕು.
- ವಿಟಮಿನ್ ಬಿ3,ಬಿ5,ಬಿ8 ಹೆಚ್ಚಿರುವ ಆಹಾರ ಮುಖ್ಯ. ಮೊಳಕೆ ಕಟ್ಟಿದ ಗೋಧಿ, ಯೀಸ್ಟ್, ಸಿಗಡಿಮೀನು, ಓಟ್ಸ್, ಶೇಂಗಾಬೀಜ, ಬಾದಾಮಿ, ಸೋಯಾಬೀನ್, ಲಿವರ್, ಮಟನ್, ಬೀಫ್, ಮಾವಿನ ಹಣ್ಣು. ಇವುಗಳಲ್ಲಿ ಹೇರಳವಾಗಿ ಸಿಗುವುದರಿಂದ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.
- ಜಿಂಕ್, ಕ್ಯಾಲ್ಸಿಯಂ- ಆಲೂಗಡ್ಡೆ, ಜೋಳ, ಗೋಧಿ, ಬಾದಾಮಿ, ಪಾಲಕ್, ಬೆಂಡೆಕಾಯಿಯಲ್ಲಿ ಹೆಚ್ಚಿರುವುದರಿಂದ ದಿನನಿತ್ಯ ಬಳಕೆಯಲ್ಲಿ ಹೆಚ್ಚಾಗಿ ಬಳಸುವುದರಿಂದಲೂ ಈ ಸಮಸ್ಯೆಯಿಂದ ಪಾರಾಗಬಹುದು.
- ಮಕ್ಕಳನ್ನು ಆದಷ್ಟು ಜಂಕ್ಫುಡ್ ನಿಂದ ದೂರವಿಡಿ. ಚಾಕೊಲೇಟ್, ಐಸ್ ಕ್ರೀಂ ಇವು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಬಲ್ಲವು.
- ಶೇಂಗಾ ಚಿಕ್ಕೆ/ ಉಂಡೆ, ರಾಗಿ ಹಲ್ವ, ಹೆಸರು ಬೇಳೆ ಉಂಡೆ ತಿನ್ನಲು ಕೊಡಿ. ಇವುಗಳ ರುಚಿಯು ಹೆಚ್ಚು ಮತ್ತು ಸತ್ವ ಭರಿತವಾದ ಆಹಾರ .
- ಕೂದಲನ್ನು ಹೆಚ್ಚಾಗಿ ಒಣಗಲು ಬಿಡಬೇಡಿ.
- ಮೆಂತ್ಯ, ಕೊಬ್ಬರಿ ಎಣ್ಣೆ, ಕರಿಬೇವು ಇದರಿಂದ ತಯಾರಿಸಿದ ಎಣ್ಣೆ ಉಪಯೋಗಿಸುವುದರಿಂದಲೂ ಪರಿಹಾರ ಕಾಣಬಹುದು.