ಬೆಂಗಳೂರು: 2000 ರೂ. ಮುಖಬೆಲೆಯ ನೋಟು ವಿನಿಮಯಕ್ಕೆ ಮನವಿ ಪತ್ರ ಅಥವಾ ಗುರುತಿನ ಚೀಟಿ ಬೇಕೆಂದಿಲ್ಲ ಎಂದು ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ 2 ಸಾವಿರ ರೂ, ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದರ ಬಗ್ಗೆ ಘೋಷಣೆ ಮಾಡಿದ ಬೆನ್ನಲ್ಲೇ ಜನರು ನೋಟ್ ಬದಲಾವಣೆಗೆ ಬ್ಯಾಂಕ್ ಸುತ್ತಬೇಕಾಗುತ್ತದೆ ಎಂಬ ಜನರ ಪ್ರಶ್ನೆಗೆ ಎಸ್ ಬಿಐ ಇಂದು ಸ್ಪಷ್ಟನೆ ನೀಡಿದೆ.
ಯಾವುದೇ ಗುರುತಿನ ಚೀಟಿ ಇಲ್ಲದೇ ಗ್ರಾಹಕರು ಏಕಕಾಲಕ್ಕೆ 20,000 ರೂ.ಗಳ ವರೆಗೆ 2,000 ಮುಖ ಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಈ ಸಮಯದಲ್ಲಿ ಗ್ರಾಹಕರು ಯಾವುದೇ ಗುರುತಿನ ಚೀಟಿಯನ್ನು ಒದಗಿಸುವ ಅಗತ್ಯ ಇಲ್ಲ ಎಂದು ಎಸ್ಬಿಐ ತಿಳಿಸಿದೆ.
–
ಈಗಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದ ಬೆನ್ನಲ್ಲೇ ಈಗ ಮುಂಬರುವ 4 ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಭೆ ಕರೆದಿದೆ.
ಮುಂದಿನ ದಿನಗಳಲ್ಲಿ ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢದಲ್ಲಿ ಚುನಾವಣೆ ನಡೆಯಲಿದ್ದು, ಅದರ ತಯಾರಿಗಾಗಿ ಕಾಂಗ್ರೆಸ್ ಮೇ.24ಕ್ಕೆ ವಿಶೇಷ ಸಭೆ ಆಯೋಜಿಸಿದೆ.
ಈ ಸಭೆಯು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ನಾಲ್ಕು ರಾಜ್ಯಗಳ ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಿತ್ತು.
–
ಹೊಸ ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟನೆ ಮಾಡಬೇಕು, ಪ್ರಧಾನಮಂತ್ರಿ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅವರನ್ನು ಗುರುವಾರ ಭೇಟಿಯಾಗಿದ್ದರು. ಈ ವೇಳೆ ಅವರಿಗೆ ಆಹ್ವಾನ ಪತ್ರಿಕೆ ನೀಡಿದ್ದು, ಹೊಸ ಸಂಸತ್ ಭವನ ಉದ್ಘಾಟನೆ ಮಾಡಲು ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೋರಿದ್ದಾರೆ ಎಂದು ಲೋಕಸಭೆಯ ಸಚಿವಾಲಯ ತಿಳಿಸಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ʼನೂತನ ಸಂಸತ್ ಭವನವನ್ನು ರಾಷ್ಟ್ರಪತಿ ಉದ್ಘಾಟಿಸಬೇಕು, ಪ್ರಧಾನ ಮಂತ್ರಿ ಅಲ್ಲ ಎಂದು ಹೇಳಿದ್ದಾರೆ. ಮೇ.28ರಂದು ಸಾವರ್ಕರ್ ಜನ್ಮದಿನ ಇರುವುದರಿಂದ ಅದೇ ದಿನ ಸಂಸತ್ ಭವನ ಉದ್ಘಾಟನೆ ಏಕೆ ಎಂದು ವಿರೋಧ ಪಕ್ಷಗಳು ಪ್ರಶ್ನೆ ಮಾಡಿವೆ.
ಹೊಸ ಭವನದಲ್ಲಿ ಸುಮಾರು 1,280 ಜನರು ಕುಳಿತುಕೊಳ್ಳಲು ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ.
–
ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ಪ್ರವಾಸೋದ್ಯಮದ ಜಿ20 ಕಾರ್ಯಕಾರಿ ಸಭೆಗೆ ಶ್ರೀನಗರವು ಶೃಂಗಾರಗೊಂಡಿದೆ. ಸಭೆಯ ಕಾರಣ ಕಾಶ್ಮೀರ ಕಣಿವೆಯಾದ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ ವಿಮಾನ ನಿಲ್ದಾಣದಿಂದ ಶೇರ್- ಎ- ಕಾಶ್ಮೀರ್ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್ ವರೆಗಿನ ಮಾರ್ಗದವರಿಗೆ ಜಿ20 ಕಾರ್ಯಕಾರಿ ಸಭೆಯಲ್ಲಿ ಪ್ರತಿನಿಧಿಗಳನ್ನು ಸ್ವಾಗತಿಸಲು ಹೋರ್ಡಿಂಗ್ ಗಳನ್ನು ಹಾಕಲಾಗಿದೆ. ಬರುವ ಅತಿಥಿಗಳಿಗೆ ಉತ್ತರ ಕಾಶ್ಮೀರದ ಗುಲ್ಮಾರ್ಗ್ ಟೂರಿಸ್ಟ್ ರೆಸಾರ್ಟ್ ಸಜ್ಜುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ಜಿ) ಮತ್ತು ನೌಕಾಪಡೆಯ ಕಮಾಂಡೊಗಳ ಸಹಾಯದಿಂದ ಪೊಲೀಸರು ಮತ್ತು ಅರೆಸೇನಾ ಪಡೆಗಳು ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿವೆ ಎಂದೂ ಅವರು ಹೇಳಿದ್ದಾರೆ.
ಸ್ಫೋಟಕಗಳನ್ನು ಪರಿಶೀಲಿಸಲು ಸ್ಕ್ಯಾನರ್ಗಳು ಮತ್ತು ಶ್ವಾನಪಡೆಯನ್ನು ನಿಯೋಜಿಸಲಾಗಿದೆ.