ಸಿಂಗಾಪುರ: ಗಾಂಜಾ ಕಳ್ಳಸಾಗಣೆ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಯುವಕನಿಗೆ ಸಿಂಗಾಪುರ ಸರಕಾರ ಮರಣದಂಡನೆ ಶಿಕ್ಷೆ ವಿಧಿಸಿದೆ. ಭಾರತೀಯ ಮೂಲದ ನಲವತ್ತಾರು ವರ್ಷದ ತಂಗರಾಜು ಸುಪ್ಪಯ್ಯ ಎಂಬಾತನನ್ನು ಇಂದು(ಬುಧವಾರ) ಬೆಳಿಗ್ಗೆ ಗಲ್ಲಿಗೇರಿಸಲಾಗಿದೆ.
ಸಿಂಗಾಪುರ ಸರಕಾರ ತಂಗರಾಜುವಿಗೆ ವಿಧಿಸಿದ್ದ ಮರಣದಂಡನೆಯನ್ನು ತಡೆಯಲು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಸೇರಿದಂತೆ ಹಲವು ಸಂಘಟನೆಗಳು ಮಧ್ಯಪ್ರವೇಶಿಸಿದರೂ ಫಲಕಾರಿಯಾಗಲಿಲ್ಲ ಎನ್ನಲಾಗಿದೆ.
2013ರಲ್ಲಿ ಮಲೇಷ್ಯಾದಿಂದ ಸಿಂಗಾಪುರಕ್ಕೆ ಒಂದು ಕಿಲೋ ಗಾಂಜಾ ಸಾಗಾಟ ನಡೆಸಲು ಸಂಚು ರೂಪಿಸಿದ್ದ ಎಂಬುದು ತಂಗರಾಜು ವಿರುದ್ಧದ ಆರೋಪ. ತಂಗರಾಜು ಬಳಿ ಗಾಂಜಾವನ್ನು ನೇರವಾಗಿ ವಶಪಡಿಸಿಕೊಳ್ಳದಿದ್ದರೂ ಆತನ ವಿರುದ್ಧ ಇತರ ಸಾಕ್ಷ್ಯಗಳು ಇತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ಸಿಂಗಾಪುರ ಪೊಲೀಸರು ಆತನನ್ನು ಬಂಧಿಸಿದ್ದರು. ಗಾಂಜಾ ಕಳ್ಳ ಸಾಗಣೆ ಹಿಂದೆ ತಂಗರಾಜು ಕೈವಾಡವಿದೆ ಎಂದು ಪ್ರಾಸಿಕ್ಯೂಟರ್ ವಾದಿಸಿದ್ದರು.
ಇದೇ ವೇಳೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ತಂಗರಾಜು ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದ್ದನು. ಆದರೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನ್ಯಾಯಾಲಯ ತಂಗರಾಜುಗೆ ಗಲ್ಲು ಶಿಕ್ಷೆ ವಿಧಿಸಿದೆ. ಕಳೆದ ವಾರ ತಂಗರಾಜು ಕುಟುಂಬವು ಮರಣದಂಡನೆಯ ವಿರುದ್ಧ ಸಿಂಗಾಪುರದ ಅಧ್ಯಕ್ಷರಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿತ್ತು. ಆದರೆ ಅಧ್ಯಕ್ಷರು ಆರೋಪಿಯ ಕುಟುಂಬದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು.
ಮಾದಕ ವಸ್ತುಗಳ ಉಪಯೋಗದ ವಿರುದ್ಧ ಮರಣದಂಡನೆ ವಿಧಿಸುವ ಸಿಂಗಾಪುರವು ವಿಶ್ವದಲ್ಲೇ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸುವ ದೇಶಗಳಲ್ಲೊಂದಾಗಿದೆ. ಮಲೇಷ್ಯಾ ಕೂಡ ಇದೇ ರೀತಿಯ ಶಿಕ್ಷೆ ವಿಧಿಸುತ್ತಿತ್ತು.ಆದರೆ ನಂತರ ಆ ಕಾನೂನನ್ನು ಹಿಂಪಡೆದುಕೊಂಡಿತ್ತು.