ಬೆಂಗಳೂರು: ಈ ಬಾರಿ ಕರ್ನಾಟಕ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ರಾಜಕೀಯ ಪಕ್ಷಗಳು ತಂತ್ರಗಾರಿಕೆ ಶುರು ಮಾಡಿಕೊಂಡಿವೆ. ಇವುಗಳ ನಡುವೆ ರೆಸಾರ್ಟ್ ರಾಜಕೀಯವೂ ಆರಂಭವಾಗುವ ಸಾಧ್ಯತೆಗಳಿವೆ.
ಇಷ್ಟರವರೆಗೆ ಬಂದಿರುವ ಸಮೀಕ್ಷೆಗಳ ಪ್ರಕಾರ 8 ಸಮೀಕ್ಷೆಗಳು ಕಾಂಗ್ರೆಸ್ ಮುನ್ನಡೆಯಲ್ಲಿರಲಿದೆ ಎಂದಿದ್ದು, ಇನ್ನು 3 ಸಮೀಕ್ಷೆಗಳು ಬಿಜೆಪಿ ಮುನ್ನಡೆ ಎಂದಿವೆ. ಬಿಜೆಪಿ- ಕಾಂಗ್ರೆಸ್ ಎರಡರಲ್ಲಿ ಯಾವುದೇ ಒಂದು ಪಕ್ಷ ಬಹುಮತ (113) ಪಡೆದರೆ ಯಾವುದೇ ಜಂಜಾಟ ಇರುವುದಿಲ್ಲ. ಆದರೆ ಯಾವುದೇ ಒಂದು ಪಕ್ಷಕ್ಕೂ ಬಹುಮತ ಬರದಿದ್ದರೆ ಏನಾಗಲಿದೆ?
ಈಗಾಗಲೇ ಈ ಪರಿಸ್ಥಿತಿಯನ್ನು ಎದುರಿಸಲು ರಾಜಕೀಯ ಪಕ್ಷಗಳು ತಮ್ಮದೇ ಆದ ಸಿದ್ದತೆಗಳನ್ನು ನಡೆಸುತ್ತಿವೆ. ಮತ್ತೇನಾದರೂ 2018ರಂತೆ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬಂದರೆ ಬಿಜೆಪಿ-ಕಾಂಗ್ರೆಸ್ ಎರಡರಲ್ಲಿ ಒಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬೇಕು.
ಕಾಂಗ್ರೆಸ್ ಅಥವಾ ಬಿಜೆಪಿ ಬಹುಮತ ಸಿಗಲು ಕೆಲವೇ ಸೀಟು ಕಡಿಮೆ ಇದ್ದರೆ ಮೊದಲ ಹಂತದಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಗಾಳ ಹಾಕುತ್ತಾರೆ. ಆದರೆ ಯಾವುದೇ ಪಕ್ಷಕ್ಕೆ 110ಕ್ಕಿಂತ ಕಡಿಮೆ ಸ್ಥಾನಗಳು ಸಿಕ್ಕರೆ ಜೆಡಿಎಸ್ ಬೆಂಬಲ ಬೇಕಾಗುತ್ತದೆ. ಈಗಾಗಲೇ ಈ ಬಗ್ಗೆ ಮಾತನಾಡಿರುವ ಜೆಡಿಎಸ್ ನಾಯಕ ಹೆಚ್. ಡಿ. ಕುಮಾರಸ್ವಾಮಿ, ನಮ್ಮ ಷರತ್ತುಗಳಿಗೆ ಸಮ್ಮತಿಸಿದವರಿಗೆ ನಾವು ಬೆಂಬಲಿಸುತ್ತೇವೆ ಎಂದಿದ್ದಾರೆ.
ಏನಾದರೂ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳೂ 90 ರಿಂದ 100 ಸ್ಥಾನಗಳನ್ನು ಮಾತ್ರ ಗಳಿಸಿ, ಜೆಡಿಎಸ್ 20 ಸ್ಥಾನಗಳನ್ನು ಪಡೆದುಕೊಂಡರೆ, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳೂ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸಂಚು ಹಾಕಬೇಕಾಗುತ್ತದೆ.
ಇನ್ನು ಈ ಬಾರಿಯ ಚುನಾವಣಾ ಫಲಿತಾಂಶದ ಬಗ್ಗೆ ಎಲ್ಲಾ ಪಕ್ಷದವರಿಗೂ ಆತಂಕ ಮನೆಮಾಡಿದೆ. ಆಡಳಿತರೂಢ ಬಿಜೆಪಿಗೂ ಕೂಡ ಈ ಬಾರಿ ಬಹುಮತ ಪಡೆಯುವ ಸಂಶಯ ಇದೆ. ಈ ನಿಟ್ಟಿನಲ್ಲಿ ಬಿಜೆಪಿ ನಾಯಕರು ಬೆಳಗ್ಗೆಯಿಂದಲೇ ಆಪರೇಷನ್ ಕಮಲದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಸೇರಿದಂತೆ ಪ್ರಮುಖ ನಾಯಕರು ಭೇಟಿ ನೀಡಿದ್ದು, ರಾಜಕೀಯ ಬದಲಾವಣೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಿಜೆಪಿ ಈ ಬಾರಿ ಮೂರು ನಾಲ್ಕು ಸೀಟು ಕಡಿಮೆಯಾಗಬಹುದು ಈ ನಿಟ್ಟಿನಲ್ಲಿ ಪಕ್ಷೇತರ ಅಭ್ಯರ್ಥಿಗಳ ಪಟ್ಟಿ ಸಿದ್ಧ ಮಾಡಿಕೊಂಡಿದ್ದು, ಹೊಸದುರ್ಗದ ಗೂಳಿಹಟ್ಟಿ ಶೇಖರ್, ಚನ್ನಗಿರಿಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್, ಅರಕಲಗೂಡು ಕೃಷ್ಣೇಗೌಡ, ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ, ಬೆಂಗಳೂರಿನ ಪುಲಿಕೇಶಿ ನಗರದ ಅಖಂಡ ಶ್ರೀನಿವಾಸ ಮೂರ್ತಿ, ಕುಂದಗೋಳದ ಚಿಕ್ಕನಗೌಡರ್, ಹರಪನಹಳ್ಳಿಯ ಲತಾ ಮಲ್ಲಿಕಾರ್ಜುನ್ ಗೆಲ್ಲುವ ಅಭ್ಯರ್ಥಿಗಳನ್ನು ಬಿಜೆಪಿಗೆ ಸೆಳೆದು ಸರ್ಕಾರ ರಚಿಸಬೇಕು ಎಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇವೆಲ್ಲದರ ನಡುವೆ ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲದ ಭೀತಿ ಕಾಂಗ್ರೆಸ್ ಗೆ ಕಾಡಲಿದ್ದು, ತನ್ನ ಅಭ್ಯರ್ಥಿಗಳನ್ನು ಭದ್ರಮಾಡಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಫಲಿತಾಂಶದ ಬೆನ್ನಲ್ಲೇ ಗೆದ್ದ ಅಭ್ಯರ್ಥಿಗಳನ್ನು ಬೆಂಗಳೂರಿಗೆ ಕರೆ ತರಲು ಜಿಲ್ಲಾಧ್ಯಕ್ಷರಿಗೆ ಕಾಂಗ್ರೆಸ್ ಸೂಚನೆ ರವಾನಿಸಿದೆ. ಅದೇನೇ ಇದ್ದರೂ ನಾಳೆಯ ಮತಎಣಿಕೆಯ ನಂತರವೇ ಸ್ಪಷ್ಟ ಚಿತ್ರಣಸಿಗಲಿದೆ.