ಬೆಂಗಳೂರು: ಸಂಸತ್ ಭವನದ ಒಳಗೆ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ಯುವ ಕಾಂಗ್ರೆಸ್ ವತಿಯಿಂದ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ವೇಳೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಪೋಸ್ಟರ್ ಗಳನ್ನು ಸುಟ್ಟು ಚಪ್ಪಲಿಯಿಂದ ಥಳಿಸಿದರು. ಪ್ರತಾಪ್ ಸಿಂಹ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ಕಾರ್ಯಕರ್ತರು, ಸಂಸತ್ತಿನ ಒಳಗೆ ಭದ್ರತಾ ಉಲ್ಲಂಘನೆ ಮಾಡಲು ಆರೋಪಿಗಳನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದರು.
ಆದರೆ, ಪೊಲೀಸರು ಕಾರ್ಯಪ್ರವೃತ್ತರಾಗಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಸಂಸದ ಪ್ರತಾಪ್ ಸಿಂಹ ಅವರು ತನಿಖೆ ಎದುರಿಸಬೇಕು ಮತ್ತು ಅಲ್ಲಿಯವರೆಗೆ ಅವರನ್ನು ಅಮಾನತುಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
“ಸರಿಯಾದ ವಿಚಾರಣೆ ಮತ್ತು ಹಿನ್ನೆಲೆ ಪರಿಶೀಲನೆಯ ನಂತರ ನಾವು ಪಾಸ್ ಗಳನ್ನು ನೀಡುತ್ತೇವೆ. ಈ ಘಟನೆಗೆ ಸಂಸದ ಪ್ರತಾಪ್ ಸಿಂಹ ನೇರ ಹೊಣೆಯಾಗಬೇಕು. ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಮತ್ತು 2001 ರಲ್ಲಿ ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ನಡೆದ ದಿನವೇ ಈ ಘಟನೆ ಸಂಭವಿಸಿರುವುದರಿಂದ, ಈ ಘಟನೆಯ ಹಿಂದಿನ ಉದ್ದೇಶವನ್ನು ತನಿಖೆ ಮಾಡಬೇಕಾಗಿದೆ. ನಾಲ್ವರು ದಾಳಿಕೋರರಲ್ಲಿ ಇಬ್ಬರಿಗೆ ಮೈಸೂರು ಸಂಪರ್ಕವಿದ್ದು, ಸಂಸದ ಪ್ರತಾಪ್ ಸಿಂಹ ಅವರೇ ಜವಾಬ್ದಾರಿ ಹೊರಬೇಕು ಎಂದು ಯತೀಂದ್ರ ಹೇಳಿದರು.