ಭಾರತ : ಉನ್ನತ ಶಿಕ್ಷಣಕ್ಕೆ ಎಸ್ಎಎಎಸ್ ಪೂರೈಸುವ ಭಾರತದ ಪ್ರಮುಖ ಸಂಸ್ಥೆ ಆಗಿರುವ ಡಿಐಜಿಐಐ ‘ಎಐ ಚಾಲಿತ ಶಿಕ್ಷಣ: ಶಿಕ್ಷಣ ತಜ್ಞರಿಗೆ ನೆರವಾಗಲು ಮತ್ತು ಶೈಕ್ಷಣಿಕ ಯಶಸ್ಸು ಹೆಚ್ಚಿಸಲು ಎಐ ಬಳಕೆ’ಎಂಬ ಶೀರ್ಷಿಕೆಯಲ್ಲಿ ಹೊಸ ಸಮೀಕ್ಷಾ ವರದಿಯನ್ನು ಇಂದು ಬಿಡುಗಡೆ ಮಾಡಿದೆ. ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್ನ ಉನ್ನತ ಶಿಕ್ಷಣ ಸಂಸ್ಥೆಗಳ ಅಧ್ಯಾಪಕರನ್ನು ಮಾತನಾಡಿಸಿ ನಡೆಸಿದ ಈ ಸಮೀಕ್ಷೆಯಲ್ಲಿ ಶಿಕ್ಷಣ ತಜ್ಞರು ಎಐ ಬಳಕೆಯ ಹೆಚ್ಚಳದ ಕುರಿತು ಹೊಂದಿರುವ ಅಭಿಪ್ರಾಯವನ್ನು ದಾಖಲಿಸಲಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿರುವ ಈ ನಗರಗಳಲ್ಲಿನ ಶೇ.93ರಷ್ಟು ಅಧ್ಯಾಪಕರು ಎಐ ಕುರಿತು ಅಪಾರ ಉತ್ಸಾಹ ಹೊಂದಿದ್ದು, ಎಐ ಅವರ ಬೋಧನಾ ಕ್ರಮವನ್ನು ಗಣನನೀಯವಾಗಿ ಸುಧಾರಿಸಲಿದೆ ಎಂದು ನಂಬುತ್ತಾರೆ ಎಂಬ ವಿಚಾರವನ್ನು ಸಮೀಕ್ಷೆ ತಿಳಿಸಿದೆ.
ಮಣಿಪಾಲ್ ಅಕಾಡೆಮಿ ಆಫ್ ಬ್ಯಾಂಕಿಂಗ್, ಜೈನ್ (ಡೀಮ್ಡ್ ಯುನಿವರ್ಸಿಟಿ), ಚಾಣಕ್ಯ ವಿಶ್ವವಿದ್ಯಾಲಯ, ಬಿಐಟಿಎಸ್ಓಎಂ, ವಿಐಟಿ ಬೆಂಗಳೂರು, ಅಪೋಲೋ ವಿಶ್ವವಿದ್ಯಾಲಯ, ಮಲ್ಲಾ ರೆಡ್ಡಿ ವಿಶ್ವವಿದ್ಯಾಲಯ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಆಂಡ್ ಡಿಸೈನ್ ಸೇರಿದಂತೆ ದೇಶಾದ್ಯಂತ ಇರುವ 22 ಪ್ರಮುಖ ಸಂಸ್ಥೆಗಳ 500ಕ್ಕೂ ಹೆಚ್ಚು ಶಿಕ್ಷಕರ ಅಭಿಪ್ರಾಯಗಳನ್ನು ಆಧರಿಸಿ ಈ ಸಮೀಕ್ಷಾ ವರದಿ ತಯಾರಿಸಲಾಗಿದೆ. ಸಮೀಕ್ಷಾ ವರದಿಯಲ್ಲಿ ಬೋಧನಾ ಕ್ರಮವನ್ನು ಸುಧಾರಿಸಲು ಎಐ ಬಳಕೆಯ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ. ಜೊತೆಗೆ ಎಐ ಪರಿಕರಗಳ ಕುರಿತು ತರಬೇತಿ ಪಡೆಯಲು ಶಿಕ್ಷಕರು ಸಿದ್ಧರಿದ್ದಾರೆಯೇ ಮತ್ತು ಬೋಧನೆ ಹಾಗೂ ಕಲಿಕಾ ಕ್ರಮವನ್ನು ಸುಧಾರಿಸಲು ಈ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಕೂಡ ಇಲ್ಲಿ ಚರ್ಚಿಸಲಾಗಿದೆ.
