ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಶಕ್ತಿಯೋಜನೆ ಎರಡು ದಿನಗಳಲ್ಲಿ ಜಾರಿಯಾಗಲಿದೆ. ಆದರೆ ಖಾಸಗಿ ಬಸ್ಸುಗಳು ಮಾತ್ರ ಸಂಚಾರಿಸುವ ಪ್ರದೇಶದ ಮಹಿಳೆಯರಿಗೆ ಈ ಯೋಜನೆ ಹೇಗೆ ಸಿಗಲಿದೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ರಾಜ್ಯದ ಅರ್ಧ ದಷ್ಟು ಜಿಲ್ಲೆಯಲ್ಲಿ ಕೇವಲ ಖಾಸಗಿ ಬಸ್ಸುಗಳು ಮಾತ್ರ ಹೆಚ್ಚಾಗಿ ಸಂಚಾರಿಸುತ್ತಿವೆ. ಹಾಗೆಯೇ ರಾಜ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಗ್ರಾಮಗಳಿಗೆ ಸರ್ಕಾರಿ ಬಸ್ಸುಗಳ ಸೇವೆ ದೊರೆತಿಲ್ಲ. ಅಂತಹ ಪ್ರದೇಶದ ಜನರು ಖಾಸಗಿ ಬಸ್ಸುಗಳನ್ನೇ ಅವಲಂಬಿಸಿರುತ್ತಾರೆ. ರಾಜ್ಯದಲ್ಲಿ 16 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್ಸುಗಳು ಸಂಚಾರಿಸುತ್ತಿವೆ.
ಖಾಸಗಿ ಬಸ್ಸನ್ನು ಅವಲಂಬಿಸಿರುವ ಜಿಲ್ಲೆಗಳು:
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳದ್ದೇ ದರ್ಬಾರು. ಈ ಎರಡು ನಗರಗಳಲ್ಲಿ ಸೇವೆ ಒದಗಿಸುತ್ತಿರುವ ಸರ್ಕಾರಿ ಬಸ್ಸುಗಳು ಬೆರಳೆಣಿಕೆಯಷ್ಟು ಮಾತ್ರ. ಮಂಗಳೂರು ಮತ್ತು ಮೂಡುಬಿದಿರೆ ಸೇರಿದಂತೆ ಹಲವು ಮಾರ್ಗಗಳಲ್ಲಿ ಒಂದೇ ಒಂದು ಸಾರಿಗೆ ಬಸ್ಸು ಸಂಚಾರಿಸುವುದಿಲ್ಲ.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸರ್ಕಾರಿ ಬಸ್ಸುಗಳು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿವೆ. ಮಲೆನಾಡಿನ ಹಳ್ಳಿಗಳಿಗೆ ಇನ್ನೂ ಕೂಡಾ ಸರಿಯಾದ ಬಸ್ಸಿನ ಸೇವೆ ದೊರೆತಿಲ್ಲ. ಜನರು ಸಂಚಾರಕ್ಕಾಗಿ ಖಾಸಗಿ ಬಸ್ಸು ಮತ್ತು ವಾಹನವನ್ನು ಅವಲಂಬಿಸಬೇಕಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 280ಕ್ಕೂ ಹೆಚ್ಚು ಖಾಸಗಿ ಸಂಚಾರಿಸುತ್ತಿದ್ದು, ಚಿಕ್ಕಮಗಳೂರಿನ ಕೊಪ್ಪ, ಎನ್ಆರ್ಪುರ, ಶೃಂಗೇರಿ ತಾಲೂಕಿನ ಬಹುತೇಕ ಗ್ರಾಮಗಳಿಗೆ ಸರ್ಕಾರಿ ಬಸ್ಸಿನ ಸೇವೆ ದೊರೆತಿಲ್ಲ. ಇನ್ನು ಶಿವಮೊಗ್ಗ ಜಿಲ್ಲೆಯಿಂದ ವಿವಿಧ ಜಿಲ್ಲೆಗಳಿಗೆ 646 ಖಾಸಗಿ ಬಸ್ಸುಗಳು ಸಂಚಾರಿಸುತ್ತಿವೆ.
ಖಾಸಗಿ ಬಸ್ಸು ಮತ್ತು ಸರ್ಕಾರಿ ಬಸ್ಸುಗಳು ಸಮ ಪ್ರಮಾಣದಲ್ಲಿರುವ ಜಿಲ್ಲೆಗಳು:
ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಸಮ ಪ್ರಮಾಣದಲ್ಲಿ ಸಂಚಾರಿಸುತ್ತಿವೆ.
ಸರ್ಕಾರಿ ಬಸ್ಸು ಹೆಚ್ಚಿಸುವಂತೆ ಬೇಡಿಕೆ:
ರಾಜ್ಯದಲ್ಲಿ ಮೂರುಸಾವಿರಕ್ಕೂ ಅಧಿಕ ಗ್ರಾಮಗಳಿಗೆ ಸರ್ಕಾರಿ ಬಸ್ಸುಗಳು ಸೇವೆಯನ್ನು ನೀಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸರ್ಕಾರಿ ಬಸ್ಸುಗಳು ಸಂಚರಿಸಬೇಕು. ಹೊಸ ಮಾರ್ಗಗಳಿಗೂ ಬಸ್ಸಿನ ಸೌಲಭ್ಯವನ್ನು ಕಲ್ಪಿಸಿ ರಾಜ್ಯದ ಎಲ್ಲಾ ಮಹಿಳೆಯರಿಗೂ ಶಕ್ತಿ ಯೋಜನೆಯ ಫಲ ದೊರೆಯುವಂತೆ ಮಾಡಬೇಕು ಎಂಬುದು ರಾಜ್ಯದ ಮಹಿಳೆಯರ ಬೇಡಿಕೆ.