ರಾಜ್ಯಸರ್ಕಾರ ಚುನಾವಣಾ ಪೂರ್ವ ನೀಡಿದ್ದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭರವಸೆಯನ್ನು ಈಡೇರಿಸಲು ಸಕಲ ಸಿದ್ದತೆಯನ್ನು ಮಾಡಿಕೊಂಡ ಬೆನ್ನಲ್ಲೆ ಸರ್ಕಾರಕ್ಕೆ ಖಾಸಗಿ ಬಸ್ ಮಾಲೀಕರ ಹೊಸ ಬೇಡಿಕೆ ಕಗ್ಗಂಟಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದೆ. ಬಸ್ ಉಚಿತ ಗ್ಯಾರಂಟಿ ಖಾಸಗಿ ಬಸ್ಗಳಿಗೂ ನೀಡಲಿ ಎಂಬ ಬೇಡಿಕೆಯನ್ನು ಖಾಸಗಿ ಬಸ್ ಮಾಲೀಕರು ಸರ್ಕಾರ ಮುಂದೆ ಇಡುವ ಸಾಧ್ಯತೆಗಳಿವೆ.
ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಸರ್ಕಾರ ಘೋಷಣೆಯನ್ನು ಮಾಡಿದ್ದು, ಮಹಿಳೆಯರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಆದರೆ ಈ ಗ್ಯಾರಂಟಿಯಿಂದಾಗಿ ಖಾಸಗಿ ಬಸ್ಗಳಿಗೆ ಆತಂಕ ಶುರುವಾಗಿದೆ. ಈಗ ಮಹಿಳೆಯರು ಎಲ್ಲಿಗೆ ಹೋಗಬೇಕಾದರೂ ಸರ್ಕಾರಿ ಬಸ್ಗಳನ್ನೇ ಆರಿಸುತ್ತಿದ್ದು, ಇದರಿಂದ ಖಾಸಗಿ ಬಸ್ಗಳಿಗೆ ಸಾಕಷ್ಟು ನಷ್ಟವಾಗಲಿದೆ. ಆದರಿಂದ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿಯನ್ನು ಖಾಸಗಿ ಬಸ್ಸುಗಳಿಗೂ ವಿಸ್ತರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಲು ಖಾಸಗಿ ಬಸ್ಸು ಮಾಲೀಕರ ಸಂಘ ನಿರ್ಧರಿಸಿದೆ.
ಖಾಸಗಿ ಬಸ್ ಮಾಲಕರ ಬೇಡಿಕೆಯೇನು?
ಮಹಿಳಾ ಪ್ರಯಾಣಿಕರಿಗೆ ಫ್ರೀ ಅಂತ ಘೋಷಣೆ ಮಾಡುವುದರಿಂದ ಈಗಾಗಲೇ ನೆಲಕಚ್ಚಿರುವ ನಮ್ಮ ಉದ್ದಿಮೆಗೆ ಕೊನೆ ಮೊಳೆ ಹೊಡೆಯಲು ಸರ್ಕಾರ ಮುಂದಾಗಿದ್ಯಾ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಈಗಾಗಲೇ ಬಸ್ ಮಾಲೀಕರು ರೋಡ್ ಟ್ಯಾಕ್ಸ್ ಕಟ್ಟಲು, ಇನ್ಸೂರೆನ್ಸ್ ಕಟ್ಟಲು ಆಗುತ್ತಿಲ್ಲ. ಕಂಡಕ್ಟರ್, ಡ್ರೈವರ್ ಗಳಿಗೆ ಸಂಬಳ ಕೊಡಲು ಆಗುತ್ತಿಲ್ಲ. ಈಗಾಗಲೇ ಬಸ್ ಮಾಲೀಕರು ಮನೆ-ಮಠ ಮಾರಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಫ್ರೀ ಅಂತ ಘೋಷಣೆ ಮಾಡಿದ್ರೆ ಮಹಿಳೆಯರು ಉಚಿತವಾಗಿ ಕರೆದುಕೊಂಡು ಹೋಗುವ ಕಡೆ ಹೋಗುತ್ತಾರೆ. ಇದರಿಂದ ನಮ್ಮ ಖಾಸಗಿ ಬಸ್ ಉದ್ದಿಮೆಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳುತ್ತದೆ ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಹೇಳಿದ್ದಾರೆ.
ಕೆಎಸ್ಆರ್ಟಿಸಿ, ಬಿಎಂಟಿಸಿಗೆ ನೀಡಲು ಪ್ಲಾನ್ ಮಾಡಿರುವಂತೆ ನಮಗೂ ಪ್ಯಾಕೇಜ್ ಘೋಷಣೆ ಮಾಡಿ. ನಮ್ಮ ಬಸ್ ಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರ ಡೇಟಾವನ್ನು ಸರ್ಕಾರಕ್ಕೆ ಕೊಡುತ್ತೇವೆ. ನಾವು ಮಹಿಳೆಯರಿಗೆ ಉಚಿತವಾಗಿ ಕರೆದುಕೊಂಡು ಹೋಗುತ್ತೇವೆ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
17 ಜಿಲ್ಲೆಗಳಲ್ಲಿ ಖಾಸಗಿ ಬಸ್ಸು ಸಂಚಾರ ಹೆಚ್ಚು:
ಕರಾವಳಿ ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚಾರ ಇದೆ. ಈ ಜಿಲ್ಲೆಯ ಮಹಿಳೆಯರಿಗೆ ಅನ್ಯಾಯ ಅಗೋದು ಗ್ಯಾರಂಟಿ ಆದರಿಂದ ಸರ್ಕಾರ ಸರಕಾರಿ ಬಸ್ಸುಗಳಿಗೆ ಕೊಡುವ ಅನುಕೂಲ ಖಾಸಗಿ ಬಸ್ಸುಗಳಿಗೂ ನೀಡಿ. ಹಣದ ರೂಪದಲ್ಲಿ ಅಲ್ಲವಾದರೂ ತೆರಿಗೆ ವಿನಾಯಿತಿ, ಡೀಸೆಲ್ ಸಬ್ಸಿಡಿ ರೂಪದಲ್ಲಿ ಕೊಡಿ ಎಂದು ಖಾಸಗಿ ಬಸ್ ಮಾಲೀಕರು ಹೇಳುತ್ತಿದ್ದಾರೆ.