ಮಂಗಳೂರು: ರಾಜ್ಯದಲ್ಲಿ ಚಳಿಶೀತದೊಂದಿಗೆ ಕೊರೋನಾ ಸೋಂಕು ಕೂಡ ಹೆಚ್ಚಾಗುತ್ತಿದೆ. ಕರ್ನಾಟದಲ್ಲಿ ಕೊರೊನಾ ಪೀಡಿರ ಸಂಖ್ಯೆ ಕೂಡ ಕೂಡ 300 ರ ಗಡಿ ದಾಟಿದೆ. ರಾಜ್ಯದಲ್ಲಿ ಮತ್ತೋರ್ವ ಕೊರೋನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಶುಕ್ರವಾರ ಕೂಡ ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ, ಇದರಿಂದ ರಾಜ್ಯದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 175ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಒಟ್ಟು 2366 ಮಂದಿಗೆ (1947 RTCPR+ 419 RAT) ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ 78 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು 175 ಸಕ್ರಿಯ ಪ್ರಕರಣಗಳಲ್ಲಿ 162 ಮಂದಿಗೆ ಹೋಮ್ ಐಸೋಲೇಷನ್ನಲ್ಲಿ ಇರಲು ಸೂಚನೆ ನೀಡಲಾಗಿದ್ದು, 13 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 6 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 7 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.3.29 ಇದ್ದು, ಮತ್ತು ಕೋವಿಡ್ ಮರಣ ಪ್ರಮಾಣ ದರ ಶೇ. 1.8 ದಾಖಲಾಗಿದೆ.
ಉಸಿರಾಟದ ಸಮಸ್ಯೆಯಿಂದಾಗಿ ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಉತ್ತರ ಭಾರತ ಮೂಲದ 40 ವರ್ಷದ ವ್ಯಕ್ತಿ ಶುಕ್ರವಾರ ಮೃತಪಟ್ಟಿದ್ದಾನೆ. 2 ದಿನಗಳ ಹಿಂದೆ ಈ ವ್ಯಕ್ತಿಗೆ ಕೊವಿಡ್ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ವೆನ್ಲಾಕ್ನ ಐಸಿಯು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಲಸೆ ಕಾರ್ಮಿಕನಾಗಿ ಮಂಗಳೂರಿಗೆ ಬಂದಿದ್ದ ವ್ಯಕ್ತಿ ಉಸಿರಾಟದ ತೊಂದರೆಯಿಂದಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ. ಕೋವಿಡ್ ನಿಂದಲೇ ಸಾವು ಆಗಿದೆಯಾ ಎಂದು ವೈದ್ಯರು ದೃಢಪಡಿಸಬೇಕಾಗಿದೆ ಎಂದಿದ್ದಾರೆ. ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಪ್ರತ್ಯೇಕ ಗೈಡ್ಲೈನ್ಸ್ ಇಲ್ಲ. ಜನ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸಲು ಸಲಹೆ ಕೊಡುತ್ತೇವೆ. ಯಾವುದೂ ಕಡ್ಡಾಯ ಅಲ್ಲ, ನಾವು ಯಾವುದೇ ನಿರ್ಬಂಧ ವಿಧಿಸಲ್ಲ. ಕೊರೊನಾ ಉಪತಳಿ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ ಅಷ್ಟು ತೀವ್ರವಾಗಿಲ್ಲ. ಸೋಮವಾರ ಅಥವಾ ಮಂಗಳವಾರ ಸಂಪುಟ ಉಪಸಮಿತಿ ಸಭೆ ನಡೆಯಲಿದೆ. ಕೇಂದ್ರ ಮತ್ತು ಬೇರೆ ರಾಜ್ಯಗಳ ಮಾಹಿತಿ ಪಡೆದು ಬಳಿಕ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ಯಾವುದೇ ಕಾರ್ಯಕ್ರಮ ನಿಲ್ಲಿಸುವ ನಿರ್ಧಾರ ಮಾಡಿಲ್ಲ. ಈ ಕೊವಿಡ್ ಅಪಾಯಕಾರಿ ಅಲ್ಲ ಎಂದು ತಜ್ಞರು ಹೇಳಿದ್ದಾರೆ. ಆದರೂ ಕೂಡ ಮುನ್ನೆಚ್ಚರಿಕೆಯಲ್ಲಿ ನಾವು ಇರೋದು ಒಳ್ಳೆಯದು. ರಾಜ್ಯದಲ್ಲಿ ಸದ್ಯ ಐದು ಸಾವಿರ ಟೆಸ್ಟಿಂಗ್ ಟಾರ್ಗೆಟ್ ನೀಡಲಾಗಿದೆ. ಗಡಿ ಜಿಲ್ಲೆಯಾದ ಮೈಸೂರು, ಮಂಗಳೂರಿನಲ್ಲಿ ಟೆಸ್ಟಿಂಗ್ ಹೆಚ್ಚಳಕ್ಕೆ ಸೂಚಿಸಲಾಗಿದೆ ಎಂದರು.