ಕನ್ನಡ ಮತ್ತು ಹಿಂದಿ ಇವರಡು ಭಾಷೆಗಳೂ ಒಂದೇ ಬಗೆಯ ಸಂಸ್ಕೃತಿ, ನಾಗರೀಕತೆ ಮತ್ತು ಜನಜೀವನಗಳನ್ನು ಹಂಚಿಕೊಂಡಿರುವುದರಿಂದ ಇವೆರಡು ಸಾಹಿತ್ಯಗಳ ನಡುವೆ ಸೌಹಾರ್ದ ಹೆಚ್ಚು, ರಾಷ್ಟ್ರೀಯ ಕಾರಣಗಳಿಂದಾಗಿ ಈಚೆಗೆ ಹಿಂದಿಗೆ ಹೆಚ್ಚು ಬೆಂಬಲ ಸಿಗುತ್ತಿದ್ದು, ಹಿಂದಿಯ ಸಾಹಿತ್ಯ ತುಂಬ ವ್ಯಾಪಕವಾಗುತ್ತಿದೆ. ಹಾಗೂ ಇಡೀ ಭಾರತೀಯ ಸಾಹಿತ್ಯದ (ವಿಶೇಷವಾಗಿ ಉತ್ತರ ಭಾರತದ ಸಾಹಿತ್ಯ ಅಧ್ಯಯನ) ಹಿಂದಿಯ ಮೂಲಕ ಸಾಧ್ಯವಾಗುತ್ತಿರುವುದರಿಂದ ಹಿಂದಿಯಿಂದ ಇತರ ಭಾರತೀಯ ಭಾಷೆಗಳಿಗೂ ಇತರ ಭಾರತೀಯ ಭಾಷೆಗಳಿಂದ ಹಿಂದಿಗೂ ತರ್ಜುಮೆಗಳು ಯಥೇಚ್ಛವಾಗಿ ನಡೆಯುತ್ತಿದೆ.
ದಕ್ಷಿಣದ ಆರಸರು ಉತ್ತರದ ಮೇಲೆ ಹಾಗೂ ಅಲ್ಲಿಯವರು ಈ ನಾಡಿನ ಮೇಲೆ ದಂಡೆತ್ತಿ ಹೋದಾಗ ನಡೆದ ರಾಜಕೀಯ ವಿದ್ಯಮಾನಗಳು ಪರಿಣಾಮಗಳು ಏನೇ ಇರಲಿ, ಸಾಂಸ್ಕೃತಿಕವಾಗಿ ಸಾಹಿತ್ಯಕವಾಗಿ ಸೌಹಾರ್ದಗಳು ಏರ್ಪಟ್ಟಿರುವುದುಂಟು. ಕತ್ತಿ ಹಿಡಿದ ಕವಿಗಳನ್ನು ನಾವು ಈ ಕಾಲದಲ್ಲಿ ನೋಡಬಹುದು. ಕನ್ನಡದ ಕವಿ ಪಂಪ ಹಾಗೂ ಹಿಂದಿ ಕವಿ ಚಂದಬರದಾಯಿ ಇವರಿಬ್ಬರನ್ನು ಉದಾಹರಿಸಬಹುದು. ಪಂಪ ಯುಗದ ವೀರಕವಿಗಳಲ್ಲಿ ಕಂಡುಬರುವ ಎದೆಗಾರಿಕೆಯು ಹಿಂದಿಯ ವೀರಗಾಥಾ ಕಾಲದ ರಾಸೋ ಸಾಹಿತ್ಯದಲ್ಲೂ ಕಂಡುಬರುತ್ತದೆ. ಸಾಹಿತ್ಯ ರಚನೆಯ ಧೈಯಧೋರಣೆಗಳು ಸಮಾನ ಪರಿಸರದಲ್ಲಿ ಸಮಾನವಾಗಿರುತ್ತದೆ ಎಂಬುದಕ್ಕೆ ಇಂಥ ಸಂಗತಿಗಳು ನಿದರ್ಶನವಾಗುತ್ತವೆ.
