ಭಟ್ ಆ್ಯಂಡ್ ಭಟ್ ಯುಟ್ಯೂಬ್ ಚಾನೆಲ್ಗೆ ಸ್ವಾಗತ ನಾನು ಸುದರ್ಶನ್ ಭಟ್ ಬೆದ್ರಾಡಿ ಎಂದು ಹವ್ಯಾಕ ಬ್ರಾಹ್ಮಣರ ಶೈಲಿಯಲ್ಲಿ ನಿರೂಪಣೆ ಮಾಡುತ್ತಾ ವೈವಿಧ್ಯಮಯವಾದ ರುಚಿಯನ್ನು ನೋಡಿಗರಿಗೆ ವಿವರಿಸುವ ಇವರ ಶೈಲಿಗೆ ಮನಸೋಲದವರಿಲ್ಲ.
ವಿಶಿಷ್ಟ ಶೈಲಿಯಲ್ಲಿ ಮೂಡಿಬಂದ ಭಟ್ ಆ್ಯಂಡ್ ಭಟ್ ಯುಟ್ಯೂಬ್ ಚಾನೆಲ್ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಕನ್ನಡದ ಯುಟ್ಯೂಬ್ ಚಾನೆಲ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.
ಸುದರ್ಶನ್ ಭಟ್ ಹಾಗೂ ಮನೋಹರ್ ಭಟ್ ಈ ಜನಪ್ರಿಯ ಯುಟ್ಯೂಬ್ ಚಾನೆಲ್ನ ಸೃಷ್ಟಿಕರ್ತರು. ಅಪ್ಪಟ ಹಳ್ಳಿ ಪ್ರತಿಭೆಗಳಾದ ಈ ಅವಳಿ ಸಹೋದರರು ಕನ್ನಡ ಯುಟ್ಯೂಬ್ ಚಾನೆಲ್ ಲೋಕದಲ್ಲಿ ಹೊಸ ಮೈಲಿಗಲ್ಲನ್ನು ಹುಟ್ಟುಹಾಕಿದ್ದಾರೆ. ಕೊರೋನಾ ಒಂದನೇ ಅಲೆಯಲ್ಲಿ ಇವರು ಶುರು ಮಾಡಿದ ಭಟ್ ಎನ್ ಭಟ್ ಯೂಟ್ಯೂಬ್ ಚಾನೆಲ್ ಈಗ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದೆ. ಲಾಕ್ಡೌನ್ ಸಮಯದಲ್ಲಿ ಮನೆ ಪರಿಸರದಲ್ಲೇ ಸಿಗುವ ಹಣ್ಣು, ತರಕಾರಿಗಳಿಂದ ಮಾಡಿದ ಅಡುಗೆ ರೆಸಿಪಿಗಳ ವೀಡಿಯೋಸ್ ತುಂಬಾ ವೈರಲ್ ಆಗಿದ್ದವು.
ಅಪ್ಪಟ ಕಾಸರಗೋಡು ಗ್ರಾಮ್ಯ ಹವ್ಯಕ ಬ್ರಾಹ್ಮಣ ಶೈಲಿಯ ಕನ್ನಡ ನಿರೂಪಣೆ, ಇಂಗ್ಲಿಷ್ ಸಬ್ಟೈಟಲ್, ರುಬ್ಬುವ ಕಲ್ಲು, ಸೌದೆ ಒಲೆ, ಹೆಂಚಿನ ಮನೆ ಹಿನ್ನೆಲೆಯ ಪ್ರಸ್ತುತಿ, ಅಡುಗೆ ಟಿಪ್ಸ್ ಗಳಿಂದಾಗಿ ಭಟ್ ಎನ್ ಭಟ್ ಯುಟ್ಯೂಬ್ ಚಾನೆಲ್ ಕರ್ನಾಟಕದಲ್ಲಿ ಮನೆ ಮಾತಾಗಿದೆ.
2020 ಏಪ್ರಿಲ್ 18ರಂದು ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಮೊದಲ ಬಾರಿಗೆ ಬಾಳೆಕಾಯಿ ಚಿಪ್ಸ್ ರೆಸಿಪಿ ಹಂಚಿಕೊಂಡಲ್ಲಿಂದ ಇವರ ಸಾಹಸಗಾಥೆ ಪ್ರಾರಂಭವಾಯಿತು. ಇವರ ಅಡುಗೆ ಶೈಲಿಗೆ ಮನಸೋತ ಬಂಧು ಮಿತ್ರರು ಬೆನ್ನು ತಟ್ಟಿದರು. ಅವರೆಲ್ಲರ ಪ್ರೋತ್ಸಾಹದಿಂದ ಒಂದಾದ ಮೇಲೊಂದರಂತೆ ಇಲ್ಲಿಯ ವರೆಗೆ 439 ಅಡುಗೆ ರೆಸಿಪಿಗಳನ್ನು ಜಾಲತಾಣಗಳಲ್ಲಿ ಹಂಚಿದ್ದಾರೆ.
