ಮಗುವಿನ ಆರೈಕೆಗೆ ಮಹಿಳೆಯರಿಗೆ ಮಾತ್ರ ನೀಡಲಾಗುತ್ತಿದ್ದ ಆರು ತಿಂಗಳ ರಜೆಯ ಸೌಲಭ್ಯ ಇನ್ನು ಮುಂದೆ ಒಂಟಿ ಪೋಷಕರಾಗಿರುವ ಸರ್ಕಾರಿ ಪುರುಷ ನೌಕರರಿಗೂ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಅವರ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳ ಅವಧಿಗೆ ಅಂದರೆ, ಒಟ್ಟು 180 ದಿನಗಳಿಗೆ ಮೀರದಂತೆ ಮಗುವಿನ ಆರೈಕೆಯ ರಜೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಂಜೂರು ಮಾಡಿ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಜಯ್ ಎಸ್ ಕೊರಡೆ ಆದೇಶ ಹೊರಡಿಸಿದ್ದಾರೆ.
ಮಗುವಿನ ಆರೈಕೆಗೆ ಪುರುಷ ನೌಕರರಿಗೆ ರಜೆ ಅವಶ್ಯಕತೆಯನ್ನು ಮನಗಂಡ ಸರ್ಕಾರ ಈ ಮಹತ್ವದ ಆದೇಶ ಹೊರಡಿಸಿದೆ. ಇದುವರೆಗೆ ಈ ಸೌಲಭ್ಯ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಮಾತ್ರ ಇತ್ತು. ಇದೀಗ ಈ ಸೌಲಭ್ಯವನ್ನು ಪುರುಷ ನೌಕಕರಿಗೂ ವಿಸ್ತರಿಸಲಾಗುತ್ತಿದೆ. ಕೆಲ ಷರತ್ತುಗಳೊಂದಿಗೆ ಈ ಸೌಲಭ್ಯವನ್ನು ಪುರುಷ ನೌಕರರಿಗೆ ನೀಡಾಲಾಗುತ್ತಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ.
ಪುರುಷ ನೌಕರರಿಗೆ ಮಗುವಿನ ಆರೈಕೆ ಸೌಲಭ್ಯದ ಷರತ್ತುಗಳೇನು?
*ಒಂಟಿ ಪೋಷಕರಾಗಿರುವ, ಅವಿವಾಹಿತ, ವಿವಾಹಿತ-ವಿಚ್ಚೇದಿತ, ವಿಧುರ ರಾಜ್ಯ ಪುರುಷ ಸರ್ಕಾರಿ ನೌಕರರಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ.
*ರಾಜ್ಯ ಪುರುಷ ಸರ್ಕಾರಿ ನೌಕರರಿಗೆ ಅವರ ಇಡೀ ಸೇವಾವಧಿಯ ಗರಿಷ್ಠ 6 ತಿಂಗಳ ಅವಧಿಗೆ ಮಗುವಿನ ಆರೈಕೆ ರಜೆ ಪಡೆಯಬಹುದು. ಅಂದರೆ ಗರಿಷ್ಠ 180 ದಿನಗಳ ಕಾಲ ಮಗುವಿನ ಆರೈಕೆ ರಜೆ ಪಡೆಯಬಹುುದು.
*ಒಮ್ಮೆ ಈ ರಜೆ ಪಡೆದರೆ ಮತ್ತೆ ಮಗುವಿನ ಆರೈಕೆ ರಜೆ ಪಡೆಯಲು ಸಾಧ್ಯವಿಲ್ಲ.
*ಮಗುವಿನ ಆರೈಕೆ ರಜೆ ಪಡೆದ ಅವಧಿಯಲ್ಲಿ ಪುರುಷ ನೌಕರರು ವಿವಾಹವಾದರೆ ರಜೆ ರದ್ದಾಗಲಿದೆ.