ಸುಮಾರು ಶೇ.41ರಷ್ಟು ಅಧ್ಯಾಪಕರು ಈಗಾಗಲೇ ತಮ್ಮ ಬೋಧನೆಯಲ್ಲಿ ಬಳಸುತ್ತಿದ್ದಾರೆ ಎಂದು ಡಿಐಜಿಐಐ ಸಮೀಕ್ಷೆ ತಿಳಿಸಿದೆ. ಅವರಲ್ಲಿ ಶೇ.70ಕ್ಕಿಂತ ಹೆಚ್ಚು ಮಂದಿ ಕಂಟೆಂಟ್ ರಚಿಸಲು, ಶೇ.40.1 ಮಂದಿ ಮೌಲ್ಯಮಾಪನ ಕ್ರಮ ರೂಪಿಸಲು, ಶೇ.28.4 ಮಂದಿ ಹಾಜರಾತಿ ಮೇಲೆ ನಿಗಾ ವಹಿಸಲು, ಶೇ.24.4 ಮಂದಿ ಮೌಲ್ಯಮಾಪನಗಳನ್ನು ನಡೆಸಲು ಮತ್ತು ಶೇ.22.5 ಮಂದಿ ಅಭಿಪ್ರಾಯ ಪಡೆಯಲು ಎಐ ಅನ್ನು ಬಳಸಿಕೊಳ್ಳುತ್ತಾರೆ. ಜೊತೆಗೆ ಶೇ.37ಕ್ಕಿಂತ ಹೆಚ್ಚು ಜನರು ಎಐ ಜೊತೆ ಪ್ರಯೋಗ ನಡೆಸಿದ್ದು, ಆದರೆ ಪ್ರಸ್ತುತ ಎಐ ಬಳಸುತ್ತಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಶೇ.21.6 ಮಂದಿ ತಮ್ಮ ಬೋಧನಾ ಕ್ರಮದಲ್ಲಿ ಎಐ ಪರಿಕರಗಳನ್ನು ಯಾವತ್ತೂ ಬಳಸಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಡಿಐಜಿಐಐಯ ಸಂಸ್ಥಾಪಕ ಮತ್ತು ಸಿಇಓ ಹೇಮಂತ್ ಸಹಲ್ ಅವರು, ” ಎಐ- ಆಧರಿತ ಪರಿಕರಗಳನ್ನು ತಮ್ಮ ಬೋಧನಾ ಕ್ರಮದಲ್ಲಿ ಅಳವಡಿಸಿಕೊಳ್ಳಲು ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್ನ ಶಿಕ್ಷಣತಜ್ಞರು ಅಗಾಧ ಆಸಕ್ತಿ ಮತ್ತು ಉತ್ಸಾಹ ತೋರಿರುವುದು ನಮ್ಮ ಸಮೀಕ್ಷಾ ವರದಿಯ ವಿಶೇಷ ಅಂಶವಾಗಿದೆ. ಅವರಲ್ಲಿ ಶೇ.97ರಷ್ಟು ಮಂದಿ ಬೋಧನಾ ಕ್ರಮಗಳನ್ನು ಸುಧಾರಿಸಲು ಎಐ ಅನ್ನು ಬಳಸಿಕೊಳ್ಳಲು ಆಸಕ್ತಿ ತೋರಿರುವುದರ ಜೊತೆಗೆ ಎಐ ಅನ್ನು ಬೋಧನಾ ಕ್ರಮದಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು, ಅದಕ್ಕೆ ಬೇಕಾದ ತರಬೇತಿ ಪಡೆದುಕೊಳ್ಳಲು ಸಿದ್ಧರಾಗಿದ್ದಾರೆ” ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಎಐ ಬಳಕೆ ಕುರಿತು ಆಸಕ್ತಿ, ಉತ್ಸಾಹ ಹೆಚ್ಚುತ್ತಿರುವುದಕ್ಕೆ ಅನುಗುಣವಾಗಿ ಮತ್ತು ಈ ಹಿನ್ನೆಲೆಯಲ್ಲಿ ಶಿಕ್ಷಕರ ಕೌಶಲ್ಯ ಅಭಿವೃದ್ಧಿಗೊಳಿಸಲು ನೆರವಾಗುವ ಉದ್ದೇಶದಿಂದ ಡಿಐಜಿಐಐ ಸಂಸ್ಥೆಯು ಹೊಚ್ಚ ಹೊಸ ಜನರೇಟಿವ್ ಎಐ ಟೂಲ್ ಆದ ಡಿಐಜಿಐಐ ಎಐ ಅನ್ನು ಪರಿಚಯಿಸಿದೆ. ಪ್ರಸ್ತುತ ಭಾರತಾದ್ಯಂತ ಇರುವ 20 ಶಿಕ್ಷಣ ಸಂಸ್ಥೆಗಳಲ್ಲಿ ಈ ಎಐ ಟೂಲ್ ಅನ್ನು ಪರಿಚಯಿಸಲಾಗಿದೆ. ಅಟೆಂಡೆನ್ಸ್ ಟ್ರ್ಯಾಕಿಂಗ್, ತರಗತಿ ವೇಳಾಪಟ್ಟಿ ತಯಾರಿ, ದಾಖಲಾತಿ, ಮೌಲ್ಯಮಾಪನ ಕ್ರಮ ರಚನೆ ಮತ್ತು ಮೌಲ್ಯಮಾಪನ ಕ್ರಿಯೆಯಂತಹ ತುಂಬಾ ಸಮಯ ತೆಗೆದುಕೊಳ್ಳುವ ಕೆಲಸಗಳನ್ನು ಸುವ್ಯವಸ್ಥಿತಗೊಳಿಸಲು ಈ ಎಐ ಟೂಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ಡಿಐಜಿಐಐ ಎಐ ಟೂಲ್ ಅತ್ಯಾಧುನಿಕ ಎಐ ಮಾಡೆಲ್ ಗಳನ್ನು ಬಳಸುತ್ತಿದ್ದು, ಅಧ್ಯಾಪಕರ ಬೋಧನಾ ಕ್ರಮವನ್ನು ಅತ್ಯುತ್ತಮಗೊಳಿಸಲು ನೆರವಾಗುತ್ತದೆ.