ಬ್ರಿಟೀಷರಿಂದ ಅಧಿಕಾರ ಹಸ್ತಾಂತರದ ವೇಳೆಯಲ್ಲಿ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ಸ್ವೀಕರಿಸಿದ್ದ ತಮಿಳುನಾಡಿನ ಐತಿಹಾಸಿಕ ರಾಜದಂಡವಾದ ʼಸೆಂಗೊಲ್ʼ ಅನ್ನು ನೂತನ ಸಂಸತ್ ಭವನದಲ್ಲಿ ಸ್ಥಾಪಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐತಿಹಾಸಿಕ ರಾಜದಂಡ ಸೆಂಗೊಲ್ ಅಲಹಾಬಾದ್ ನ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದ್ದು, ಮೇ. 28ರಂದು ಪ್ರಧಾನಿ ಮೋದಿ ಉದ್ಘಾಟಿಸಲಿರುವ ನೂತನ ಸಂಸತ್ ಭವನದಲ್ಲಿ ಅದನ್ನು ಸ್ಥಾಪಿಸಲಾಗುವುದು ಎಂದರು.
ನೂತನ ಸಂಸತ್ ಕಟ್ಟಡದ ಉದ್ಘಾಟನೆಯ ದಿನದಂದು 7,000 ಕಾರ್ಮಿಕರನ್ನು ಪ್ರಧಾನ ಮಂತ್ರಿ ಗೌರವಿಸಲಿದ್ದಾರೆ. ತಮ್ಮ ಬುದ್ಧಿವಂತಿಕೆಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸ್ವತಂತ್ರವಾಗಿರುವ ಎಲ್ಲಾ ರಾಜಕೀಯ ಪಕ್ಷಗಳಿಗೂ ಹೊಸ ಸಂಸತ್ ಭವನದ ಉದ್ಘಾಟನೆಯ ಆಹ್ವಾನ ಪತ್ರಿಕೆಗಳನ್ನು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
–
ತಿರುಮಲ ತಿರುಪತಿ ಬೆಟ್ಟದಲ್ಲಿ ಭದ್ರತೆಯನ್ನು ಜನದಟ್ಟಣೆಯ ನಡುವೆ ಭದ್ರತೆ ಹೆಚ್ಚಿಸಲು ಟಿಟಿಡಿ ಆಡಳಿತ ಮಂಡಳಿ ಮುಂದಾಗಿದೆ.
ಈ ಬಗ್ಗೆ ತಿರುಮಲ ತಿರುಪತಿ ದೇವಸ್ಥಾನದ ಭದ್ರತಾ ಲೆಕ್ಕ ಪರಿಶೋಧನಾ ಸಭೆಯು ಇತ್ತೀಚೆಗೆ ನಡೆದಿದೆ. ದೇವಾಲಯದ ಸಮಗ್ರ ಭದ್ರತಾ ಲೆಕ್ಕ ಪರಿಶೋಧನೆಯ ಅಗತ್ಯವಿದೆ ಎಂದು ಟಿಟಿಡಿ ಪ್ರಧಾನ ಕಾರ್ಯದರ್ಶಿ ಹರೀಶ್ ಗುಪ್ತಾ ತಿಳಿಸಿದ್ದಾರೆ.
ಹರೀಶ್ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ಐಪಿಎಸ್, ಐಎಎಸ್ ಮತ್ತು ಟಿಟಿಡಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆದಿದೆ. ಕೊರೋನಾ ಬಳಿಕ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಯಾವ ರೀತಿ ಭದ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳು ಚರ್ಚೆ ನಡೆಸಿದರು.
–
ದಕ್ಷಿಣ ತಮಿಳುನಾಡಿನಲ್ಲಿ ಸಮುದ್ರಮಟ್ಟದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಸಾಕಷ್ಟು ತೊಂದರೆಗಳು ಜನರ ಜೀವನಕ್ಕೆ ಕುತ್ತು ತಂದಿವೆ.
ಹಲವೆಡೆ ಬೃಹತ್ ಗಾತ್ರದ ಮರಗಳು, ವಿದ್ಯುತ್ ಕಂಬಗಳು, ಮನೆ ಮೇಲ್ಚಾವಣಿಗಳು ಕುಸಿದ್ದು ಬಿದ್ದಿವೆ. ರಾಜ್ಯದಲ್ಲಿ ಇನ್ನು 5 ದಿನ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣ ಒಳನಾಡಿನ 17 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ರಾಮನಗರ, ಮಂಡ್ಯ, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿ ಹಾಗೂ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
–
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದ್ದರಿಂದ ಸೋಲಿನ ಹೊಣೆಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಎಂ. ಇಬ್ರಾಹಿಂ ರಾಜೀನಾಮೆ ನೀಡಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಸಲ್ಲಿಸಿದ್ದಾರೆ. ಆದರೆ ರಾಜೀನಾಮೆ ಪತ್ರವನ್ನು ದೇವೇಗೌಡರು ಇನ್ನೂ ಅಂಗೀಕರಿಸಿಲ್ಲ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಹೀಗಾಗಿ ನಾನು ರಾಜೀನಾಮೆ ನೀಡಿದ್ದೇನೆ ಎಂದರು. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅವರಿಗೆ ಶುಭವಾಗಲಿ. ರಾಜ್ಯದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಇತ್ತು. ಇದನ್ನು ಕಾಂಗ್ರೆಸ್ನವರು ಹಣಬಲ ಸೇರಿದಂತೆ ಬೇರೆ ಬೇರೆ ವಿಚಾರದಲ್ಲಿ ಗೆದ್ದಿದ್ದಾರೆ. ನಮ್ಮದು ಪ್ರಾದೇಶಿಕ ಪಕ್ಷ. ಹಣ ಇಲ್ಲ. ನಮಗೆ ಯಾರ ಬೆಂಬಲವೂ ಇರಲಿಲ್ಲ. ಆದರೂ ನಾವು 60 ಲಕ್ಷ ಮತ ಪಡೆದಿದ್ದೇವೆ ಎಂದರು.