ಮಕ್ಕಳಿಗೆ ಓದಿಸುವುದು, ವಿಷಯ ಮನದಟ್ಟು ಮಾಡಿಸುವುದು ತುಂಬಾ ಕಷ್ಟಕರವಾದ ವಿಷಯ. ಇಲ್ಲಿ ಅವರ ನೆನಪಿನ ಶಕ್ತಿ, ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಒಂದು ಕಡೆಯಾದರೆ, ಇನ್ನೊಂದು ಕಡೆ ಅವರ ಆಸಕ್ತಿ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ.
1. ಮಕ್ಕಳ ಮೇಲಿನ ನಿಯಂತ್ರಣ ಕಡಿಮೆ ಮಾಡಿ
ಕೆಲವು ಪೋಷಕರು ಮಕ್ಕಳು ಓದುವ ಸಮಯದಲ್ಲಿ ಅವರ ಪಕ್ಕದಲ್ಲಿಯೇ ಕುಳಿತು, ಓದುವ ರೀತಿಯನ್ನು ಗಮನಿಸುತ್ತಿರುತ್ತಾರೆ. ‘ಏನು ಓದುತ್ತಿದ್ದೀಯ‘ ಎಂದು ಪದೇ ಪದೇ ಕೇಳುತ್ತಿರುತ್ತಾರೆ. ಓದುವ ವಿಷಯ ಮತ್ತು ಓದುವ ರೀತಿ ಎರಡನ್ನೂ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ‘ಹೀಗೆ ಮಾಡಿದರೆ ಮಾತ್ರ ಮಕ್ಕಳು ಕಲಿಯುತ್ತಾರೆ’ ಎಂಬುದು ಅವರ ನಂಬಿಕೆ. ನಿಜ, ಮಕ್ಕಳ ಮೇಲೆ ಸ್ವಲ್ಪಮಟ್ಟಿಗೆ ನಿಯಂತ್ರಣ ಅವಶ್ಯಕ. ಹಾಗೆಂದು, ಅದು ಅತಿಯಾಗಬಾರದು. ಇದರಿಂದ ಮಕ್ಕಳ ಕಲಿಕೆಯ ಆಸಕ್ತಿಯೇ ಕಡಿಮೆಯಾಗಬಹುದು. ಹಾಗಾಗಿ, ಮಕ್ಕಳನ್ನು ನಿಯಂತ್ರಣ ಮಾಡುವುದರ ಬದಲು, ಅವರಿಂದ ಏನಾದರೂ ಕಲಿಯಲು ಪ್ರಯತ್ನಿಸಿ!
ಉದಾಹರಣೆಗೆ; ಮಕ್ಕಳು ಶಾಲೆಯಲ್ಲಿ ಯಾವ ಪಾಠ ಕಲಿಯುತ್ತಿದ್ದಾರೆ ಎಂದು ತಿಳಿದುಕೊಳ್ಳಿ. ನಂತರ, ಆ ಪಾಠದ ಬಗ್ಗೆ ನಿಮಗಿರುವ ಆಸಕ್ತಿಯನ್ನು ತಿಳಿಸಿ. ಆ ಪಾಠವನ್ನು ಕಲಿಸುವಂತೆ ಕೇಳಿ. ನಂತರ, ಏನಾಗುತ್ತದೆ ಎಂದು ನೀವೇ ಗಮನಿಸಿ. ಆಗ ನಿಮ್ಮ ಮಕ್ಕಳೇ ನಿಮಗೆ ಶಿಕ್ಷಕರಾಗುತ್ತಾರೆ. ನಿಮಗೆ ಕಲಿಸುತ್ತಾ ತಾವೂ ಓದಿ ಕಲಿಯತ್ತಾರೆ. ಇದರಿಂದ ನಿಮ್ಮ ಮತ್ತು ಮಕ್ಕಳ ನಡುವೆ ಪರಸ್ಪರ ನಂಬಿಕೆ, ವಿಶ್ವಾಸ ಬಾಂಧವ್ಯವೂ ಹೆಚ್ಚುತ್ತದೆ.
2. ಮಕ್ಕಳನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ
ಶಾಲೆಯಲ್ಲಿ ಕೊಟ್ಟ ಚಟುವಟಿಕೆ ಅಥವಾ ಪ್ರಾಜೆಕ್ಟ್ ಮಾಡುವಾಗ ಮಕ್ಕಳಿಗೆ ಪೋಷಕರು ಸಹಾಯ ಮಾಡುವ ಆಸಕ್ತಿ ತೋರುತ್ತಾರೆ. ಕೆಲವು ವೇಳೆ ಅವಶ್ಯಕತೆಗಿಂತ ಹೆಚ್ಚು ಸಲಹೆ ಕೊಡುವುದು ಅಥವಾ ಸಹಾಯ ಮಾಡುವುದೂ ಇದೆ. ಹೀಗೆ ಮಾಡುವುದರಿಂದ ಮಕ್ಕಳ ಸ್ವತಂತ್ರ ಆಲೋಚನೆಗಳಿಗೆ ಅವಕಾಶವೇ ಇಲ್ಲದಂತೆ ಆಗುತ್ತದೆ. ಆದ್ದರಿಂದ ಈ ರೀತಿಯ ಕೆಲಸಗಳನ್ನು ಮಾಡುವಾಗ ಅವರಷ್ಟಕ್ಕೆ ಅವರನ್ನು ಬಿಡಿ. ಅವಶ್ಯಕತೆ ಇದ್ದಾಗ ಮಾತ್ರ ನೀವು ಭಾಗವಹಿಸಿ. ಅವರು ತಪ್ಪು ಮಾಡಿದರೆ ಮಾಡಲಿ. ಆ ತಪ್ಪುಗಳ ಬಗ್ಗೆ ನಂತರ ವಿವರಿಸಿ ಹಾಗೂ ಆ ರೀತಿಯ ತಪ್ಪುಗಳನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ನಿಮಗೆ ತಿಳಿದಿದ್ದರೆ ಅವರಿಗೆ ವಿವರಿಸಿ.
