ಮನೆಯ ಹಿತ್ತಲಲ್ಲಿ ಅಂಗಳದಲ್ಲಿ ಕಳೆ ಗಿಡದಂತೆ ಬೆಳೆಯುವ ನಾಚಿಕೆ ಮುಳ್ಳನ್ನು ನೋಡಿದ ಕೂಡಲೇ ಹೆಚ್ಚಿನವರು ಕಿತ್ತೋಗೆಯುತ್ತಾರೆ. ಕಾರಣ ಈ ಗಿಡವು ಹೆಚ್ಚು ಬೀಜಗಳನ್ನು ಹೊಂದಿದ್ದು ಆ ಬೀಜಗಳು ಒಣಗಿದ ಬಳಿಕ ಗಾಳಿಯಲ್ಲಿ ಹೋಗಿ ಎಲ್ಲ ಕಡೆ ಸುಲಭವಾಗಿ ಬೆಳೆಯುತ್ತವೆ. ಇದರಲ್ಲಿ ಸಣ್ಣ ಸಣ್ಣ ಮುಳ್ಳುಗಳಿದ್ದು, ಬರಿಗಾಲಿನಲ್ಲಿ ಓಡಾಡಿದರೆ ಚುಚ್ಚಿಕೊಳ್ಳುತ್ತವೆ.
ಗಿಡವನ್ನುಮುಟ್ಟಿದ ಕೂಡಲೇ ಮುದುಡಿ ಕೊಳ್ಳುವುದರಿಂದ ಮುಟ್ಟಿದರೆ ಮುನಿ ಎಂದು ಕೂಡ ಕರೆಯುತ್ತಾರೆ. ಆಯುರ್ವೇದದಲ್ಲಿ ಮುಟ್ಟಿದರೆ ಮುನಿ ಸಸ್ಯಕ್ಕೆ ವಿಶೇಷ ಮಹತ್ವವಿದೆ. ಇದು ಹಲವಾರು ಕಾಯಿಲೆಗಳಿಗೆ ಮನೆ ಮದ್ದಾಗಿದೆ.
ಮುಟ್ಟಿದರೆ ಮುನಿ ಗಿಡದ ಔಷಧಿ ಗುಣಗಳು:
ಊತವನ್ನು ಕಡಿಮೆಮಾಡಲು :
ಊತ ಉಂಟಾದಾಗ ನಾಚಿಕೆ ಮುಳ್ಳನ್ನು ಗಿಡ ಸಮೇತವಾಗಿ ಅರೆದು, ಅದನ್ನು ಊತವಾದ ಜಾಗಕ್ಕೆ ಹಚ್ಚಿ, ಬಟ್ಟೆಯಿಂದ ಕಟ್ಟಿದರೆ ಊತ ಬೇಗನೆ ಕಡಿಮೆಯಾಗುತ್ತದೆ.
ಮುಟ್ಟಿನ ರಕ್ತಸ್ರಾವ ನಿಯಂತ್ರಿಸಲು:
ಸಾಮಾನ್ಯವಾಗಿ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಅತ್ಯಧಿಕವಾಗಿರುತ್ತದೆ. ಇದನ್ನು ಕಡಿಮೆಮಾಡಲು, ನಾಚಿಕೆಮುಳ್ಳಿನ ಗಿಡ ಸಹಾಯಕಾರಿ , ನಾಚಿಕೆಮುಳ್ಳನ್ನು ನೀರಿನೊಂದಿಗೆ ಚೆನ್ನಾಗಿ ಕುದಿಸಿ, ಅದಕ್ಕೆ 1 ಚಿಟಿಕೆ ಸ್ಪಟಿಕನ್ನು ಸೇರಿಸಿ ದಿನಕ್ಕೆ 2 ರಿಂದ 3 ಬಾರಿ ಸೇವಿಸಬೇಕು. ಅಥವಾ ಮುಟ್ಟಿದರೆ ಮುನಿ ಗಿಡದ ಕಷಾಯ ಮಾಡಿ ಕುಡಿಯುತ್ತ ಇದ್ದರೆ, ಸಮಸ್ಯೆ ಪರಿಹಾರವಾಗುತ್ತದೆ
ಮಲಬದ್ದತೆಯನ್ನು ನಿರ್ಮೂಲನೆ ಮಾಡುತ್ತದೆ:
ನಾಚಿಕೆಮುಳ್ಳಿನ ಎಲೆ ಮತ್ತು ಬೇರನ್ನು ಚೆನ್ನಾಗಿ ಜಜ್ಜಿ, ಅದರ ರಸ ತೆಗೆದು 2 ರಿಂದ 3 ಚಮಚ ರಸವನ್ನು, 1 ಲೋಟ ನೀರಿಗೆ ಹಾಕಿ ಕುಡಿಯುವುದರಿಂದ, ಯಾವುದೇ ಅಡ್ಡ ಪರಿಣಾಮವಾಗದೆ ಮಲಬದ್ಧತೆ ಕಡಿಮೆಯಾಗುತ್ತದೆ.
