ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದ ಕಾಂಗ್ರೆಸ್ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಹಾಗೂ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸದರು. ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಹಾಗೆಯೇ ಅವರ ಜೊತೆ ಎಂಟು ಜನ ಸಚಿವರು ಪ್ರಮಾಣ ವಚನವನ್ನು ಸ್ವೀಕರಿಸಿದರು.
ಯಾರು ಯಾವ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು:
*ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
*ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗಂಗಾಧರ ಅಜ್ಜಯ್ಯನವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
*ಡಾ.ಪರಮೇಶ್ವರ್ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
*ಕೆಜೆ ಜಾರ್ಜ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
*ಎಂ ಬಿ ಪಾಟೀಲ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
*ಸತೀಶ್ ಜಾರಕಿಹೊಳಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
*ಪ್ರಿಯಾಂಕ್ ಖರ್ಗೆ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
*ರಾಮಲಿಂಗಾರೆಡ್ಡಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
*ಜಮೀರ್ ಅಹ್ಮದ್ ಖಾನ್ ಅಲ್ಲಾಹ್ ಮತ್ತು ತಮ್ಮ ತಾಯಿಯ ಹೆಸರಿನಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಕಾಂಗ್ರೆಸ್ ಮಿತ್ರಕೂಟಗಳ ಒಗ್ಗಟ್ಟು ಪ್ರದರ್ಶನ:
ಪ್ರಮಾಣ ವಚನ ಕಾರ್ಯಕ್ರಮಕ್ಕೆ ಯುಪಿಎ ಮಿತ್ರಕೂಟದ ಹಲವು ಪಕ್ಷಗಳ ನಾಯಕರು ಹಾಜರಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ, ನಿಯೋಜಿತ ಸಿಎಂ ಸಿದ್ದರಾಮಯ್ಯ, ನಟ ಕಮಲ್ ಹಾಸನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸಿಪಿಐನ ಡಿ ರಾಜಾ, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಪಿಡಿಪಿಯ ಮೆಹಬೂಬಾ ಮುಫ್ತಿ, ಎನ್ಸಿಪಿಯಿಂದ ಶರದ್ ಪವಾರ್, ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸೆಲೆಬ್ರಿಟಿಗಳು ಭಾಗಿ:
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಗೀತಾ ಶಿವರಾಜ್ಕುಮಾರ್, ಕಮಲ್ ಹಾಸನ್, ರಮ್ಯಾ, ದುನಿಯಾ ವಿಜಯ್, ನಿಶ್ವಿಕಾ ನಾಯ್ಡು, ನಿದೇರ್ಶಕ ರಾಜೇಂದ್ರ ಸಿಂಗ್ ಬಾಬು ಮತ್ತಿತ್ತರರು ಭಾಗವಹಿಸಿದ್ದರು.