ಕೇಂದ್ರ ಸರ್ಕಾರವೂ ಶೀಘ್ರದಲ್ಲೇ ನೂರು ರೂಪಾಯಿ ನಾಣ್ಯವನ್ನು ಹೊರ ತರಲಿದೆ ಎಂಬ ಸುದ್ದಿ ಜನರಲ್ಲಿ ಕುತೂಹಲವನ್ನು ಮೂಡಿಸಿದೆ. ದೇಶದಲ್ಲಿ ಸದ್ಯ 1,2,5,10 ಮತ್ತು 20 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿದೆ. ಇದೀಗ 100 ರೂಪಾಯಿ ನಾಣ್ಯ ಬಿಡುಗಡೆಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ದೇಶದ ಅತ್ಯಂತ ಜನಪ್ರಿಯ ಮನ್ ಕಿ ಬಾತ್ ಕಾರ್ಯಕ್ರಮದ ನೂರನೇ ಸಂಚಿಕೆಯು ಈ ತಿಂಗಳ 30ರಂದು ಪ್ರಸಾರವಾಗಲಿದೆ. ಅಂದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ನಾಣ್ಯ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ನೂರು ರೂಪಾಯಿಯ ಈ ನಾಣ್ಯವು ಕಾನೂನುಬದ್ಧ ಕರೆನ್ಸಿ ಆಗಿ ನೂರು ರೂ. ಮೌಲ್ಯವನ್ನು ಹೊಂದಿದ್ದರೂ ಕೂಡ ವ್ಯಾಪಕ ಬಳಕೆಗೆ ಲಭ್ಯವಿರುವುದಿಲ್ಲ. ಹಾಗೆಯೇ ಕೆಲವೊಂದು ನಿಗದಿತ ಸಂಸ್ಥೆಗಳಲ್ಲಿ ಈ ನಾಣ್ಯ ಲಭ್ಯವಿರುತ್ತದೆ ಎನ್ನಲಾಗಿದೆ.
ನೂರು ರೂಪಾಯಿಯ ನಾಣ್ಯದ ವಿಶೇಷತೆ:
ನೂರರ ರೂಪಾಯಿ ಈ ನಾಣ್ಯವು ದುಂಡಗಿದ್ದು, 44 ಮಿ.ಮೀ. ವ್ಯಾಸವಿದ್ದು, 200 ದಂತುರಗಳು ಇರಲಿವೆ. ಮಿಶ್ರಲೋಹದ ಈ ನಾಣ್ಯ 35 ಗ್ರಾಮ ತೂಕ ಇರಲಿದ್ದು, ಶೇ. 50 ಬೆಳ್ಳಿ, ಶೇ. 40 ತಾಮ್ರ, ಶೇ. 5 ನಿಕ್ಕೆಲ್ ಮತ್ತು ಶೇ. 5 ಜಿಂಕ್ ರ ಮಿಶ್ರಣವಿರಲಿದೆ.
ನಾಣ್ಯದಲ್ಲಿ ಅಶೋಕ ಸ್ಥಂಭದ ಮುದ್ರೆ ಇರಲಿದೆ. ಇನ್ನು ಕೆಳಭಾಗದಲ್ಲಿ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ. ದೇವನಾಗರಿ ಲಿಪಿಯಲ್ಲಿ ಭಾರತ್ ಎಂದು ಬರೆಯಲಾಗಿದೆ. ಎಡಭಾಗದಲ್ಲಿ ಇಂಡಿಯಾ ಎಂದು ಇಂಗ್ಲೀಷ್ನಲ್ಲಿ ಬರೆಯಲಾಗಿದೆ. ಇನ್ನೂ ಇದು ಮನ್ ಕಿ ಬಾತ್ 100ನೇ ಕಂತಿನ ವಿಶೇಷ ನಾಣ್ಯವಾಗಿರುವ ಕಾರಣ ನಾಣ್ಯದಲ್ಲಿ ಮನ್ ಕಿ ಬಾತ್ 100 ಹಾಗೂ ಮನ್ ಕಿ ಬಾತ್ ಮೈಕ್ರೋಫೋನ್ ಚಿಹ್ನೆ ಇರಲಿದೆ.
100 ರೂಪಾಯಿಯ ನಾಣ್ಯ ಬಿಡುಗಡೆ ಇದೆ ಮೊದಲಲ್ಲ:
100 ನಾಣ್ಯವು ಇದೇ ಮೊದಲ ಬಾರಿಗೆ ಬಿಡುಗಡೆಯಾಗುತ್ತಿರುವುದು ಅಲ್ಲ ಈ ಹಿಂದೆ 2010, 2011, 2012, 2014 ಮತ್ತು 2015 ರಲ್ಲಿ ಬಿಡುಗಡೆ ಮಾಡಲಾಗಿದೆ. ಅಟಲ್ ಬಿಹಾರಿ ಅವರ ಸ್ಮರಣಾರ್ಥ 100ರ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು.
ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ 100ರ ನಾಣ್ಯವನ್ನೂ ಬಿಡುಗಡೆ ಮಾಡಲಾಗಿದೆ. ಮಹಾರಾಣಾ ಪ್ರತಾಪ್ ಅವರ 476 ನೇ ಜನ್ಮದಿನದಂದು 100 ರೂಪಾಯಿಗಳ ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