ಬಾಣಂತಿಯರ ಹೊಟ್ಟೆ ಕರಗಿಸಲು ಸಹಕಾರಿ:
ಬಾಣಂತನ ಆದ ಮೇಲೆ ಕೆಲವರಿಗೆ ಹೊಟ್ಟೆ ಕರಗಿಸುವುದು ಹೇಗೆ ಎಂಬ ಚಿಂತೆ ಕಾಡುತ್ತದೆ ಇದಕ್ಕೆ ನಾಚಿಕೆ ಮುಳ್ಳಿನ ಗಿಡ ತುಂಬಾ ಸಹಕಾರಿಯಾಗಿದೆ. ಮುಟ್ಟಿದರೆ ಮುನಿ ಗಿಡದ ಎಲೆಯ ರಸವನ್ನು ತೆಗೆದು, ಅದನ್ನು ಕೈಗೆ ಹಾಕಿಕೊಂಡು ನಂತರ ಹೊಟ್ಟೆಯ ಭಾಗಕ್ಕೆ ಲೇಪಿಸಿ, ಒಂದೆರೆಡು ನಿಮಿಷ ಮಸಾಜ್ ಮಾಡುವುದರಿಂದ ಹೊಟ್ಟೆ ಕರಗಿಸಲು ಸಹಾಯಮಾಡುತ್ತದೆ.
ಮೊಡವೆಗಳ ನಿವಾರಣೆ:
ಮುಖದ ಸೌಂದರ್ಯವನ್ನು ಹಾಳುಮಾಡುವ ಮೊಡವೆಗಳನ್ನು ನಿಯಂತ್ರಿಸಲು, ನಾಚಿಕೆ ಮುಳ್ಳು ಗಿಡದ ರಸವನ್ನು ಮೊಡವೆಗಳ ಜಾಗಕ್ಕೆ ಲೇಪಿಸುವುದರಿಂದ, ಮೊಡವೆಗಳು ನಿವಾರಣೆಯಾಗುತ್ತವೆ.
ರಕ್ತಸ್ರಾವ ತಡೆಗೆ:
ಕೈಗಳಿಗೆ ಅಥವಾ ಕಾಲುಗಳಿಗೆ ಏನಾದರೂ ಗಾಯವಾಗಿ ರಕ್ತಸ್ರಾವ ವಾಗುತ್ತಿದ್ದರೆ ನಾಚಿಕೆ ಮುಳ್ಳಿನ ಎಲೆಯನ್ನು ಜಜ್ಜಿ, ಗಾಯಕ್ಕೆ ಹಚ್ಚಿದರೆ, ಕೂಡಲೇ ರಕ್ತ ಸೋರುವಿಕೆ ಕಡಿಮೆಯಾಗಿ, ಗಾಯವು ಬೇಗನೆ ವಾಸಿಯಾಗುತ್ತದೆ.
ಮೂಲವ್ಯಾಧಿ ನಿವಾರಣೆ:
ನಾಚಿಕೆ ಮುಳ್ಳಿನ ಗಿಡವನ್ನು ಒಣಗಿಸಿ, ಪುಡಿ ಮಾಡಿಟ್ಟುಕೊಂಡು, 1 ಲೋಟ ನೀರಿಗೆ ಈ ಪುಡಿಯನ್ನು ಸೇರಿಸಿ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಮೂಲವ್ಯಾಧಿ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು