ಬೇಸಿಗೆ ಬಂತೆಂದರೆ ತಡೆಯಲಾರದಷ್ಟು ಮೈ ಬೆವರುವುದು. ಅತಿಯಾದ ಬೆವರುವುದರಿಂದ ಬೆವರು ಸಾಲೆಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಚರ್ಮದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳಾಗಿ ನಂತರ ಇದರಿಂದ ತುರಿಕೆ ಉಂಟಾಗಬಹುದು. ಎಲ್ಲಾ ಪ್ರಾಯದವರನ್ನು ಕಾಡುವ ಬೆವರು ಸಾಲೆ ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಕಿರಿಕಿರಿ ಉಂಟು ಮಾಡುತ್ತದೆ.
ಸಾಮಾನ್ಯವಾಗಿ ಬೇಸಿಗೆಯ ದಿನಗಳು ಮುಗಿಯುತ್ತಿದ್ದಂತೆಯೇ ಬೆವರುಸಾಲೆಯೂ ತನ್ನಿಂತಾನೇ ವಾಸಿಯಾಗುತ್ತದೆ. ಆದರೆ ಅಲ್ಲಿಯವರೆಗೆ ಮೈ ತುರಿಸಿಕೊಳ್ಳುತ್ತಾ ಬದಲು ಸುಲಭ ಮನೆಮದ್ದುಗಳನ್ನು ಉಪಯೋಗಿಸಿ ಈ ತೊಂದರೆಯಿಂದ ಪರಿಹಾರ ಪಡೆಯಬಹುದು.
ಲೋಳೆಸರ:
ಲೋಳೆಸರ ತ್ವಚೆಗೆ ತಂಪು ನೀಡುವುದರಿಂದ ಬೆವರುಸಾಲೆಗೂ ಅತ್ಯುತ್ತಮ ಔಷಧಿಯಾಗಿದೆ. ಇದರಲ್ಲಿರುವ ಉರಿಯೂತ ನಿವಾರಕ ಮತ್ತು ಗಾಯಗಳನ್ನು ಗುಣಪಡಿಸುವ ಗುಣಗಳು ಚರ್ಮದ ತುರಿಕೆಯನ್ನು ಕಡಿಮೆ ಮಾಡುತ್ತದೆ.
ಬಳಸುವ ವಿಧಾನ:
ಲೋಳೆಸರವನ್ನು ತೆರೆದು ಅದರ ಒಳಗಿನ ತಿರುಳನ್ನು ನೆರವಾಗಿ ಬೆವರು ಸಾಲೆ ಇರುವ ಜಾಗಗಲಿಗೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷದ ನಂತರ ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ ಹೀಗೆ ದಿನಕ್ಕೆ ಎರಡು ಬಾರಿ ಒಂದು ವಾರಗಳವರೆಗೆ ಹಚ್ಚಬೇಕು.
ಶ್ರೀಗಂಧದ ಪುಡಿ :
ಗಂಧದ ಕೊರಡ ಇಲ್ಲವಾದರೆ ಪುಡಿಯನ್ನು ಬಳಸುವುದರಿಂದ ಚರ್ಮವನ್ನು ತಂಪಾಗಿಸುತ್ತದೆ.ತ್ವಚೆಗೆ ಕಾಂತಿ ಮತ್ತು ಆರೈಕೆಯನ್ನು ನೀಡುವ ಜೊತೆಗೇ ಉರಿಯನ್ನೂ ಕಡಿಮೆ ಮಾಡುತ್ತದೆ.
ಬಳಸುವ ವಿಧಾನ:
ಎರಡು ಚಮಚ ಗಂಧದ ಪುಡಿ ಅಥವಾ ಕೊರಡನ್ನು ತೇದಿದ ಲೇಪವನ್ನು ಒಂದು ಚಿಕ್ಕ ಚಮಚ ಕೆನೆಭರಿತ ತಣ್ಣನೆಯ ಹಾಲಿನೊಂದಿಗೆ ಸೇರಿಸಿ ತೆಳುವಾಗಿ ಬೆವರುಸಾಲೆಯ ಮೇಲೆ ಲೇಪಿಸಿ. ಈ ಲೇಪ ಪೂರ್ಣವಾಗಿ ಒಣಗುವವರೆಗೂ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.
ಐಸ್ಕ್ಯೂಬ್:
ಅತಿಯಾದ ತುರಿಕೆಯಾಗಿದ್ದರೆ ತುರಿಸಿಕೊಳ್ಳುವ ಬದಲು ತಕ್ಷಣವೇ ಆ ಭಾಗದ ಮೇಲೆ ಐಸ್ಕ್ಯೂಬ್ನ್ನು ಒತ್ತಿ ಇರಿಸಿದರೆ ಚರ್ಮಕ್ಕೆ ತಕ್ಷಣವೇ ತಂಪಾಗುತ್ತದೆ. ಹಾಗೂ ಉರಿ ತಕ್ಷಣವೇ ಕಡಿಮೆಯಾಗುತ್ತದೆ.
ಬಳಸುವ ವಿಧಾನ:
ಒಂದು ಸ್ವಚ್ಛಬಟ್ಟೆಯಲ್ಲಿ ಐಸ್ಕ್ಯೂಬ್ನ್ನು ಸುತ್ತಿ ಬೆವರುಸಾಲೆ ಎದುರಾದ ಭಾಗದ ಮೇಲೆ ಹತ್ತು ನಿಮಿಷ ಇರಿಸಿ. ದಿನಕ್ಕೆರಡು ಅಥವಾ ಮೂರು ಬಾರಿ ಪುನರಾವರ್ತಿಸಿ.
ಕಹಿಬೇವಿನ ಎಲೆಗಳು:
ಬೇವಿನ ಎಲೆಗಳಲ್ಲಿ ಉರಿಯೂತ ಗುಣಪಡಿಸುವ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಈ ಗುಣಗಳು ಬೆವರುಸಾಲೆಗೆ ಒಳಗಾದ ಚರ್ಮದ ತುರಿಕೆ ಮತ್ತು ಉರಿಯನ್ನು ತಕ್ಷಣವೇ ಕಡಿಮೆನಾಡುತ್ತದೆ.
ಬಳಸುವ ವಿಧಾನ:
ಸ್ವಲ್ಪ ಕಹಿಬೇಬಿನ ಎಲೆಗಳನ್ನು ನುಣ್ಣಗೆ ಅರೆದು ಈ ಲೇಪವನ್ನು ಬೆವರುಸಾಲೆಗೆ ಒಳಗಾಗಿದ್ದ ಭಾಗದ ಮೇಲೆ ತೆಳುವಾಗಿ ಸವರಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಹಾಗೆಯೇ ಸ್ನಾನದ ನೀರಿನಗೆ ಕೊಂಚ ಕಹಿಬೇವಿನ ಎಲೆಗಳನ್ನು ಹಾಕಿ ಈ ನೀರಿನಿಂದ ಸ್ನಾನ ಮಾಡಿಕೊಳ್ಳಬಹುದು.
ಮೊಸರು
ಮೊಸರನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮಕ್ಕೆ ತಂಪನ್ನು ನೀಡುತ್ತದೆ. ಆದರಿಂದ ಮೊಸರಿನಿಂದ ಬೆವರುಸಾಲೆಯ ಚುಚ್ಚುವಿಕೆ ಮತ್ತು ತುರಿಕೆ ಕಡಿಮೆಯಾಗುತ್ತದೆ. ಹಾಗೆಯೇ ಮೊಸರಿನಲ್ಲಿ ಶಿಲೀಂಧ್ರ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳೂ ಇದ್ದು ಚರ್ಮಕ್ಕೆ ತೊಂದರೆ ಮಾಡುವ ಹಲವು ಬಗೆಯ ಬ್ಯಾಕ್ಟೀರಿಯಾಗಳಿಂದ ರಕ್ಷಣೆ ಮಾಡುತ್ತದೆ.
ಬಳಸುವ ವಿಧಾನ:
ಮೊಸರನ್ನು ತಣ್ಣಗಿದ್ದಂತೆಯೇ ತೆಳುವಾಗಿ ಬೆವರುಸಾಲೆ ಎದುರಾಗಿರುವ ತ್ವಚೆಯ ಭಾಗದ ಮೇಲೆ ಲೇಪಿಸಿ ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.
ಬೆವರುಸಾಲೆ ಬರದಂತೆ ತಡೆಗಟ್ಟಲು ಕೆಲವು ಸಲಹೆಗಳು:
ಬೆಳಿಗ್ಗೆ ಮತ್ತು ರಾತ್ರಿ ತಣ್ಣೀರಿನ ಅಥವಾ ಉಗುರು ಬೆಚ್ಚಗಿನ ನೀರಿನ ಸ್ನಾನ. ಹೆಚ್ಚು ಬೆವರುವ ಕಂಕುಳು, ಕುತ್ತಿಗೆ, ತೊಡೆ ಸಂಧಿ, ದೇಹದ ಹಿಂಭಾಗ, ಮೊಣಕಾಲ ಸಂಧಿ, ಬೆರಳು ಸಂಧಿ ಗಳನ್ನು ಮೆಲುವಾಗಿ ತಿಕ್ಕಿ ಸ್ನಾನ ಮಾಡಿ. ರಾಸಾಯನಿಕ ಸೋಪಿನ ಬದಲು ಕಡಲೆಹಿಟ್ಟು, ಅರಿಶಿನ, ಮೆಂತ್ಯ, ಹೆಸರುಕಾಳಿನ ಪುಡಿ, ಕಹಿಬೇವು, ಶ್ರೀಗಂಧ, ಆಯುರ್ವೇದ ಸೋಪು ಇತ್ಯಾದಿಗಳನ್ನು ಬಳಸಿ. ಆದಷ್ಟೂ, ಒಗೆದು ಶುಭ್ರವಾಗಿ ಒಣಗಿಸಿದ ಹಗುರವಾದ ಮತ್ತು ಸಡಿಲವಾದ ಹತ್ತಿ ಬಟ್ಟೆಗಳನ್ನೇ ಧರಿಸಿ