ಮೈಸೂರು : ಅಮೃತ ವಿಶ್ವವಿದ್ಯಾಪೀಠಂನ ದೃಶ್ಯ ಸಂವಹನ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಸಿನಿರಮಾ-2024ʼ 6ನೇ ರಾಷ್ಟ್ರೀಯ ಕಿರುಚಿತ್ರೋತ್ಸವದ ಸಮಾರೋಪ ಸಮಾರಂಭ ಫೆಬ್ರವರಿ 17ರಂದು ಅಮೃತ ವಿಶ್ವವಿದ್ಯಾಪೀಠಂನ ಮೈಸೂರು ಕ್ಯಾಂಪಸ್ನಲ್ಲಿ ನಡೆಯಿತು. ಕಿರುಚಿತ್ರೋತ್ಸವದ ಭಾಗವಾಗಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಿರುಚಿತ್ರಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್ ಹಾಗೂ ಕನ್ನಡದ ಖ್ಯಾತ ನಟ ‘ಲವ್ಲೀ ಸ್ಟಾರ್’ ಪ್ರೇಮ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ನಂತರ ಮಾತನಾಡಿದ ಗುರುಕಿರಣ್, ಸಿನಿಮಾ ಕ್ಷೇತ್ರ ದಿನದಿಂದ ದಿನಕ್ಕೆ ಅನೇಕ ಅವಕಾಶಗಳನ್ನು ತೆರೆದುಕೊಳ್ಳುತ್ತಿರುವ ಕ್ಷೇತ್ರವಾಗಿದ್ದು, ಇದಕ್ಕೆ ಎಂದಿಗೂ ಸಾವಿಲ್ಲ ಎಂದು ಅಭಿಪ್ರಾಯಪಟ್ಟರು. ಸಿನಿಮಾ ನಿರ್ಮಾಣದಲ್ಲಿ ಆಸಕ್ತಿ ಇರುವವರು ವಿವಿಧ ತಂಡಗಳ ಜೊತೆ ಕೆಲಸ ನಿರ್ವಹಿಸಿ ಅನುಭವವನ್ನು ಪಡೆದುಕೊಳ್ಳಬೇಕು. ಇಂತಹ ಅನುಭವಗಳು ಸಿನಿಮಾ ವೃತ್ತಿ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕುತ್ತವೆ ಎಂದರು.
ಮತ್ತೋರ್ವ ಅತಿಥಿ ಲವ್ಲೀ ಸ್ಟಾರ್ ಪ್ರೇಮ್ ಮಾತನಾಡಿ, ಹಿಂದಿನ ದಿನಗಳಲ್ಲಿ ನಾವು ಅವಕಾಶಕ್ಕಾಗಿ ನಿರ್ದೇಶಕರ ಹಿಂದೆ ಅಲೆಯುತ್ತಿದ್ದೆವು. ಆದರೆ ಇಂದು ಉತ್ತಮ ಪ್ರತಿಭಾವಂತ ಕಲಾವಿದರನ್ನು ನಿರ್ದೇಶಕರುಗಳೇ ಹುಡುಕಿಕೊಂಡು ಬರುತ್ತಿದ್ದಾರೆ. ಕನ್ನಡ ಸಿನಿಮಾ ರಂಗ ಉತ್ತಮ ಕಲಾವಿದರು ಹಾಗೂ ತಂತ್ರಜ್ಞರನ್ನು ಮುಕ್ತ ಅವಕಾಶಗಳನ್ನು ಕಲ್ಪಿಸುತ್ತಿದೆ. ಇಂತಹ ಅವಕಾಶಗಳ ಸದುಪಯೋಗವನ್ನು ಆಸಕ್ತರು ಪಡೆದುಕೊಳ್ಳಬೇಕು ಎಂದರು. ಮೊಬೈಲ್ ಫೋನ್ನ ಹಾವಳಿ ಎಷ್ಟೇ ಇದ್ದರೂ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿನಿಮಾ ಮಂದಿರಗಳಿಗೇ ತೆರಳಿ ಸಿನಿಮಾ ನೋಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಮೃತ ವಿದ್ಯಾರ್ಥಿಗಳು ತಮ್ಮ ನೃತ್ಯದ ಮೂಲಕ ನೆರೆದವರನ್ನು ರಂಜಿಸಿದರು. ಜೊತೆಗೆ ಸೆಲೆಬ್ರಿಟಿ ಸ್ಟಾರ್ಗಳೂ ಕೂಡಾ ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದರು. ಅಲ್ಲದೇ ಗಾಯಕ ಗುರುಕಿರಣ್ ಅವರು ಹಾಡಿದ “ಅಮ್ಮಾ ನಿನ್ನೀ ಜನುಮ..” ಹಾಡು ಸಭಿಕರನ್ನು ಭಾವುಕರನ್ನಾಗಿಸಿತು.
ಈ ಬಾರಿಯ ಸಿನಿರಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ದೇಶದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳು ಹಾಗೂ ಫಿಲ್ಮ್ ಮೇಕಿಂಗ್ ಸ್ಕೂಲ್ಗಳು ಭಾಗವಹಿಸಿದ್ದವು. 100ಕ್ಕೂ ಹೆಚ್ಚು ಸಿನಿಮಾಗಳು ಈ ಕಿರುಚಿತ್ರೋತ್ಸವದಲ್ಲಿ ನೋಂದಣಿಗೊಂಡಿದ್ದು, ಟಾಪ್ ಕಿರುಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು.
ಕಿರುಚಿತ್ರೋತ್ಸವದಲ್ಲಿ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರಗಳು ಹಾಗೂ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಿರ್ದೇಶಕ ಹಾಗೂ ಎಡಿಟರ್ ಅಪ್ಪು ಭಟ್ಟಾತಿರಿ ಚಲನಚಿತ್ರ ಸಂಕಲನದ ಕುರಿತು ‘ಸೆಲೆಕ್ಟೆಡ್ ಟೇಕ್ಸ್ʼ ಎನ್ನುವ ಗೋಷ್ಠಿಯನ್ನು; ಹಾಗೂ ನೆಟ್ಫ್ಲಿಕ್ಸ್ ಇಂಡಿಯಾದ ಒರಿಜಿನಲ್ ನಾನ್ ಫಿಕ್ಷನ್ ಮ್ಯಾನೇಜರ್ ಸ್ವಾತಿ ಸ್ವಪ್ನರವರು ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಯಾವ ಬಗೆಯ ಕಂಟೆಂಟ್ ಗಳನ್ನು ಸೃಷ್ಟಿಸಬಹುದು ಹಾಗೂ ನಾನ್ಫಿಕ್ಷನ್ ಕ್ಷೇತ್ರದಲ್ಲಿ ಇರುವ ಉದ್ಯೋಗಾವಕಾಶಗಳ ಕುರಿತು ‘ಟೇಲ್ಸ್ ಓವರ್ ದಿ ಟಾಪ್ʼ ಎನ್ನುವ ಗೋಷ್ಠಿಗಳು ನಡೆದವು.
ಅಮೃತ ಮೈಸೂರು ಕ್ಯಾಂಪಸ್ನ ಅಸೋಸಿಯೇಟ್ ಡೀನ್ ಪ್ರೊ. ಶೇಖರ್ ಬಾಬು, ಪ್ರಾಂಶುಪಾಲ ಡಾ.ಜಿ. ರವೀಂದ್ರನಾಥ್, ಮೈಸೂರು ಕ್ಯಾಂಪಸ್ನ ನಿರ್ದೇಶಕರಾದ ಬ್ರಹ್ಮಚಾರಿ ಅನಂತಾನಂದ ಚೈತನ್ಯ, ಸಂಚಾಲಕರಾದ ಬ್ರಹ್ಮಚಾರಿ ಮುಕ್ತಿದಾಮೃತ ಚೈತನ್ಯ, ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಮೌಲ್ಯ ಬಾಲಾಡಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಿರುಚಿತ್ರ ಸ್ಪರ್ಧೆಯ ವಿಜೇತರಿಗೆ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ನಗದು ಬಹುಮಾನವನ್ನು ನೀಡಲಾಯಿತು.
ಪ್ರಶಸ್ತಿ ವಿಜೇತರು:
ಪ್ರಥಮ ಅತ್ಯುತ್ತಮ ಕಿರುಚಿತ್ರ – ಪರಾಗ್ ಸಾವಂತ್ – ಪಂಖೋಲ್ (ಮರಾಠಿ)
ದ್ವಿತೀಯ ಅತ್ಯುತ್ತಮ ಕಿರುಚಿತ್ರ – ಪ್ರೇಮ್ ಕುಮಾರ್ ಆರ್ – ಕರ್ಪಿ (ತಮಿಳು)
ತೃತೀಯ ಕಿರುಚಿತ್ರ – ಅನಂತು ರಮೇಶ್ – ದ್ವಯಂ (ಮಲಯಾಳಂ)
ವಿಶೇಷ ವಿಭಾಗ ಪ್ರಶಸ್ತಿಗಳು
ಅತ್ಯುತ್ತಮ ಸಂಕಲನಕಾರ – ಪ್ರದೀಪ್ ಪಾಟಿಲ್ – ಪಂಖೋಲ್ (ಮರಾಠಿ)
ಅತ್ಯುತ್ತಮ ನಿರ್ದೇಶಕ – ಅನಂತು ರಮೇಶ್ – ದ್ವಯಂ (ಮಲಯಾಳಂ)
ಅತ್ಯುತ್ತಮ ಛಾಯಾಗ್ರಾಹಕ – ಪರಾಗ್ ಸಾವಂತ್ – ಪಂಖೋಲ್ (ಮರಾಠಿ)
ಅತ್ಯುತ್ತಮ ನಟನೆ – ಭಾನುಪ್ರಿಯ – ಕರ್ಪಿ (ತಮಿಳು)
ಉತ್ತಮ ಕಥೆ – ವಿಘ್ನೇಶ್ ಪರಮಶಿವಂ – ತುಣೈ (ತಮಿಳು)
ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಹಾಗೂ ಅವರಲ್ಲಿರುವ ಸಿನಿಮಾ ಆಸಕ್ತಿಯನ್ನು ಪ್ರೋತ್ಸಾಹಿಸಲು ಅಮೃತ ವಿಶ್ವವಿದ್ಯಾಪೀಠಂನ ವಿದ್ಯಾರ್ಥಿಗಳಿಗಾಗಿ ಅಮೃತ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು.