ಬೆಂಗಳೂರು: ಇದ್ದಕ್ಕಿಂತೆಯೇ ಕತ್ತಲೆ ಆವರಿಸಿ, ಮೋಡಕವಿದು ಸುರಿದ ಭಾರೀ ಮಳೆಗೆ ಓರ್ವ ಯುವತಿ ಸಾವನ್ನಪ್ಪಿರುವ ಘಟನೆ ಸಂಜೆ ವೇಳೆ ನಡೆದಿದೆ.
ಮಧ್ಯಾಹ್ನ 3:30 ರಲ್ಲಿ ಇದ್ದಕ್ಕಿದ್ದಂತೆ ಮಳೆ ಆರಂಭವಾಗಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜಧಾನಿಯ ಹಲವು ಭಾಗಗಗಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಮಧ್ಯಾಹ್ನ ಪ್ರಾರಂಭವಾದ ಮಳೆ ಸುಮಾರು ಒಂದು ಗಂಟೆ ಕಾಲ ಧಾರಾಕಾರವಾಗಿ ಸುರಿದಿದೆ. ಕಾರ್ಮೋಡ ಕವಿದು, ಗುಡುಗು- ಸಿಡಿಲು ಸಹಿತ ಭರ್ಜರಿಯಾಗಿ ಮಳೆ ಸುರಿದಿದೆ.
ಈ ಮಳೆಯಿಂದಾಗಿ ನಗರದ ವಿಧಾನಸೌಧ, ಆನಂದ್ ರಾವ್ ಸರ್ಕಲ್, ಮೆಜೆಸ್ಟಿಕ್, ರೇಸ್ ಕೋರ್ಸ್, ಕೆಆರ್ ಸರ್ಕಲ್, ಟೌನ್ ಹಾಲ್, ಕಾರ್ಪೊರೇಷನ್, ಮೈಸೂರು ಬ್ಯಾಂಕ್ ಸರ್ಕಲ್, ಜಯನಗರ, ಮಲ್ಲೇಶ್ವರ ಸೇರಿ ಹಲವೆಡೆ ವಾಹನ ಸವಾರರು ದಾರಿ ಕಾಣದೆ ರಸ್ತೆಯ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸುವ ಅನಿವಾರ್ಯತೆ ಸೃಷ್ಟಿಯಾಯಿತು.
ರೇಸ್ ಕೋರ್ಸ್ ರಸ್ತೆಯಲ್ಲಿ ಐಷಾರಾಮಿ ಕಾರು ನಜ್ಜುಗುಜ್ಜಾಗಿದೆ. ಕುಮಾರ ಕೃಪಾ ರಸ್ತೆಯಲ್ಲಿನ ಚಿತ್ರಕಲಾ ಪರಿಷತ್ ಮುಂದೆ ಕಾರು ಮತ್ತು ಬೈಕ್ ಮೇಲೆ ಭಾರಿ ಗಾತ್ರದ ಮರ ಬಿದ್ದು ವಾಹನಗಳು ಸಂಪೂರ್ಣ ಜಖಂ ಆಗಿವೆ. ಈ ವೇಳೆ ಕಾರಿನಲ್ಲಿ ಇದ್ದವರಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಮುಖ್ಯ ಕಾರ್ಯದರ್ಶಿಯಿಂದ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ, ಕೆ.ಆರ್.ಸರ್ಕಲ್ ನ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಳಿಸಿದರು. ನಂತರ ಆಸ್ಪತ್ರೆಗೆ ಭೇಟಿ ನೀಡಿ, ಮೃತಪಟ್ಟ ಯುವತಿ ಕುಟುಂಬದವರಿಗೆ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಮಳೆ ನಿಂತ ಬಳಿಕ ಹಾನಿಯಾದ ಸ್ಥಳಗಳಿಗೆ ಸಿಎಂ ಭೇಟಿ ನೀಡಿ ಪರಿಶೀಲಿಸುವ ಸಾಧ್ಯತೆ ಇದೆ.
ಕೆ.ಆರ್ ಸರ್ಕಲ್ ನಲ್ಲಿ ಮಳೆ ಆರ್ಭಟಿಸಿದ ಪರಿಣಾಮ ನೀರಿನಲ್ಲಿ ಕಾರು ಮುಳುಗಡೆಯಾಗಿ, ಕಾರಿನಲ್ಲಿ ಸಿಲುಕಿದ್ದ 6 ಜನಋ ಕುಟುಂಬವನ್ನು ರಕ್ಷಣೆ ಮಾಡಲಾಗಿದೆ. ಇವರೊಂದಿಗಿದ್ದ ಅಸ್ವಸ್ಥರಾಗಿದ್ದ ಯುವತಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.