ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ‘ಸರ್ವಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ’ ಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಗರದಲ್ಲಿ ಮಂಗಳವಾರ ಬಿಡುಗಡೆ ಮಾಡಿದರು.
ಪ್ರಣಾಳಿಕೆ ಬಿಡುಗಡೆ ಮಾತನಾಡಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರ ನೇತೃತ್ವದ ಸಮಿತಿ ಅತ್ಯುತ್ತಮ ಪ್ರಣಾಳಿಕೆ ತಯಾರು ಮಾಡಿದ್ದು, ಇದು ಜನರಿಗೆ ನಿರಾಳತೆ ನೀಡಲಿದೆ. ಕಾಂಗ್ರೆಸ್ ನುಡಿದಂತೆ ನಡೆಯುತ್ತಾ ಬಂದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿದ್ದಾಗ ನಾವು 165 ಭರವಸೆಗಳನ್ನು ನೀಡಿ 158 ಭರವಸೆ ಈಡೇರಿಸಿದ್ದೇವೆ. ಆದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ತಮ್ಮ ಪ್ರಣಾಳಿಕೆ ಜಾರಿ ಮಾಡಲು ಪ್ರಾಮಾಣಿಕತೆ ತೋರಲಿಲ್ಲ. ಈಗ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.
ನಮ್ಮ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಜ್ಯೋತಿ 200 ಯುನಿಟ್ ವಿದ್ಯುತ್ ಉಚಿತ, ಯುವನಿಧಿ ಮೂಲಕ ಪದವೀಧರರಿಗೆ 3000 ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ಮಾಸಿಕ ನಿರುದ್ಯೋಗ ಭತ್ಯೆ. ರಾಜ್ಯದಲ್ಲಿ 2.50 ಲಕ್ಷ ಸರ್ಕಾರಿ ಹುದ್ದೆ ಹಾಗೂ ಕೇಂದ್ರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇದ್ದರೂ ತುಂಬುತ್ತಿಲ್ಲ. ಹೀಗಾಗಿ ನಿರುದ್ಯೋಗ ಭತ್ಯೆ ನೀಡಲು ತೀರ್ಮಾನಿಸಿದ್ದೇವೆ. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಡ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತ. ಗೃಹಲಕ್ಷ್ಮಿ ಯೋಜನೆ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಪ್ರತಿ ತಿಂಗಳು ಮನೆಯೊಡತಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಪ್ರೋತ್ಸಾಹ ಧನ. ಇನ್ನು ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ ಸಾರ್ವಜನಿಕ ಬಸ್ ಗಳಲ್ಲಿ ಉಚಿತ ಪ್ರಯಾಣ. ಇದನ್ನು ನಾವು ಖಂಡಿತವಾಗಿ ಜಾರಿ ಮಾಡುತ್ತೇವೆ ಎಂದು ನಾನು ಗ್ಯಾರಂಟಿ ನೀಡುತ್ತೇನೆ. ಇದನ್ನು ಮೊದಲ ಸಚಿವ ಸಂಪುಟದಲ್ಲಿ ಜಾರಿ ಮಾಡಲಾಗುವುದು. ನನಗೆ ಬೇರೆ ರಾಜ್ಯಗಳಿಂದ ದೂರವಾಣಿ ಕರೆ ಹಾಗೂ ಪತ್ರ ಬರುತ್ತಿದ್ದು, ನಿಮ್ಮ ಗ್ಯಾರಂಟಿ ಕಾರ್ಡ್ ಹೆಚ್ಚು ಪರಿಣಾಮಕಾರಿಯಾಗಿದ್ದು, ಇದರ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಜನ. ನಾವು ಟೊಳ್ಳು ಭರವಸೆ ನೀಡುವುದಿಲ್ಲ ಎಂದರು.
ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮಾತನಾಡಿ ಸರ್ವಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ ಎಂಬ ಶಿರ್ಷಿಕೆ ಇಟ್ಟಿದ್ದು, ಕಾಂಗ್ರೆಸ್ ಬರಲಿದ, ಪ್ರಗತಿ ತರಲಿದೆ ಎಂಬ ಘೋಷವಾಕ್ಯವನ್ನು ಇಟ್ಟುಕೊಂಡಿದ್ದೇವೆ. ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಅಭಿವೃದ್ಧಿ ಮನದಲ್ಲಿಟ್ಟುಕೊಂಡು ಯುವಕರು, ಮಹಿಳೆಯರಿಗೆ ಆದ್ಯತೆ ನೀಡಿದ್ದೇವೆ. ಮುಂದಿನ 25 ವರ್ಷಗಳ ದೂರದೃಷ್ಟಿಯೊಂದಿಗೆ ಈ ಪ್ರಣಾಳಿಕೆಯನ್ನು ತಯಾರು ಮಾಡಿದ್ದೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ ಕಾಂಗ್ರೆಸ್ ತನ್ನ ಯೋಜನೆಗಳನ್ನು ಜಾರಿಗೆ ಬದ್ಧವಾಗಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಪ್ರಣಾಳಿಕೆ ಪೂರಕವಾಗಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಮೈಸೂರು ಕರ್ನಾಟಕ ಹಾಗೂ ಗ್ಲೋಬಲ್ ಬೆಂಗಳೂರು ನಿರ್ಮಾಣಕ್ಕೆ ಈ ಪ್ರಣಾಳಿಕೆ ಅಡಿಪಾಯ ಹಾಕಿದೆ. ಬೆಂಗಳೂರು ನಗರ 32% ನಷ್ಟು ಜನಸಂಖ್ಯೆ ಇದೆ. ಬೆಂಗಳೂರಿನ ಹಳೆಯ ಭವ್ಯ ವೈಭವ ಮರು ಸ್ಥಾಪನೆಗೆ, ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗಗಳು ಅದಿಕಾರಕ್ಕೆ ಬಂದಂತೆ. ಈ ಸಂದರ್ಭದಲ್ಲಿ ನಿಮ್ಮ ಸಹಕಾರ ಬಹಳ ಮುಖ್ಯ. ನಾವು ಬಸವಣ್ಣನ ನಾಡಿನಲ್ಲಿದ್ದು, ನಾವು ನುಡಿದಂತೆ ನಡೆಯುತ್ತೇವೆ. ಬಸವಣ್ಣ, ಕುವೆಂಪು, ನಾರಾಯಣ ಗುರುಗಳ ಆಚಾರ ವಿಚಾರಗಳು ಕಾಂಗ್ರೆಸ್ ನ ಆಚಾರ ವಿಚಾರಗಳಾಗಿದೆ. ವಿಶ್ವ ಮಾನವ ತತ್ವದಲ್ಲಿ ಕಾಂಗ್ರೆಸ್ ಹೆಜ್ಜೆ ಇಡುತ್ತಿದೆ. ರಾಜ್ಯದ ಜನರಿಗೆ ಸೇವೆ ಮಾಡುವ ಅವಕಾಶವನ್ನು ನಮಗೆ ನೀಡಬೇಕು ಎಂದು ಮನವಿ ಮಾಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಮಾಜಿ ಸಚಿವೆ ರಾಣಿ ಸತೀಶ್, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ, ವಕ್ತಾರ ಗೌರವ್ ವಲ್ಲಭ್, ಪ್ರೊ. ರಾಜೀವ್ ಗೌಡ, ಪ್ರೊ ಕೆ ಈ ರಾಧಾಕೃಷ್ಣ, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಣಾಳಿಕೆ ಭರವಸೆಗಳನ್ನು ಈಡೇರಿಸುವ ಪ್ರಮಾಣ ಸಂಕೇತವಾಗಿ ಪ್ರಣಾಳಿಕೆ ಹೊತ್ತಿಗೆಗೆ ಅರಿಶಿನ-ಕುಂಕುಮ ಹಚ್ಚಿ, ವೀಳ್ಯದೆಲೆ ಅಡಿಕೆ ಇಟ್ಟು ಸಾಂಪ್ರದಾಯಿಕವಾಗಿ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.