ಇಸ್ಲಾಮಾಬಾದ್: ಅಲ್ಪ ಸಂಖ್ಯಾತರಿಗೆ ನರಕವೇ ಆಗಿರುವ ಪಾಕಿಸ್ಥಾನದಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಶೇಕಡಾ 10 ರಷ್ಟಿದ್ದ ಹಿಂದೂಗಳ ಸಂಖ್ಯೆ ದಿನೇ ದಿನೇ ಕುಸಿದು ಇಂದು ಜನಸಂಖ್ಯೆಯ ಶೇಕಡಾ 3 ರಷ್ಟಕ್ಕೆ ಇಳಿದಿದೆ. ನಿತ್ಯವೂ ಹಿಂದೂಗಳ ಮೇಲೆ ಬೆದರಿಕೆ , ದೌರ್ಜನ್ಯ, ಹಿಂದೂ ಯುವತಿಯರ ಬಲವಂತದ ಅಪಹರಣ ಮತ್ತು ಮದುವೆ ನಡೆಯುತ್ತಿದೆ. ಇದು ಅಲ್ಲಿನ ಆರ್ಥಿಕವಾಗಿ ಮೇಲ್ಮಟ್ಟದಲ್ಲಿರುವ ಸೆಲೆಬ್ರಿಟಿಗಳಿಗೂ ದೌರ್ಜನ್ಯ ತಪ್ಪಿದ್ದಲ್ಲ. ಇದಕ್ಕೆ ನೂತನ ಉದಾಹರಣೆ ಎಂದರೆ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಅವರು ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡುತಿದ್ದಾಗ ಬಲವಂತದ ಧಾರ್ಮಿಕ ಮತಾಂತರದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ತನ್ನನ್ನು ಇಸ್ಲಾಂಗೆ ಮತಾಂತರಿಸಲು ಯತ್ನಿಸಿದ್ದರು ಎಂದು ಭಾರತೀಯ ಟಿವಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡುತ್ತಾ ಕನೇರಿಯಾ ಹೇಳಿಕೊಂಡಿದ್ದಾರೆ.
ಪಾಕಿಸ್ತಾನದ ಡ್ರೆಸ್ಸಿಂಗ್ ರೂಮ್ನಲ್ಲಿ ತನ್ನ ಕಷ್ಟದ ಸಮಯದ ಬಗ್ಗೆ ಪ್ರತಿಕ್ರಿಯಿಸಿದ ಕನೇರಿಯಾ, ತಾನು ಕ್ರಿಕೆಟ್ ಆಡುತಿದ್ದಾಗ ಇಂಜಮಾಮ್-ಉಲ್-ಹಕ್ ಮತ್ತು ಶೋಯೆಬ್ ಅಖ್ತರ್ ಮಾತ್ರ ನನ್ನನ್ನು ಬೆಂಬಲಿಸಿದರು ಎಂದು ಹೇಳಿದರು. “ನನ್ನ ವೃತ್ತಿಜೀವನವು ನಿಜವಾಗಿಯೂ ಉತ್ತಮವಾಗಿ ಸಾಗುತ್ತಿದೆ. ನಾನು ಟೆಸ್ಟ್ನಲ್ಲಿ ಪಾಕಿಸ್ತಾನದ ನಾಲ್ಕನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿದ್ದೇನೆ. ನನ್ನ ವೃತ್ತಿಜೀವನವು ಸರಿಯಾದ ಹಾದಿಯಲ್ಲಿತ್ತು, ನಾನು ಕೌಂಟಿ ಕ್ರಿಕೆಟ್ನಲ್ಲಿಯೂ ಆಡುತ್ತಿದ್ದೆ. ಇಂಜಮಾಮ್-ಉಲ್-ಹಕ್ ನನಗೆ ಬೆಂಬಲ ನೀಡಿದರು, ಅವರು ಮಾತ್ರ. ನಾಯಕನಾಗಿ ನನ್ನನ್ನು ಬೆಂಬಲಿಸಿದ ವ್ಯಕ್ತಿ, ಶೋಯೆಬ್ ಅಖ್ತರ್ ಸಹ ನನ್ನನ್ನು ಬೆಂಬಲಿಸಿದರು, ”ಎಂದು ಕನೇರಿಯಾ ಹೇಳಿದರು.