ತಮ್ಮ ಮನೆ ತೋಟದಲ್ಲಿಯೇ ಸಿಗುವ ಸೋರೆಕಾಯಿ, ಹುಣಸೆ, ಹಲಸು, ಮಾವು, ಪುನರ್ಪುಳಿ, ಕುಂಬಳ, ಕೆಸುವಿನ ಎಲೆ ಸಹಿತ ಸ್ಥಳೀಯ ವಸ್ತುಗಳು, ಮನೆಯ ಪಾತ್ರೆ ಪಗಡಿ, ಅರೆಯುವ ಕಲ್ಲು ಇಷ್ಟನ್ನೇ ಬಳಸಿ ಇವರು ಶುರು ಮಾಡಿದ ಚಾನೆಲ್ ಇಂದು ಚಂದಾದಾರರ ಸಂಖ್ಯೆ 10ಲಕ್ಷ ದಾಟಿದೆ.
ಅನ್ನದ ಕೇಸರಿಬಾತ್, ಮಂಗಳೂರು ಗೋಳಿಬಜೆ, ಬನ್ಸ್, ಗೋಧಿ ಮಣ್ಣಿ, ನೀರುಳ್ಳಿ ವಡೆ, ಅಮೃತಫಲ, ಚಟ್ಟಂಬಡೆ, ಕಾಶಿ ಹಲ್ವಾ, ತೊಂಡೆಕಾಯಿ ಕೊದಿಲು, ಅವಲಕ್ಕಿ ಚಟ್ನಿ, ಬೂಂದಿಲಾಡು, ಬಾಳೆ ದಿಂಡಿನ ಜ್ಯೂಸ್, ತೆಳ್ಳವು, ಸಾರಿನ ಹುಡಿ, ತಿಳಿಸಾರು, ಹಪ್ಪಳದ ಕಥೆ, ಕುದನೆ ಗೊಜ್ಜು, ಬಟಾಟೆ ಮೊಸರು ಗೊಜ್ಜು ಹೀಗೆ ಕರಾವಳಿಯ ಜನಪ್ರಿಯ, ಅಪರೂಪದ ಖಾದ್ಯ ಹಂಚಿಕೊಂಡು ನೋಡುಗರಿಗೆ ಬಾಯಿಯಲ್ಲಿ ನೀರೂರುವಂತೆ ಮಾಡುತ್ತಾರೆ.
ಸುದರ್ಶನ್ ಭಟ್ ಹಾಗೂ ಮನೋಹರ್ ಭಟ್ ಇಬ್ಬರು ಕೂಡ ಯುವ ವಕೀಲರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಪಡೆದಿದ್ದಾರೆ. ಇವರ ಯು ಟ್ಯೂಬ್ ಚಾನೆಲ್ ನಲ್ಲಿ ಸುದರ್ಶನ್ ಭಟ್ ಅವರು ಹವ್ಯಕ ಬ್ರಾಹ್ಮಣ ಶೈಲಿಯ ಕನ್ನಡದಲ್ಲಿ ನಿರೂಪಣೆಯನ್ನು ಮಾಡುತ್ತಾರೆ. ಮನೋಹರ ಭಟ್ ಚಿತ್ರೀಕರಣ ಮಾಡಿ ಎಡಿಟಿಂಗ್, ಅಪ್ಲೋಡ್ ಜವಾಬ್ದಾರಿ ನಿರ್ವಹಿಸುತ್ತಾರೆ. ತಂದೆ ವೆಂಕಟ್ರಮಣ ಭಟ್, ತಾಯಿ ಸುಲೋಚನಾ, ಅಕ್ಕ ಪ್ರಸನ್ನ, ಭಾವ ಮಹಾಬಲೇಶ್ವರ ಭಟ್ ಹಾಗೂ ಮಾವಂದಿರು ಇವರಿಗೆ ರೆಸಿಪಿ ಐಡಿಯಾ, ಪರಿಕರ ಹೊಂದಾಣಿಕೆ ಇತ್ಯಾದಿಗಳಿಗೆ ನೆರವಾಗುತ್ತಾರೆ. ಇವರು ಮಾಡುವ ವೀಡಿಯೋಗಳಿಗೆ ಇಂಗ್ಲಿಷ್ ನಲ್ಲಿ ಕೂಡ ಸಬ್ ಟೈಟಲ್ಸ್ ಹಾಕಿ ಇತರ ಭಾಷಿಕರಿಗೂ ತಿಳಿಯುವಂತೆ ಮಾಡುತ್ತಾರೆ.