3. ಕಲಿಯುವಿಕೆಯಲ್ಲಿ ನಿಮ್ಮ ಉತ್ಸಾಹ ಮತ್ತು ಆಸಕ್ತಿಯನ್ನು ಪ್ರದರ್ಶಿಸಿ
ಮೊದಲೇ ಹೇಳಿದಂತೆ, ನಮ್ಮ ಮಕ್ಕಳು ನಮ್ಮನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಮಕ್ಕಳ ಎದುರು ಕಲಿಯುವಿಕೆಯಲ್ಲಿನ ನಿಮ್ಮ ಉತ್ಸಾಹವನ್ನು ಮಕ್ಕಳ ಜೊತೆ ಹಂಚಿಕೊಳ್ಳಿ. ಉದಾಹರಣೆಗೆ; ನಿಮಗೆ ಗಿಡಗಳನ್ನು ಬೆಳೆಸುವ ಆಸಕ್ತಿಯಿದ್ದರೆ, ನಿಮ್ಮ ಆಸಕ್ತಿಯನ್ನು ನಿಮ್ಮ ಮಕ್ಕಳ ಜೊತೆ ಹಂಚಿಕೊಳ್ಳಿ. ಅವರನ್ನೂ ಆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಅವರು ಶಾಲೆಯಲ್ಲಿ ಗಿಡಗಳ ಭಾಗಗಳ ಬಗ್ಗೆ ಕಲಿಯುತ್ತಿದ್ದರೆ ಅದನ್ನು ನಿಮಗೆ ಕಲಿಸುವಂತೆ ಕೇಳಿ.
4.ಅವರ ಆಸಕ್ತಿಗೆ ಮೊದಲ ಆದ್ಯತೆ ನೀಡಿ
ನಿಮ್ಮ ಮಕ್ಕಳು ಕಲಿಯುವ ಸಮಯದಲ್ಲಿ ಬೇರೆ ಚಟುವಟಿಕೆಗೆ ಹೆಚ್ಚಿನ ಆಸಕ್ತಿ ತೋರಿಸಬಹುದು. ಹಾಗಾಗಿ ಆ ಸಮಯದಲ್ಲಿ ಇತರ ಚಟುವಟಿಕೆಗೆ ಒಂದಿಷ್ಟು ಸಮಯ ನೀಡಿ, ನಿರ್ದಿಷ್ಟವಾದ ಗಡುವಿನ ನಂತರ ಓದನ್ನು ಮುಂದುವರೆಸುವುದಾಗಿ ಹೇಳುವುದು ಉತ್ತಮ.ಇದರಿಂದ ನೀವು ಯಾವಾಗಲೂ ಓದಿಸುತ್ತೀರಿ ಎಂಬುದು ಕಡಿಮೆಯಾಗುತ್ತೆ.
ಸೃಜನಾತ್ಮಕವಾಗಿ ಕಲಿಸಲು ಪ್ರಯತ್ನಿಸಿ
ಒಂದೇ ರೀತಿಯಾಗಿ ಬಾಯಿಪಾಠ ಮಾಡಿಸುವುದರ ಬದಲು, ವಿಷಯ ಅರ್ಥ ಮಾಡಿಸಲು ಪರಿಕರಣೆಗಳನ್ನು ಬಳಸಿ.ಉದಾಹರಣೆಗೆ ಕ್ಲೇ ಮಣ್ಣಿನಲ್ಲಿ ವಿಜ್ಞಾನದ ಮಾದರಿ ಮಾಡಿಸಿ ಕಲಿಸುವುದು ಇತ್ಯಾದಿ.
ಕಲಿಯುವುದರಲ್ಲಿ ಆಸಕ್ತಿ ಬರಲು ಬರೀ ಓದಿದರೆ ಸಹಾಯವಾಗುವುದಿಲ್ಲ, ಅದನ್ನು ಅರ್ಥೈಸಿ ನೆನಪಿಸಿಕೊಳ್ಳುವ ಜೊತೆಗೆ ಅದನ್ನು ಕಲಿಯಲು ಬೇಕಾದ ಮನಸ್ಥಿತಿ ಇರಬೇಕು.