ಆದರೆ ನಿವೃತ್ತ ಕ್ರಿಕೆಟಿಗ, ಶಾಹಿದ್ ಅಫ್ರಿದಿ ತನಗೆ ಸಾಕಷ್ಟು ತೊಂದರೆ ನೀಡುತ್ತಿದ್ದರು, ಅವರು ನನ್ನೊಂದಿಗೆ ಊಟದ ಮೇಜಿನ ಬಳಿ ಕೂಡ ಕುಳಿತುಕೊಳ್ಳಲಿಲ್ಲ ಎಂದು ಹೇಳಿದರು. “ಶಾಹಿದ್ ಅಫ್ರಿದಿ ಮತ್ತು ಇತರ ಆಟಗಾರರು ನನಗೆ ತುಂಬಾ ತೊಂದರೆ ಕೊಟ್ಟಿದ್ದಾರೆ, ಅವರು ನನ್ನೊಂದಿಗೆ ಆಹಾರ ಸೇವಿಸುತ್ತಿರಲಿಲ್ಲ. ಮತಾಂತರದ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದರು ಆದರೆ ನನ್ನ ಧರ್ಮವೇ ನನಗೆ ಸರ್ವಸ್ವ. ಶಾಹಿದ್ ಅಫ್ರಿದಿ ನನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಆಗಾಗ ಒತ್ತಾಯಿಸುತಿದ್ದ ಪ್ರಮುಖ ವ್ಯಕ್ತಿ. ಆದರೆ ನನ್ನನ್ನು ಬೆಂಬಲಿಸಿದ ಏಕೈಕ ವ್ಯಕ್ತಿ ಇಂಜಮಾಮ್-ಉಲ್-ಹಕ್,” ಎಂದು ಕನೇರಿಯಾ ಆಜ್ ತಕ್ಗೆ ತಿಳಿಸಿದರು.
ಕನೇರಿಯಾ ಅವರು 2000 ರಿಂದ 2010 ರವರೆಗೆ ಪಾಕಿಸ್ತಾನಕ್ಕಾಗಿ 61 ಟೆಸ್ಟ್ ಮತ್ತು 18 ODI ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್ನಲ್ಲಿ 261 ವಿಕೆಟ್ಗಳನ್ನು ಮತ್ತು ODI ಸ್ವರೂಪದಲ್ಲಿ 15 ವಿಕೆಟ್ಗಳನ್ನು ಪಡೆದರು. 42 ವರ್ಷದ ಮಾಜಿ ಕ್ರಿಕೆಟಿಗ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡಿದ ಎರಡನೇ ಹಿಂದೂ ವ್ಯಕ್ತಿ ಆಗಿದ್ದು . ಮೊದಲನೆಯವರು ಅನಿಲ್ ದಲ್ಪತ್ ಆಗಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಕನೇರಿಯಾ ಮೇಲೆ ಆರೋಪ ಹೊರಿಸಲಾಗಿತ್ತು. ಕೆಲವರ ಒತ್ತಡದಿಂದಾಗಿ ಆರೋಪಗಳನ್ನು ಒಪ್ಪಿಕೊಳ್ಳಬೇಕಾಯಿತು ಎಂದು ಅವರು ಹೇಳಿದರು.. “ನನ್ನ ಕೌಂಟಿ ಅವಧಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪ ಹೊರಿಸಲಾಯಿತು. ನಾನು ಬುಕ್ಕಿಯನ್ನು ಮಾತ್ರ ಭೇಟಿಯಾಗಿದ್ದೆ ಎಂದು ಒಪ್ಪಿಕೊಂಡೆ. ಆದರೆ ಆರೋಪಗಳನ್ನು ಒಪ್ಪಿಕೊಳ್ಳುವಂತೆ ಅವರು ನನ್ನ ಮೇಲೆ ಒತ್ತಡ ಹೇರಿದರು. ನಾನು ಹಿಂದೂ ಎಂಬ ಕಾರಣಕ್ಕೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ನನ್ನನ್ನು ಬೆಂಬಲಿಸಲಿಲ್ಲ. ಮಂಡಳಿಯು ನಾನು ಆಟವನ್ನು ಮುಂದುವರಿಸಿದರೆ, ನಾನು ಮುಸ್ಲಿಂ ಆಟಗಾರರ ದಾಖಲೆಗಳನ್ನು ಮುರಿಯುತ್ತೇನೆ ಎಂದು ಹೆದರುತ್ತಿದ್ದರು. ಪ್ರತಿಭೆಯ ವಿಷಯಕ್ಕೆ ಬಂದಾಗ ಅವರು ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿದಿದ್ದರು, ”ಎಂದು ಕನೇರಿಯಾ ಹೇಳಿದರು.
ಕನೇರಿಯಾ ಮಾಡಿರುವ ಈ ಹೇಳಿಕೆಗಳಿಗೆ ಅಫ್ರಿದಿ ಇದುವರೆಗೂ ಉತ್ತರ ನೀಡಿಲ್ಲ. ಪಾಕಿಸ್ತಾನದ ಮಾಜಿ ನಾಯಕ ದೇಶದಲ್ಲಿ ಹೆಚ್ಚು ಪ್ರಸಿದ್ಧ ವ್ಯಕ್ತಿ ಆಗಿದ್ದು ಅವರು ಆಟದ ದಿನಗಳಲ್ಲಿ ಅವರನ್ನು ‘ಬೂಮ್ ಬೂಮ್ ಅಫ್ರಿದಿ’ ಎಂದು ಕರೆಯಲಾಗುತ್ತಿತ್ತು . ಅಲ್ಲದೆ ಆಫ್ರಿದಿ ಈ ಹಿಂದೆ ತನ್ನ ಮನೆಯಲ್ಲಿ ಟಿವಿಯನ್ನು ಒಡೆದು ಹಾಕಿದ ಸುದ್ದಿಯೂ ಈಗ ವೈರಲ್ ಆಗುತ್ತಿದೆ. ಒಮ್ಮೆ ಶಾಹಿದ್ ಆಫ್ರಿದಿ ಮನೆಗೆ ಹಿಂತಿರುಗಿದಾಗ ಅವರ ಹೆಣ್ಣು ಮಕ್ಕಳು ಹಿಂದೂ ಸಂಪ್ರದಾಯದಂತೆ ಆರತಿ ಎತ್ತಿ ಪೂಜೆ ಮಾಡುವ ಅಣಕು ಆಟ ಆಡುತಿದ್ದರು. ಭಾರತದ ಜನಪ್ರಿಯ ಹಿಂದೂ ಆಚರಣೆಗಳು ಟಿವಿ ಮೂಲಕ ಅಲ್ಲಿನ ಮಕ್ಕಳಿಗೂ ತಿಳಿದಿತ್ತು. ಮಕ್ಕಳ ಆಟವನ್ನು ನೋಡಿ ಕೆಂಡಾಮಂಡಲನಾದ ಮತಾಂಧ ಆಫ್ರಿದಿ ಮನೆಯ ಟಿವಿಯನ್ನೇ ಒಡೆದು ಹಾಕಿದ್ದಲ್ಲದೆ ಹಿಂದೂಗಳ ಧಾರಾವಾಹಿಗಳನ್ನು ನೋಡದಂತೆಯೂ ತಾಕೀತು ಮಾಡಿದ್ದ.