ಕಿಚ್ಚ ಸುದೀಪ್ ಅವರ ಹೊಸ ಸಿನಿಮಾದ ಬಗ್ಗೆ ವಾರಕ್ಕೊಂದು ವಿಷಯ ಹರಿದಾಡುತ್ತಿರುತ್ತದೆ. ಈ ನಡುವೆ ಬಾಲಿವುಡ್ ಅಂಗಳದಿಂದ ಹೊಸ ಸುದ್ದಿಯೊಂದು ಕೇಳಿ ಬಂದಿದ್ದು, ಸುದೀಪ್ ಅವರ 46ನೇ ಚಿತ್ರಕ್ಕೆ ಬಾಲಿವುಡ್ ನಟಿ ಸಿಮ್ರಾತ್ ಕೌರ್ ನಾಯಕಿಯಾಗಿ ಅಭಿನಯಿಸಲಿದ್ದಾರೆ.
ಇದರ ಬಗ್ಗೆ ಸಿನಿಮಾ ತಂಡದಿಂದ ಯಾವುದೇ ಮಾಹಿತಿ ಸಿಗದೆ ಇದ್ದರೂ, ಮಿಲ್ಕಿ ಬ್ಯೂಟಿ ಸಿಮ್ರಾತ್ ಕೌರ್ ಹೆಸರು ಮಾತ್ರ ಸಖತ್ ವೈರಲ್ ಆಗುತ್ತಿದೆ. ಮೂಲತಃ ಮುಂಬೈ ಮೂಲದವರಾದ ಸಿಮ್ರಾತ್, ತೆಲುಗು ಚಿತ್ರಗಳ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟು, ಆ ಮೇಲೆ ಬಾಲಿವುಡ್ ನಲ್ಲಿ ಮಿಂಚಿದ್ದಾರೆ. ಇದೀಗ ಸಿಮ್ರಾತ್ ನಟನೆಯ ಗದಾರ್ 2 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.
ಸುದೀಪ್ ಅವರ ಮುಂದಿನ ಸಿನಿಮಾವನ್ನು ತಮಿಳು ನಿರ್ಮಾಣ ಸಂಸ್ಥೆಯೊಂದು ನಿರ್ಮಾಣ ಮಾಡುತ್ತಿದ್ದು, ಸುದೀಪ್ ಟೀಸರ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಣ್ಣದೊಂದು ವಿಡಿಯೋ ರಿಲೀಸ್ ಮಾಡಿತ್ತು ತಮಿಳಿನ ಕಲೈಪುಲಿ ಎಸ್ ತನು ನಿರ್ಮಾಣ ಸಂಸ್ಥೆ. ಸುದೀಪ್ ಕಾರಿನಿಂದ ಇಳಿಯುವುದರ ಜೊತೆಗೆ ಮೇಕಪ್ ನಲ್ಲಿ ಭಾಗಿಯಾಗುವ ಸಣ್ಣದೊಂದು ವಿಡಿಯೋ ಬಿಡುಗಡೆ ಮಾಡಿದ್ದರು. ಸುದೀಪ್ ಅವರ ಗೆಟಪ್ ಸಕ್ಕತ್ತಾಗಿ ಇರಲಿದೆ ಎನ್ನುವ ಸುಳಿವನ್ನೂ ನೀಡಿದ್ದರು.
ಈ ಹಿಂದೆಯಷ್ಟೇ ತಾವು ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಕುರಿತು ಕಿಚ್ಚ ಸುದೀಪ್ ಬಹಿರಂಗ ಪಡಿಸಿದ್ದರು. ಮೂರು ಸಿನಿಮಾಗಳಲ್ಲಿ ಮೊದಲು ಯಾವುದು ಶುರುವಾಗಲಿದೆ ಎನ್ನುವ ಕುತೂಹಲ ಎಲ್ಲರಲ್ಲಿ ಕುತೂಹಲ ಉಂಟು ಮಾಡುತ್ತಿದೆ. ‘ಬಿಲ್ಲ ರಂಗ ಬಾಷಾ’ ಮೊದಲು ಮೂಡಿ ಬರಲಿದೆ ಎನ್ನಲಾಗಿತ್ತು. ಆದರೆ, ಅದಕ್ಕೂ ಮುನ್ನ ವಿಜಯ್ ನಿರ್ದೇಶನದ ಚಿತ್ರ ತಯಾರಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಒಟ್ಟಿನಲ್ಲಿ ಸುದೀಪ್ ಬ್ಯಾಕ್ ಟು ಬ್ಯಾಕ್ ಸಿನಿಮಾ ರಿಲೀಸ್ ಮಾಡಲು ಸಖತ್ ಬ್ಯುಸಿಯಾಗಿದ್ದಾರೆ.