ಪ್ರತಿದಿನ ಜನರು ಮೊಬೈಲ್ ಫೋನ್ನಲ್ಲಿ ಹೆಚ್ಚು ಬಳಸುವ ಆಪ್ ಎಂದರೆ ಅದು ವಾಟ್ಸಪ್. ಈ ಜನಪ್ರಿಯ ಸ್ಮಾರ್ಟ್ಫೋನ್ ಅಪ್ಲಿಕೇಷನ್ ಅನ್ನು ಬಹುತೇಕ ಎಲ್ಲರೂ ಬಳಸುತ್ತಿದ್ದಾರೆ. ವಾಟ್ಸಾಪ್ ಇತ್ತೀಚಿನ ದಿನಗಳಲ್ಲಿ ನಕಲಿ ಸುದ್ದಿ ಮತ್ತು ವಂಚನೆಗಳಿಗೆ ತಾಣವಾಗಿ ಮಾರ್ಪಟ್ಟಿದೆ. ವಾಟ್ಸಪ್ ಜನಪ್ರಿಯತೆಯನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ವಂಚಕರು ಸುಳ್ಳು ಸುದ್ದಿಯನ್ನು ಹರಡಲು ಮತ್ತು ಬಳಕೆದಾರರನ್ನು ವಂಚಿಸಲು ವಾಟ್ಸಪ್ನ್ನು ಬಳಸಿಕೊಳ್ಳುತ್ತಿದ್ದಾರೆ.
“ಪ್ರಸ್ತುತ, ವಾಟ್ಸಾಪ್ನಲ್ಲಿ ಹೊಸ ಸಂದೇಶವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅದರಲ್ಲಿ “ಪಿಂಕ್ ವಾಟ್ಸಾಪ್” ಡೌನ್ಲೋಡ್ ಮಾಡಲು ಲಿಂಕ್ ಕಳುಹಿಸಲಾಗುತ್ತಿದೆ. ಇದರಲ್ಲಿ ಹೊಸ ವೈಶಿಷ್ಟ್ಯಗಳೊಂದಿಗೆ ವಾಟ್ಸಾಪ್ನ ಹೊಸ ಲುಕ್ ಆನಂದಿಸಲು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಲು ಕೇಳಲಾಗುತ್ತಿದೆ. ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ನಿಮ್ಮ ಮೊಬೈಲ್ಗೆ ದುರುದ್ದೇಶಪೂರಿತ ಸಾಫ್ಟ್ವೇರ್ ಇನ್ಸ್ಟಾಲ್ ಮಾಡಲಾಗುತ್ತದೆ. ಪ್ರತಿದಿನ ಆನ್ಲೈನ್ ವಂಚಕರು ಹೊಸ ಹೊಸ ಟ್ರಿಕ್ಸ್ಗಳ ಜತೆಗೆ ಆಗಮಿಸುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕು. ಎಲ್ಲಾದರೂ ಇಂತಹ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ಫೋನ್ ಅನ್ನು ವಂಚಕರು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬಹುದು. ಡಿಜಿಟಲ್ ಜಗತ್ತಿನಲ್ಲಿ ಯಾವಾಗಲೂ ಸುರಕ್ಷಿತವಾಗಿರಿ” ಎಂದು ಮುಂಬೈ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏನಿದು ವಾಟ್ಸಾಪ್ ಪಿಂಕ್:
ನಿಮಗೆ ಪರಿಚಯವೇ ಇಲ್ಲದ ನಂಬರ್ನಿಂದ ಆಂಡ್ರಾಯ್ಡ್ ಮೊಬೈ ಬಳಕೆದಾರರಿಗೆ ಫೇಕ್ ಲಿಂಕ್ ಬರುತ್ತದೆ. ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಿದ ಬಳಿಕ ತನ್ನಿಂದ ತಾನೇ ಆ ಸಾಫ್ಟ್ವೇರ್ ನಿಮ್ಮ ಮೊಬೈಲ್ನಲ್ಲಿ ಇನ್ಸ್ಟಾಲ್ ಆಗುತ್ತದೆ. ಬಳಕೆದಾರರ ಫೋನ್ಗೆ ವೈರಸ್ ತುತ್ತಾಗಬಹುದು ಮತ್ತು ವಾಟ್ಸಾಪ್ನಲ್ಲಿ ಇತರ ಬಳಕೆದಾರರನ್ನು ಸಂಪರ್ಕಿಸುವ ಜನರ ಮೊಬೈಲ್ಗೂ ಈ ವೈರಸ್ ಹೋಗಲಿದೆ. ಈ ಸಾಫ್ಟ್ವೇರ್ ಮೊಬೈಲ್ ಬಳಕೆದಾರನಿಗೆ ಗೊತ್ತಿಲ್ಲದೇ, ಆತನ ಮೊಬೈಲ್ನಲ್ಲಿ ಇನ್ಸ್ಟಾಲ್ ಆಗುತ್ತದೆ. ಬೇಕಾಬಿಟ್ಟಿ ಜಾಹೀರಾತುಗಳನ್ನು ಈ ವೈರಸ್ ಪ್ರದರ್ಶನ ಮಾಡುತ್ತದೆ. ನಕಲಿ ವಾಟ್ಸಾಪ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡುವ ಬಳಕೆದಾರರು ತಮ್ಮ ಮೊಬೈಲ್ನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಾರೆ. ಕೊನೆಗೆ ಅವರ ಮೊಬೈಲ್ ಸಂಪೂರ್ಣವಾಗಿ ಹ್ಯಾಕ್ ಆಗಲಿದೆ. ಅವರ ಪ್ರಮುಖ ವೈಯಕ್ತಿಕ ಡೇಟಾಗಳಾದ ಫೋಟೋ, ಒಟಿಪಿ, ಸಂಪರ್ಕ ಸಂಖ್ಯೆ ಸೇರಿದಂತೆ ಇನ್ನೂ ಕೆಲವು ಅಗತ್ಯ ದಾಖಲೆಗಳನ್ನು ವಂಚಕರು ಪಡೆದುಕೊಳ್ಳಲಿದ್ದಾರೆ.
