ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ಮಹಿಳೆಯರಿಗೆ 27 ಕೋಟಿ ಮುದ್ರಾ ಸಾಲಗಳನ್ನು ವಿತರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
2015ರಲ್ಲಿ ಪ್ರಧಾನಿ ಮೋದಿ ಸರ್ಕಾರ ಮುದ್ರಾ ಯೋಜನೆಯನ್ನು ದೇಶಕ್ಕೆ ಪರಿಚಯಿಸಿದ್ದರು. ಈ ಯೋಜನೆ ಅಡಿಯಲ್ಲಿ ಕೃಷಿಯೇತರ ಉದ್ದಿಮೆ, ಸಣ್ಣ ಉದ್ದಿಮೆಗಳಿಗೆ 10 ಲಕ್ಷ ರೂ. ಸಾಲ ವಿತರಿಸಲಾಗುವುದು.
ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ಒಂಬತ್ತು ವರ್ಷಗಳಲ್ಲಿನ ಅಭಿವೃದ್ಧಿಯ ಬಗ್ಗೆ ತಿಳಿಸಿದ್ದಾರೆ.
“ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಮಹಿಳೆಯರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಮಹಿಳೆಯರು ಮಹತ್ವದ ಸಾಧನೆಯತ್ತ ಶ್ರಮಿಸುತ್ತಿದ್ದು, ಸ್ತ್ರೀ ಶಕ್ತಿ ಮೂಲಕ ಭಾರತದ ಆರ್ಥಿಕತೆಯನ್ನು ಸಶಕ್ತಗೊಳಿಸುವ ಕಡೆಗೆ 27 ಕೋಟಿ ಮುದ್ರಾ ಸಾಲವನ್ನು ನೀಡಲಾಗಿದೆ.” ಎಂದಿದ್ದಾರೆ.
https://twitter.com/AmitShah/status/1665998698646757377?s=20
–
ಕಳೆದೆರಡು ದಿನಗಳ ಹಿಂದೆ ನಡೆದ ಭಾರಿ ರೈಲು ಅಪಘಾತದಿಂದ ಇನ್ನು ಸುಧಾರಿಸದ ಒಡಿಶಾದಲ್ಲಿ ಇಂದು ಮತ್ತೊಂದು ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಸಿಕಂದರಾಬಾದ್-ಅಗರ್ತಲಾ ಎಕ್ಸ್ಪ್ರೆಸ್ ರೈಲಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಭೀತಿ ಸೃಷ್ಟಿಸಿದ ಘಟನೆ ಒಡಿಶಾದ ಬ್ರಹ್ಮಪುರ ರೈಲು ನಿಲ್ದಾಣದಲ್ಲಿ ನಡೆದಿದೆ.
ಎಕ್ಸ್ಪ್ರೆಸ್ ರೈಲಿನ ಎಸಿ ಬಿ-5 ಬೋಗಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಹೊಗೆ ಕಾಣಿಸಿಕೊಂಡ ಕೂಡಲೇ ಪ್ರಯಾಣಿಕರನ್ನು ಇಳಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈ ಬಗ್ಗೆ ಮಾಹಿತಿ ಪಡೆದ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ರೈಲು ನಿಲ್ದಾಣದಿಂದ ರೈಲು ಪ್ರಯಾಣ ಮುಂದುವರಿಸಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
–
ಒಡಿಶಾದ ಬಾಲಸೋರ್ ನಲ್ಲಿ ಭೀಕರ ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್ ಪ್ರೆಸ್ ರೈಲಿನಿಂದ ಹೊರತೆಗೆದ ಸುಮಾರು 40 ಮೃತದೇಹಗಳಿಗೆ ಯಾವುದೇ ಗಾಯಗಳಾಗಿಲ್ಲ. ಈ ಪ್ರಯಾಣಿಗರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರಬಹುದು ಎಂದು ಸರ್ಕಾರಿ ರೈಲ್ವೆ ಪೊಲೀಸ್ ತಿಳಿಸಿದೆ.
ಬಾಲಸೋರ್ ನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಸಂಭವಿಸಿದಾಗ ಲೈವ್ ಓವರ್ ಹೆಡ್ ವೈರ್ ಗಳು ತುಂಡಾಗಿದ್ದು, ಕೆಲವು ಬೋಗಿಗಳಿಗೆ ಸಿಕ್ಕಿ ಹಾಕಿಕೊಂಡಿವೆ. ಇದರಿಂದ ಅದರಲ್ಲಿದ್ದ ಪ್ರಯಾಣಿಕರಿಗೆ ವಿದ್ಯುತ್ ತಗುಲಿದೆ ಎಂದು ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಶುಕ್ರವಾರ ಒಡಿಶಾದ ಬಾಲಸೋರ್ ನಲ್ಲಿ ಹೌರಾ- ಚೆನ್ನೈ ಕೋರಮಂಡಲ್ ಎಕ್ಸ್ ಪ್ರೆಸ್, ಬೆಂಗಳೂರು- ಹೌರ ಎಕ್ಸ್ ಪ್ರೆಸ್ ಮತ್ತು ಗೂಡ್ಸ್ ರೈಲು ಸೇರಿ ತ್ರಿವಳಿ ರೈಲುಗಳು ಅಪಘಾತಕ್ಕೀಡಾಗಿದ್ದು, 278 ಜನರು ಮೃತಪಟ್ಟಿದ್ದಾರೆ ಹಾಗೂ 1200 ಮಂದಿ ಗಾಯಗೊಂಡಿದ್ದಾರೆ.
–
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್ ಗಿರಿ ವಿರುದ್ದ ಕ್ರಮ ಕೈಗೊಳ್ಳಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡಲಾಗುವುದು ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿ. ಪರಮೇಶ್ವರ್ ಅವರು, ಬಳಿಕ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಮಂಗಳೂರಿನಲ್ಲಿ ಎದುರಿಸುತ್ತಿರುವ ಸವಾಲುಗಳು ಹಾಗೂ ಸಮಸ್ಯೆಗಳನ್ನು ಪರಿಶೀಲಿಸಿದ್ದೇನೆ. ನನಗೆ ಇದು ಹೊಸ ಹುದ್ದೆಯಲ್ಲ. ಹೊಸ ಸವಾಲುಗಳು ಹುಟ್ಟಿಕೊಂಡಿವೆ.
ನೈತಿಕ ಪೊಲೀಸ್ ಗಿರಿ ತಡೆಯಲು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಎಂಬ ಹೊಸ ಘಟಕ ಸ್ಥಾಪಿಸುತ್ತೇವೆ. ಆ್ಯಂಟಿ ಕಮ್ಯುನಲ್ ವಿಂಗ್ ನಲ್ಲಿ ಸಮರ್ಥ ಅಧಿಕಾರಿಗಳು ಇರಲಿದ್ದಾರೆ. ಈ ಭಾಗದಲ್ಲಿ ಭಯದ ವಾತಾವರಣವಿದೆ ಅಂತಾ ಜನ ಮಾತಾಡ್ತಿದ್ದಾರೆ. ಕೋಮು ಸೌಹಾರ್ದತೆಯನ್ನು ತರಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
–