ಯಾವುದೇ ಒಂದು ದೇಶದ ಪ್ರಗತಿಯನ್ನು ನಿರ್ಧಾರಿಸುವುದು ಆ ದೇಶದ ಮಾನವ ಸಂಪನ್ಮೂಲದ ಮೂಲಕ. ಒಂದು ವೇಳೆ ಒಂದು ದೇಶದಲ್ಲಿ ಮಿತಿಗಿಂತಲೂ ಅಧಿಕ ಜನಸಂಖ್ಯೆ ಇದ್ದರೆ ಅದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು ಪ್ರಸ್ತುತ ದಿನಗಳಲ್ಲಿ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜನಸಂಖ್ಯೆ ಹೆಚ್ಚಾಳದಿಂದ ಆಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಜುಲೈ 11 ರಂದು ಪ್ರಪಂಚದಾದ್ಯಂತ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ.
ಪ್ರತಿವರ್ಷವು ಒಂದೊಂದು ಥೀಮ್ನ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ ಈ ವರ್ಷ “ಲಿಂಗ ಸಮಾನತೆಯ ಶಕ್ತಿಯನ್ನು ಬಿಚ್ಚಿಡುವುದು” ನಮ್ಮ ಪ್ರಪಂಚದ ಅನಂತ ಸಾಧ್ಯತೆಗಳನ್ನು ಮನ ಬಿಚ್ಚಿ ಮಾತನಾಡುವಂತೆ ಮಾಡಲು ಮಹಿಳೆಯರು ಮತ್ತು ಹುಡುಗಿಯರ ಧ್ವನಿಯನ್ನು ಎತ್ತಿ ಹಿಡಿಯುವುದು ಎಂಬ ಥೀಮ್ನೊಂದಿಗೆ ಆಚರಿಸಲಾಗುತ್ತಿದೆ.
ಜನಸಂಖ್ಯಾ ದಿನದ ಇತಿಹಾಸ:
ಜುಲೈ 11 ರಂದು ಪ್ರತಿ ವರ್ಷ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. 1987 ರ ಜುಲೈ 11 ರಂದು ವಿಶ್ವ ಜನಸಂಖ್ಯೆಯು 500 ಕೋಟಿಯನ್ನು ತಲುಪಿತ್ತು. ಇದರ ಜನಸಂಖ್ಯಾ ಹೆಚ್ಚಳದ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯು, ತನ್ನ ಅಂಗ ಸಂಸ್ಥೆಯಾದ ‘ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಮಂಡಳಿ’ಯ ಮೂಲಕ 1989 ಜುಲೈ 11 ರಂದು ಮೊದಲ ಬಾರಿ ಜನಸಂಖ್ಯಾ ದಿನವನ್ನು ಆಚರಿಸಲಾಯಿತು. ಅಂದಿನಿಂದ ಜಗತ್ತಿನಾದ್ಯಂತ 200ಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತದೆ.
ವಿಶ್ವ ಜನಸಂಖ್ಯಾ ದಿನ ಆಚರಣೆಯ ಉದ್ದೇಶ:
ಆರೋಗ್ಯಕರ ಜೀವನ ಮತ್ತು ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳು ಮತ್ತಿತರ ಸಂಗತಿಗಳಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ.
2027ರ ವೇಳೆಗೆ ಜನಸಂಖ್ಯೆಯಲ್ಲಿ ಭಾರತವೇ ನಂಬರ್ ಒನ್:
ಭಾರತವು 2027ರ ವೇಳೆಗೆ ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ನಂಬರ್ ಒನ್ ಸ್ಥಾನಕ್ಕೆ ಏರಲಿದೆ. ಇದರ ಜೊತೆಗೆ 2050ರ ಅವಧಿಯಲ್ಲಿ ಭಾರತದ ಜನಸಂಖ್ಯೆಗೆ ಹೆಚ್ಚುವರಿಯಾಗಿ 27 ಕೋಟಿ ಜನಸಂಖ್ಯೆ ಸೇರ್ಪಡೆಯಾಗಲಿದೆ. ಪ್ರಸಕ್ತ ಶತಮಾನದ ಅಂತ್ಯಕ್ಕೆ ಅಂದರೆ 2100ನೇ ಇಸವಿಗೆ ವಿಶ್ವದ ಜನಸಂಖ್ಯೆ 1,100 ಕೋಟಿ ತಲುಪಲಿದೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗದ ಅಧ್ಯಯನ ವರದಿ ಹೇಳಿದೆ. 2050ರ ವೇಳೆಗೆ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಆಗಲಿರುವ ಒಟ್ಟು ಏರಿಕೆಯಲ್ಲಿ ಶೇಕಡ 50ಕ್ಕಿಂತ ಹೆಚ್ಚು ಪಾಲು ಕೇವಲ ಒಂಬತ್ತು ದೇಶಗಳಲ್ಲಿ ಇರಲಿದೆ. ಅವುಗಳೆಂದರೆ ಭಾರತ, ನೈಜೇರಿಯಾ, ಪಾಕಿಸ್ತಾನ, ಕಾಂಗೋ, ಇಥಿಯೋಪಿಯಾ, ತಾಂಜೇನಿಯಾ, ಇಂಡೋನೇಷ್ಯಾ, ಈಜಿಪ್ತ್ ಮತ್ತು ಅಮೆರಿಕ.