ವೈರಲ್ ಸಂದೇಶದಲ್ಲಿ ನೀಡಿರುವ ಲಿಂಕ್ ಕ್ಲಿಕ್ ಮಾಡಿದರೆ ಏನಾಗುತ್ತದೆ?
* ಈ ಲಿಂಕ್ ಕ್ಲಿಕ್ ಮಾಡಿ ಅದನ್ನು ಡೌನ್ಲೋಡ್ ಮಾಡುವುದೃಂದ ಬಳಕೆದಾರರ ಸೂಕ್ಷ್ಮ ಮಾಹಿತಿ ಕಳುವಾಗಬಹುದು.
* ಅವರ ಸಂಪರ್ಕ ಸಂಖ್ಯೆಗಳು ಮತ್ತು ಉಳಿಸಿದ ಚಿತ್ರಗಳ ಅನಧಿಕೃತವಾಗಿ ಬಳಕೆಯಾಗಬಹುದು.
*ಬ್ಯಾಂಕ್ ಖಾತೆ ಖಾಲಿ ಆಗಬಹುದು.
*ಸ್ಪ್ಯಾಮ್ ದಾಳಿಗೆ ಒಳಗಾಗಬಹುದು.
ಇದರಿಂದ ಸುರಕ್ಷಿತವಾಗಿರುವುದು ಹೇಗೆ?
ವಾಟ್ಸಾಪ್ ಬಳಕೆದಾರರು ವೈರಲ್ ಪಿಂಕ್ ವಾಟ್ಸಾಪ್ ಹಗರಣದಲ್ಲಿ ಸಿಲುಕಿಕೊಳ್ಳುವುದನ್ನು ಹೇಗೆ ತಪ್ಪಿಸಬಹುದು ಎಂಬ ಬಗ್ಗೆಯೂ ಕೂಡ ಪೊಲೀಸರು ಸಲಹೆ ನೀಡಿದ್ದಾರೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
* ಮೊದಲನೆಯದಾಗಿ, ನಿಮ್ಮ ಮೊಬೈಲ್ನಲ್ಲಿ ನಕಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿದ್ದರೆ, ತಕ್ಷಣ ಅದನ್ನು ಅನ್ಇನ್ಸ್ಟಾಲ್ ಮಾಡಿ.
* ಯಾವುದೇ ಅಪರಿಚಿತ ಮೂಲಗಳಿಂದ ಸ್ವೀಕರಿಸಿದ ಲಿಂಕ್ಗಳ ದೃಢೀಕರಣವನ್ನು ನೀವು ಪರಿಶೀಲಿಸುವವರೆಗೆ ಕ್ಲಿಕ್ ಮಾಡುವುದನ್ನು ತಪ್ಪಿಸಿ.
* ಅಧಿಕೃತ Google Play Store ಅಥವಾ iOS ಆಪ್ ಸ್ಟೋರ್ ಅಥವಾ ಕಾನೂನುಬದ್ಧ ವೆಬ್ಸೈಟ್ಗಳಿಂದ ಮಾತ್ರ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿ.
* ಸರಿಯಾದ ದೃಢೀಕರಣ ಅಥವಾ ಪರಿಶೀಲನೆ ಇಲ್ಲದೆ ಇತರರಿಗೆ ಯಾವುದೇ ಲಿಂಕ್ ಅಥವಾ ಸಂದೇಶವನ್ನು ಫಾರ್ವರ್ಡ್ ಮಾಡಬೇಡಿ.
* ಲಾಗಿನ್ ರುಜುವಾತುಗಳು, ಪಾಸ್ವರ್ಡ್ಗಳು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳು ಸೇರಿದಂತೆ ಅಂತಹ ಯಾವುದೇ ಮಾಹಿತಿಯನ್ನು ಆನ್ಲೈನ್ನಲ್ಲಿ ಯಾರೊಂದಿಗಾದರೂ ಹಂಚಿಕೊಳ್ಳುವ ತಪ್ಪನ್ನು ಎಂದಿಗೂ ಮಾಡಬೇಡಿ