ನೂತನ ಸರ್ಕಾರ ಉಚಿತ ಯೋಜನೆಗಳನ್ನು ಘೋಷಿಸಿದ ಬಳಿಕ ಯೋಜನೆ ಫಲಾನುಭವಿಗಳು ಯಾವುದೇ ತೆರಿಗೆ ಕಟ್ಟುವುದಿಲ್ಲ. ತೆರಿಗೆ ಕಟ್ಟುವುದು ಮೇಲ್ವರ್ಗ ಜನರು ಆದರೆ ಉಚಿತ ಯೋಜನೆಗಳು ದೊರೆಯುವುದು ಮಾತ್ರ ತೆರಿಗೆ ಕಟ್ಟದ ಜನರಿಗೆ ಎಂಬ ಚರ್ಚೆಯು ಹುಟ್ಟಿಕೊಂಡಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ‘ನಮ್ಮ ತೆರಿಗೆ ಹಣ ಫ್ರೀ ಬೀಗಳಿಗಲ್ಲ’ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲೇ ಸದ್ದು ಮಾಡಿತ್ತು. ಅಭಿಯಾನದಲ್ಲಿ ಭಾಗಿಯಾದವರಲ್ಲಿ ಕೆಲವರು ಈ ಘೋಷಣೆ ಇದ್ದ ಪೋಸ್ಟರ್ಗಳನ್ನು ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರ, ಡಿಸ್ಪ್ಲೇ ಚಿತ್ರಗಳಲ್ಲಿ ಕೂಡ ಹಂಚಿಕೊಂಡು ತಾವು ಆದಾಯ ತೆರಿಗೆ ಪಾವತಿದಾರರು ಎಂದು ಘೋಷಿಸಿಕೊಂಡಿದ್ದರು. ಆದರೆ ಆದಾಯ ತೆರಿಗೆ ಒಂದೇ ದೇಶದ ಆದಾಯದ ಮೂಲವಲ್ಲ ಎನ್ನುವ ಸತ್ಯಾಂಶ ಅಭಿಯಾನ ಮಾಡಿದವರಿಗೆ ತಿಳಿದಿಲ್ಲ. ತಮ್ಮ ತೆರಿಗೆಯಿಂದನೇ ದೇಶದ ಬೊಕ್ಕಸ ತುಂಬುತ್ತಿದೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ.
ದೇಶದ ಪ್ರತಿಯೊಬ್ಬ ನಾಗರಿಕನೂ ಕೂಡಾ ತೆರಿಗೆದಾರನೇ ಆಗಿದ್ದಾನೆ. ಪ್ರತಿಯೊಬ್ಬ ನಾಗರಿಕನು ಬಳಸುವ ಬಹುತೇಕ ಸರಕು ಮತ್ತು ಸೇವೆಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕಟ್ಟಲೇ ಬೇಕು. ಅಷ್ಟೇ ಮಾತ್ರವಲ್ಲದೇ ಜಿಎಸ್ಟಿ, ಅಬಕಾರಿ, ಎಕ್ಸೈ ಸ್ ಸುಂಕಗಳೂ ಕೂಡ ದೇಶದ ಆದಾಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇರ್ಪಡೆಗೊಳ್ಳುತ್ತವೆ. ದೇಶದ ಬಡವ ಮತ್ತು ಕೆಳ ಮಧ್ಯಮ ವರ್ಗ ದ ಕುಟುಂಬವೂ ಪ್ರತಿದಿನ ತಾನು ಬಳಸುವ ಸರಕು ಮತ್ತು ಸೇವೆಗಳ ಮೇಲೆ ದೊಡ್ಡ ಪ್ರಮಾಣದ ತೆರಿಗೆ ಕಟ್ಟುತ್ತದೆ. ಆದರೆ ಇದು ಪರೋಕ್ಷವಾಗಿದ್ದು ತೆರಿಗೆ ಕಟ್ಟುತ್ತಿರುವುದು ಯಾರ ಗಮನಕ್ಕೂ ಬರುತ್ತಿಲ್ಲ. ಆದರೆ, ಒಮ್ಮೆ ತಾವು ಖರೀಸಿದ ದಿನಸಿ ಮತ್ತು ಅತ್ಯಗತ್ಯದ ವಸ್ತುಗಳ ಬಿಲ್ ಗಮನಿಸಿದರೆ ಎಷ್ಟು ತೆರಿಗೆ ಕಟ್ಟಲಾಗುತ್ತಿದೆ ಎಂಬುದು ತಿಳಿಯುತ್ತದೆ.
ಯಾವುದೇ ಕುಟುಂಬವೊಂದು ತಾನು ಪ್ರತಿದಿನ ಬಳಸುವ ಹಲವು ಸರಕುಗಳ ಮೇ ಲೆ ಶೇ 5ರಷ್ಟು ಜಿಎಸ್ಟಿ ಕಟ್ಟುತ್ತದೆ. ಸಾಮಾನ್ಯ ಕುಟುಂಬವೊಂದರ ಸದಸ್ಯರು ಪ್ರತಿದಿನ ಬೆಳಿಗ್ಗೆ ಎದ್ದು, ರಾತ್ರಿ ಮಲಗುವವರೆಗೆ ಕನಿಷ್ಠ 25ರಿಂ ದ 30ರಷ್ಟು ಸರಕು ಮತ್ತು ಸೇವೆಗಳನ್ನು ಬಳಸುತ್ತದೆ ಮತ್ತು ಆ ಎಲ್ಲಾ ಸರಕು ಮತ್ತು ಸೇವೆಗಳಿಗೆ ತೆರಿಗೆ ಕಟ್ಟಲೇ ಬೇಕು. ಸರಕು ಮತ್ತು ಸೇವೆಗಳ ಮೇಲೆ ಪ್ರತಿ ಕುಟುಂಬವು ದೊಡ್ಡ ಪ್ರಮಾಣದ ತೆರಿಗೆ ಪಾವತಿಸುತ್ತಿದೆ.
ಇನ್ನು 2022-23ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು 16.50 ಲಕ್ಷಕೋಟಿ ಆದಾಯ ತೆರಿಗೆ ಸಂಗ್ರಹಿಸಿದರೆ , ಜಿಎಸ್ಟಿ ಮೂಲಕ 18.10 ಲಕ್ಷಕೋಟಿ ತೆರಿಗೆ ಸಂಗ್ರಹವಾಗಿದೆ. ಇದರರ್ಥ ತೆರಿಗೆ ಪಾವತಿದಾರನಿಗಿಂತ ಹೆಚ್ಚು ಪಾಲು ಜನಸಾಮಾನ್ಯರು ಕೂಡ ದೇಶದ ಬೊಕ್ಕಸ ತುಂಬಲು ತೆರಿಗೆ ಪಾವತಿಸುತ್ತಾರೆ.