ಇಂದು ಬ್ರಿಟನ್ ಗೆ ಮೂರನೇ ರಾಜನಾಗಿ ಕಿಂಗ್ ಚಾರ್ಲ್ಸ್ ಕಿರೀಟಧಾರಣೆ ಮಾಡಿದರು. ರಾಜನ ಪಟ್ಟಾಭಿಷೇಕ ಸಮಾರಂಭವು ಲಂಡನ್ ನ ವೆಸ್ಟ್ಮಿನಿಸ್ಟರ್ ಅಬೆಯಲ್ಲಿ ಅದ್ಧೂರಿಯಾಗಿ ನಡೆಯಿತು.
ಕ್ವೀನ್ ಎಲಿಜಬೆತ್ ನ ನಿಧನದ ಬಳಿಕ 2022ರ ಸೆಪ್ಟೆಂಬರ್ ನಲ್ಲಿ ಚಾರ್ಲ್ಸ್ ಅವರು ನೂತನ ರಾಜನಾಗಿ ನೇಮಕಗೊಂಡಿದ್ದು, ಇಂದು ಲಂಡನ್ ನಲ್ಲಿ ಚಾರ್ಲ್ಸ್ ಗೆ ಪಟ್ಟಾಭಿಷೇಕ ಸಮಾರಂಭವು ಯಾವುದೇ ತೊಂದರೆ ಇಲ್ಲದೆ ನೆರವೇರಿದೆ.
ನೂತನ ರಾಜನ ಪಟ್ಟಾಭಿಷೇಕ ಸಮಾರಂಭಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಪತ್ನಿ ಅಕ್ಷತಾ ಮೂರ್ತಿ ಕೂಡ ಭಾಗಿಯಾಗಿದ್ದರು. ಈ ಔಪಚಾರಿಕ ಕಾರ್ಯಕ್ರಮದಲ್ಲಿ ರಾಜ ಚಾರ್ಲ್ಸ್ ಗೆ ಕಿರೀಟ ತೊಡಿಸಲಾಯಿತು.
ಬ್ರಿಟನ್ ರಾಯಲ್ ಏರ್ಫೋರ್ಸ್ ಧ್ವಜ ಮೆರವಣಿಗೆ ನಡೆಸಿದ್ದು, ಬ್ರಿಟನ್ನ ಎಲ್ಲಾ ರಾಜಾಧಿಕಾರವನ್ನು ರಾಜ ಚಾರ್ಲ್ಸ್ ರಿಗೆ ಹಸ್ತಾಂತರಿಸಲಾಯಿತು.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಹಣ ರವಾನೆ ಮಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರು ಮತ್ತು ಮೈಸೂರಿನಲ್ಲಿನ ಫೈನಾನ್ಶಿಯರ್ ಗಳ ಕಚೇರಿ ಹಾಗೂ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎರಡೂ ಜಿಲ್ಲೆಗಳಲ್ಲಿ ಸುಮಾರು 15 ಕೋಟಿ ರೂ ಗೂ ಅಧಿಕ ಹಣ, 5 ಕೋಟಿ ರೂ. ಬೆಲೆಬಾಳುವ ಚಿನ್ನಾಭರಣ ಹಾಗೂ ದಾಖಲೆಗಳು ಸಹ ಪತ್ತೆಯಾಗಿದ್ದು, ಎಲ್ಲಾ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳಿಗೆ ಹಣಕಾಸು ಸಹಾಯ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಐಪಿಎಲ್ 2023 ಟೂರ್ನಿಯ ಇಂದಿನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಗಳ ಹೀನಾಯ ಸೋಲನುಭವಿಸಿದೆ.
ಮುಂಬೈ ಇಂಡಿಯನ್ಸ್ ನೀಡಿದ 140 ರನ್ ಗಳ ಗುರಿಯನ್ನು ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ನಷ್ಟಕ್ಕೆ ಕೇವಲ 17.4 ಓವರ್ ನಲ್ಲಿ ಗುರಿ ಮುಟ್ಟಿ ಗೆಲುವು ಸಾಧಿಸಿದೆ.
ಖಲಿಸ್ತಾನ್ ಕಮಾಂಡೋ ಫೋರ್ಸ್ ನ ಮುಖ್ಯಸ್ಥ, ಭಯೋತ್ಪಾದಕ ನೆಂದೇ ಗುರುತಿಸಿಕೊಂಡಿದ್ದ ಪರಮ್ಜೀತ್ ಸಿಂಗ್ ಪಂಜ್ವಾರ್ ನನ್ನು ಪಾಕಿಸ್ತಾನದ ಲಾಹೋರ್ನಲ್ಲಿ ಇಂದು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಲಾಹೋರ್ ನಲ್ಲಿರುವ ಆತನ ನಿವಾಸದ ಬಳಿ ಮೋಟಾರ್ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಪರಮ್ಜೀತ್ ಸಿಂಗ್ ಪಂಜ್ವಾರ್ ನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.
ಪರಮ್ಜೀತ್ ಸಿಂಗ್ ಪಂಜ್ವಾರ್ ಮಾದಕವಸ್ತು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದನೆಂಬ ಆರೋಪವಿದೆ.
ರಾಜ್ಯದಲ್ಲಿ ಮೇ.10ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ನಿಮಿತ್ತ ಹೆಚ್ಚಿನ ಸಂಖ್ಯೆಯ ಬಸ್ಸುಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸೇವೆಗಾಗಿ ನಿಯೋಜಿಸಲಾಗಿದ್ದು, ಸಾರ್ವಜನಿಕ ಸಂಚಾರಕ್ಕೆ ಬಸ್ಸುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಕೆ.ಎಸ್.ಆರ್.ಟಿ.ಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮೇ.9 ಮತ್ತು ಮೇ.10ರಂದು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಸಂಚಾರ ಇರುವುದಿಲ್ಲ, ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದೆ. ರಾಜ್ಯದಲ್ಲಿನ ಒಟ್ಟು 8100 ಕೆ.ಎಸ್.ಆರ್.ಟಿ.ಸಿ ಬಸ್ ಗಳ ಪೈಕಿ 3700 ಬಸ್ ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿವೆ ಎಂದು ಕೆ.ಎಸ್.ಆರ್.ಟಿ.ಸಿ ಮಾಹಿತಿ ನೀಡಿದೆ