ವೇಗವಾಗಿ ಹೆಚ್ಚುತ್ತಿದೆ ಜನಸಂಖ್ಯೆ;
1974ರಲ್ಲಿ ಪ್ರಪಂಚದ ಜನಸಂಖ್ಯೆ 4 ಬಿಲಿಯನ್ ಇತ್ತು.
1987ರಲ್ಲಿ ಪ್ರಪಂಚದ ಜನಸಂಖ್ಯೆ 5 ಬಿಲಿಯನ್ ಗೆ ಏರಿತ್ತು.
1999ರಲ್ಲಿ ಪ್ರಪಂಚದಾದ್ಯಂತ 6 ಬಿಲಿಯನ್ ಜನಸಂಖ್ಯೆಯಿತ್ತು.
2012ರಲ್ಲಿ ಪ್ರಪಂಚದ ಜನಸಂಖ್ಯೆ 7 ಬಿಲಿಯನ್ ಗೆ ಬಂದು ನಿಂತಿತ್ತು.
2022ರಲ್ಲಿ ಪ್ರಪಂಚದ ಜನಸಂಖ್ಯೆ 8 ಬಿಲಿಯನ್ ಗೆ ಏರಿಕೆಯಾಗಿದೆ.
ವಿಶ್ವ ಜನಸಂಖ್ಯಾ ದಿನದ ಮಹತ್ವ:
ವಿಶ್ವ ಜನಸಂಖ್ಯಾ ದಿನವು ಜಾಗತಿಕ ಜನಸಂಖ್ಯೆಗೆ ಸಂಬಂಧಿಸಿದ ಚಾಲ್ತಿಯಲ್ಲಿರುವ ಸಮಸ್ಯೆಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವುದುರ ಮೇಲೆ ಕೆಂದ್ರೀಕೃತವಾಗಿದೆ. ಇದು ಅಸಮಾನತೆ, ಆರ್ಥಿಕ ಬಿಕ್ಕಟ್ಟುಗಳು ಮತ್ತು ಬಡತನದಂತಹ ವಿವಿಧ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಅಪರಿಮಿತ ಸಾಮರ್ಥ್ಯಗಳನ್ನು ಹೊಂದಿರುವ ಭವಿಷ್ಯವನ್ನು ರಚಿಸುವ ದೃಷ್ಟಿಕೋನದೊಂದಿಗೆ ವಿಶ್ವಸಂಸ್ಥೆಯು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸುತ್ತದೆ. ವಿಶ್ವ ಜನಸಂಖ್ಯಾ ದಿನದ ಉದ್ದೇಶವು ಬಡತನ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಲಿಂಗ ಸಮಾನತೆಯಂತಹ ಜನಸಂಖ್ಯೆಯ ಬೆಳವಣಿಗೆಗೆ ಸಂಬಂಧಿಸಿದ ಸವಾಲುಗಳ ಬಗ್ಗೆ ತಿಳುವಳಿಕೆ ಮೂಡಿಸುವುದಾಗಿದೆ. ಮತ್ತು ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಸರ್ಕಾರಗಳು ಮತ್ತು ಸಂಘಸಂಸ್ಥೆಗಳು ಕುಟುಂಬ ಯೋಜನೆ ಮತ್ತು ಜನಸಂಖ್ಯೆಯ ನಿಯಂತ್ರಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಜಾಗೃತಿ ಕಾರ್ಯಗಳನ್ನು ಆಯೋಜಿಸಲಾಗುತ್ತದೆ.