ಮಕ್ಕಳು ಆರೋಗ್ಯವಾಗಿರಬೇಕು, ಸದಾ ಕಾಲ ಚಟುವಟಿಕೆಯಿಂದ ಕೂಡಿರಬೇಕು ಎಂದು ತಂದೆ ತಾಯಿಗಳು ಆಸೆ ಪಡುವುದು ಸಹಜ. ಆದರೆ ಅದೇ ರೀತಿ ಪೋಷಕಾಂಶಗಳ ಪೂರೈಕೆಯಾಗಬೇಕು. ಆಗ ಮಾತ್ರ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುವುದು ಹಾಗೂ ಆರೋಗ್ಯವಂತರಾಗುವುದು. ಅದು ಬುದ್ಧಿವಂತಿಗೆ ಮತ್ತು ಮೆದುಳಿನ ಬೆಳವಣಿಗೆಗೂ ಅನ್ವಯವಾಗುತ್ತದೆ.
ಬೀಜಗಳು ಮತ್ತು ಡ್ರೈ ಫ್ರುಟ್ಸ್ಗಳು:
ಬಾದಾಮಿ, ವಾಲ್ನಟ್ ಮತ್ತು ಅಗಸೆ ಬೀಜಗಳು ಮಕ್ಕಳಿಗೆ ಬಹಳ ಒಳ್ಳೆಯದು. ಇವುಗಳಲ್ಲಿ ಮೆಗ್ನೀಸಿಯಮ್, ಸೆಲೆನಿಯಮ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಹೀಗಾಗಿ ಮೆದುಳಿನ ಆರೋಗ್ಯವನ್ನು ಉತ್ತಮವಾಗಿಸಲು ಸಹಾಯ ಮಾಡುತ್ತವೆ.
ಒಂದೆಲಗ:
ಬುದ್ಧಿಶಕ್ತಿ ಹೆಚ್ಚಳ, ಮೆದುಳಿನ ಬೆಳವಣಿಗೆಗೆ ಒಂದೆಲಗ ಬೆಸ್ಟ್ ಮನೆಮದ್ದು ಎನ್ನುತ್ತಾರೆ ವೈದ್ಯರು. ಆದರೆ ನೆನಪಿಡಿ ಮಗುವು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೆ ಒಂದೆಲಗವನ್ನು ನೀಡಬೇಡಿ. ಏಕೆಂದರೆ ಒಂದೆಲಗ ತಂಪಿನ ಗುಣವನ್ನು ಹೊಂದಿರುತ್ತದೆ. ಇದರಿಂದ ಶೀತವಾಗುವ ಸಾಧ್ಯತೆ ಇರುತ್ತದೆ.
ಕೊಬ್ಬರಿ ಎಣ್ಣೆ:
ಉತ್ತಮ ಕೊಬ್ಬನ್ನು ಕೊಬ್ಬರಿ ಎಣ್ಣೆ ಹೊಂದಿರುವುದರಿಂದ ಮೆದುಳಿಗೆ ಒಳ್ಳೆಯದು. ಹೀಗಾಗಿ ಮಕ್ಕಳಿಗೆ ನೀವು ಕೊಬ್ಬರಿ ಎಣ್ಣೆಯನ್ನು ಬಳಸಿ ಮಾಡಿದ ಆಹಾರವನ್ನು ನೀಡಬಹುದು.
ಇದಲ್ಲದೆ, ನಮ್ಮ ನರಮಂಡಲದ ಹೆಚ್ಚಿನ ಭಾಗವು ಕೊಬ್ಬಿನಿಂದ ಮಾಡಲ್ಪಟ್ಟಿದೆ, ಆದ್ದರಿಂದ ಇದು ನರಗಳ ಬೆಳವಣಿಗೆಗೆ ನಿರ್ಣಾಯಕವಾಗಿದೆ. ಅದಕ್ಕೆ ಕೊಬ್ಬರಿ ಎಣ್ಣೆ ಸಹಾಯ ಮಾಡುತ್ತದೆ.
ಹಸಿರೆಲೆ ತರಕಾರಿಗಳು:
ಹಸಿರು ಎಲೆಗಳ ತರಕಾರಿಗಳು ಮಕ್ಕಳಲ್ಲಿ ಹೈಪರ್ಆಕ್ಟಿವಿಟಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ತರಕಾರಿಗಳ ಸಲಾಡ್, ಸಾಂಬಾರ್ ಮಾಡುವಾಗ ಆದಷ್ಟು ಸೊಪ್ಪನ್ನು ಬಳಸಿ. ಇದರಿಂದ ಮಕ್ಕಳ ಬುದ್ದಿಶಕ್ತಿಯೂ ಉತ್ತಮವಾಗುತ್ತದೆ. ಜೊತೆಗೆ ಮೆದುಳಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ.
ಕಾಳು ಮೆಣಸು:
ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಹಾಗೂ ಮಾನಸಿಕ ಆಯಾಸವನ್ನು ನಿವಾರಿಸಲು ಕಾಳು ಮೆಣಸು ಸಹಾಯ ಮಾಡುತ್ತದೆ.
ಪರೀಕ್ಷೆಯ ಸಮಯದಲ್ಲಿ, ಹೆಚ್ಚು ಮಾನಸಿಕ ದಣಿವು ಅಥವಾ ಒತ್ತಡ ಇದ್ದಾಗ, ಒಂದು ಚಿಟಿಕೆ ಕಾಳು ಮೆಣಸನ್ನು ಸೇವನೆ ಮಾಡುವುದರಿಂದ ಒತ್ತಡವನ್ನು ನಿವಾರಸಬಹುದಾಗಿದೆ. ಕಾಳು ಮೆಣಸಿನಲ್ಲಿ ಪೈಪರಿನ್ ಎಂಬ ರಾಸಾಯನಿಕವಿದೆ, ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.