ಹೊಸದಿಲ್ಲಿ: ಮುಸ್ಲಿಮರ ಶೇ 4ರ ಮೀಸಲಾತಿಯನ್ನು ರದ್ದುಗೊಳಿಸಿ ಲಿಂಗಾಯತ ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರದ ಅನುಷ್ಠಾನಕ್ಕೆ ನೀಡಿರುವ ಮಧ್ಯಂತರ ತಡೆ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಸ್ತರಣೆ ಮಾಡಿದೆ. ಮುಂದಿನ ಆದೇಶದ ವರೆಗೂ ತಡೆಯಾಜ್ಞೆ ಜಾರಿಯಲ್ಲಿರಲಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಇದರೊಂದಿಗೆ, ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುವ ಮುನ್ನಾ ದಿನವೇ ನೂತನ ಮೀಸಲಾತಿ ನೀತಿ ಅನುಷ್ಠಾನಕ್ಕೆ ಅಡ್ಡಿಯಾದಂತಾಗಿದೆ.
ಮುಸ್ಲಿಮರ ಮೀಸಲಾತಿ ರದ್ದತಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ. ಎಂ. ಜೋಸೆಫ್, ಬಿವಿ ನಾಗರತ್ನ ಹಾಗೂ ಅಸನುದ್ದೀನ್ ಅಮಾನುಲ್ಲಾಜ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
2ಸಿ, 2ಡಿ ಹೊಸ ಪ್ರವರ್ಗ ಸೃಷ್ಟಿಗೆ ಮುಂದಾಗಿರುವ ರಾಜ್ಯ ಸರ್ಕಾರ ಅದಕ್ಕಾಗಿ ಮುಸ್ಲಿಂ ಸಮುದಾಯಕ್ಕೆ 2ಬಿ ಅಡಿಯಲ್ಲಿ ನೀಡಲಾಗುತ್ತಿದ್ದ ಶೇ 4ರ ಮೀಸಲಾತಿ ರದ್ದು ಮಾಡಿದೆ. ಇದಕ್ಕೆ ಪ್ರತಿಯಾಗಿ ಮುಸ್ಲಿಂ ಸಮುದಾಯವನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಅಡಿ ಪರಿಗಣಿಸಲು ನಿರ್ಧರಿಸಿತ್ತು. ಬಳಿಕ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ತಲಾ ಶೇ 2ರ ಮೀಸಲಾತಿ ನೀಡುವ ಬಗ್ಗೆ ತೀರ್ಮಾನ ಕೈಗೊಂಡಿತ್ತು.