ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ತಂಡಗಳು ಸ್ಯಾಫ್ ಫುಟ್ ಬಾಲ್ ಟೂರ್ನಿಯ ಒಂದೇ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದ್ದು, ಜೂನ್. 21ರಂದು ಇಂಡೋ-ಪಾಕ್ ಮುಖಾಮುಖಿಯಾಗಲಿವೆ.
ಜೂನ್.21ರಿಂದ ಜುಲೈ 4ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಈ ಟೂರ್ನಿ ನಡೆಯಲಿದೆ.
ಈ ಬಾರಿ ನಡೆಯುತ್ತಿರುವ 14ನೇ ಆವೃತ್ತಿಯ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಕುವೈತ್ ಮತ್ತು ನೇಪಾಳ ತಂಡಗಳು ʼಎʼ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ. ಇನ್ನು ʼಬಿʼ ಗುಂಪಿನಲ್ಲಿ ಲೆಬನಾನ್, ಮಾಲ್ಡೀವ್ಸ್, ಬಾಂಗ್ಲಾದೇಶ ಮತ್ತು ಭೂತಾನ್ ತಂಡಗಳಿವೆ.
ಜೂನ್ 21ರಂದು ಸ್ಯಾಫ್ ಟೂರ್ನಿಯ ಉದ್ಘಾಟನೆ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಕುವೈತ್-ನೇಪಾಳ ಎದುರಾಗಲಿದ್ದು, ಅಂದಿನ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಪಾಕ್ ಸೆಣೆಸಾಡಲಿವೆ.
ಭಾರತ- ಪಾಕಿಸ್ತಾನದ ಫುಟ್ ಬಾಲ್ ತಂಡಗಳು 5 ವರ್ಷಗಳ ಬಳಿಕ ಮುಖಾಮುಖಿಯಾಗಲಿದೆ. 2018ರ ಸ್ಯಾಫ್ ಟೂರ್ನಿಯ ಸೆಮಿ ಫೈನಲ್ ನಲ್ಲಿ ಎರಡೂ ತಂಡಗಳು ಪೈಪೋಟಿ ನಡೆಸಿದ್ದವು. ಅಂದಿನ ಪಂದ್ಯದಲ್ಲಿ ಭಾರತ 3-1 ರಲ್ಲಿ ಜಯಗಳಿಸಿತ್ತು. ಆದರೆ ಫೈನಲ್ಸ್ ನಲ್ಲಿ ಭಾರತ 1-2 ರಲ್ಲಿ ಮಾಲ್ಡೀವ್ಸ್ ವಿರುದ್ಧ ಸೋತಿತ್ತು.
ಭಾರತ- ಪಾಕ್ ಈವರೆಗೆ ಸುಮಾರು 20ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದು, 12 ಪಂದ್ಯಗಳಲ್ಲಿ ಭಾರತ ಗೆದ್ದಿದೆ. ಇನ್ನು ಭಾರತ 8 ಬಾರಿ ಸ್ಯಾಫ್ ಕಪ್ ಗೆದ್ದಿದ್ದು, 4 ಸಲ ರನ್ನರ್ ಅಪ್ ಆಗಿದೆ.