ಕನ್ನಡನಾಡಿನ ಅನೇಕ ಭಾಗಗಳು ಮೌರ್ಯ ಚಕ್ರಾಧಿಪತ್ಯಕ್ಕೆ ಒಳಪಟ್ಟಿತ್ತೆಂದು ಅಶೋಕನ ಶಿಲಾಶಾಸನಗಳಿಂದ ವ್ಯಕ್ತವಾಗುತ್ತದೆ. ಉತ್ತರ ಭಾರತದಲ್ಲಿ ಕ್ಷಾಮ ತಲೆದೋರಿದಾಗ ಮೌರ್ಯ ವಂಶದ ಚಂದ್ರಗುಪ್ತ ತನ್ನ ಧರ್ಮಗುರು ಶ್ರುತಕೇವಲ ಭದ್ರಬಾಹುವಿನೊಡನೆ ಶ್ರವಣಬೆಳಗೊಳಕ್ಕೆ ಬಂದು ನೆಲೆಸಿದನೆಂದು ಜೈನಧರ್ಮದ ಇತಿಹಾಸದಿಂದ ತಿಳಿದುಬರುತ್ತದೆ. ಅಂದಿನಿಂದ ಜೈನ ಸಮುದಾಯದವರಿಗೆಲ್ಲ ಶ್ರವಣಬೆಳಗೊಳ ದೊಡ್ಡ ಪುಣ್ಯಕ್ಷೇತ್ರವಾಯಿತು. ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ಕಂದಬ ಮಯೂರ ಶರ್ಮ ಸೇಂದ್ರಕ, ತ್ರಿಕೂಟ ಆಭೀರ ಮೊದಲಾದ ರಾಜ್ಯಗಳನ್ನು ಗೆದ್ದು ಅನೇಕ ವೈದಿಕ ಕುಟುಂಬಗಳು ಗಂಗಾ ಪ್ರಾಂತ್ಯದಿಂದ ಕರ್ನಾಟಕ್ಕೆ ಬಂದು ನೆಲಸುವಂತೆ ಮಾಡಿದ್ದನಂತೆ.
ಅಂತೆಯೇ , ಕನ್ನಡನಾಡಿನ ರಾಜವಂಶದವರು ಉತ್ತರ ಭಾರತದ ಅರಸರೊಡನೆ ವೈವಾಹಿಕ ಸಂಬಂಧಗಳನ್ನು ಇಟ್ಟುಕೊಂಡಿದ್ದರೆಂಬುದನ್ನು ಸ್ಮರಿಸ ಬಹುದು. ಕರ್ಣಾಟಕದ ರಾಷ್ಟ್ರಕೂಟರೇ ಕ್ರಮೇಣ ರಾಜಸ್ಥಾನದ ರಾಠೋರರಾದರೆಂದೂ ಚಾಲುಕ್ಯರೇ ಸೋಲಂಕಿಗಳಾದರೆಂದೂ ಕೆಲವರು ಅಭಿಪ್ರಾಯ ಪಡುತ್ತಾರೆ.
ಇವರಡು ಪ್ರದೇಶಗಳ ನಡುವೆ ಉಂಟಾಗಿದ್ದ ರಾಜಕೀಯ ಪ್ರಭಾವದ ಪರಿಣಾಮವಾಗಿ ಜಾತಿಮತ ಭೇದವಿಲ್ಲದೆ ಅನೇಕ ಒಕ್ಕಲುಗಳು ಉತ್ತರದಿಂದ ಕರ್ನಾಟಕಕ್ಕೂ, ಕರ್ನಾಟಕದಿಂದ ಉತ್ತರಕ್ಕೂ ವಲಸೆ ಬಂದು ನೆಲೆಸುತ್ತಿದ್ದವು ಎನ್ನಲಾಗಿದೆ. ಕದಂಬ ಮಯೂರ ಶರ್ಮ, ರೋಹಿಲ ಖಂಡದ ಅಹಿಚ್ಛತ್ರನಗರ ದಿಂದ ಬ್ರಾಹ್ಮಣ ಕುಟುಂಬಗಳನ್ನು ಕರೆತಂದು ತುಳುನಾಡಿನಲ್ಲಿ ನೆಲೆಯಾಗಿಸಿದ, ಇಂದು ಕರ್ನಾಟಕದಲ್ಲಿರುವ ಶಿವಳ್ಳಿ, ಹೈಗ ಸಹವಾಸಿ, ವೀರಬಣಂಜು, ಸಾರಸ್ವತ ಮೊದಲಾದ ಬ್ರಾಹ್ಮಣ ಕುಲ ವೃತ್ತಗಳು ಔತ್ತರೇಯ ಮೂಲದವೆನ್ನಲಾಗಿದೆ. ಕಾಶ್ಮೀರದ ಕಾಳಾಮುಖಪಂಥ ಪಂಡಿತರು ಕನ್ನಡನಾಡಿನಲ್ಲಿ ನೆಲೆಯೂರಿ ಗೌರವಗಳಿಸಿದ್ದರೆಂದು ಇತಿಹಾಸದಿಂದ ತಿಳಿದುಬರುತ್ತದೆ. ಚಾಲುಕ್ಯ ವಿಕ್ರಮಾದಿತ್ಯನ ಕಾಲದಲ್ಲಿ ಕರ್ಣಾಟಕ ಕಾಶ್ಮೀರವನ್ನು ಮುಟ್ಟಿತು. ಬಿಲ್ಬಣ, ವಿಜ್ಞಾನೇಶ್ವರ ಮುಂತಾದ ಸಂಸ್ಕೃತ ವಿದ್ವಾಂಸರು ಕನ್ನಡನಾಡಿನಲ್ಲಿ ಆಶ್ರಯ ಪಡೆದಿದ್ದರೆಂಬುದು ವಿದ್ವತ್ತಿನ ವಿನಿಮಯಕ್ಕೆ ಒಂದು ನಿದರ್ಶನ. ಕಡೆಯ ಹಿಂದೂ ಸಾಮ್ರಾಟನಾಗಿದ್ದ ಪೃಥ್ವಿರಾಜ ಚೌಹಾನನ ಆಸ್ಥಾನದಲ್ಲಿ ಕರ್ನಾಟಕ ಅಥವಾ ಕರ್ನಾಟ ಎಂಬ ಹೆಸರಿನ ನರ್ತಕಿಯಿದ್ದಳೆನ್ನಲಾಗಿದೆ. ಸಂಗೀತ ಕರ್ನಾಟಕದಲ್ಲಿ ಹುಟ್ಟಿ ಅಯೋಧ್ಯೆಯಲ್ಲಿ ಬೆಳೆಯಿತಂಬ ನಾಣ್ಣುಡಿಯೂ ಉಂಟು. ಒಂದು ರೀತಿಯಲ್ಲಿ ಉತ್ತರ ಭಾರತದ ಸಂಗೀತಕ್ಕೆ ಬುನಾದಿ ಹಾಕಿಕೊಟ್ಟದ್ದನ್ನು ಕರ್ನಾಟಕದ ಗೋಪಾಲನಾಯಕ. ಕನ್ನಡನಾಡಿನ ವೀಣಾವಾದನದ ‘ವೈಖರಿಯನ್ನು ಕುರಿತು ಹೇಳುವಂಥ ಕಾವ್ಯವೊಂದು ರಾಜಸ್ಥಾನಿ ಭಾಷೆಯಲ್ಲಿ ದೊರೆತಿದೆ. ನಾರಾಯಣದಾಸ ಎಂಬಾತ (೧೯ನೇ ಶತಮಾನದಲ್ಲಿ) ಬರೆದ ಛತಾಯಿ ವಾರ್ತಾ ಎಂಬ ಈ ಕಾವ್ಯದಲ್ಲಿ ಕನ್ನಡ ನಾಡಿನ ಹೊಯ್ಸಳ ರಾಜಕುಮಾರನೊಬ್ಬನು ನಾಯಕನಾಗಿರುವುದು ಕುತೂಹಲಕರ ಸಂಗತಿಯಾಗಿದೆ.
ಭಾರತದಲ್ಲಿ ಹಿಂದೂಧರ್ಮದ ಸ್ವರೂಪವನ್ನು ನಿರ್ದಿಷ್ಟವಾದ ಶಾಸ್ತ್ರಗಳ, ಆಧಾರದ ಮೇಲೆ ಪ್ರತಿಷ್ಠಾಪಿಸಿದವರು ದಾಕ್ಷಿಣಾತ್ಯರು. ಆಚಾರ್ಯರಾದ ಶಂಕರಚಾರ್ಯರು, ಮಧ್ವಾಚಾರ್ಯರು ಹಾಗೂ ರಾಮಾನುಜರು ದಾಕ್ಷಿಣಾತ್ಯರಾಗಿದ್ದು. ಇವರ ಪ್ರಭಾವ ಉತ್ತರ ಭಾರತದ ಜನಜೀವನ ಹಾಗೂ ಧಾರ್ಮಿಕ ಸಂಪ್ರದಾಯಗಳ ಮೇಲೆ ಸಾಕಷ್ಟು ಬಿದ್ದಿದೆ. ಶಂಕರಾಚಾರ್ಯರು ಉತ್ತರ ಭಾರತದಲ್ಲಿ ತಮ್ಮ ಶಕ್ತಿಪೀಠವನ್ನು ಸ್ಥಾಪಿಸಿದ್ದಲ್ಲದೆ, ಬೌದ್ಧ ಧರ್ಮದ ಪ್ರಭಾವ ಜಾಸ್ತಿಯಾದಾಗ ಮುಂಡನ ಮಿಶ್ರನೊಂದಿಗೆ ಶಂಕರಾಚಾರ್ಯರು ವಾದ ಮಾಡಿ ಜಯ ಸಾಧಿಸಿದ್ದಾರೆ.ಮಧ್ವಾಚಾರ್ಯರು ಉತ್ತರದ ಯಾತ್ರೆಯನ್ನು ಕೈಗೊಂಡಾಗ ಇವರಿಂದ ವಲ್ಲಭಾಚಾರ್ಯರು ಪ್ರಭಾವಿತರಾದರು ಮತ್ತು ವಲ್ಲಭ ಪಂಥವು ಪ್ರಾರಂಭವಾಯಿತು ಎಂಬುದಾಗಿಯು ಮತ್ತು ಮಧ್ವಾಚಾರ್ಯರು ಬದರಿಯಲ್ಲೇ ಅದೃಶ್ಯರಾದರೆಂಬ ಪ್ರತೀತಿಯಿದೆ. ಮತ್ತು ಕೇದಾರನಾಥನ ಮಂದಿರದ ಹಿಂಬದಿಯಲ್ಲೇ ಶಂಕರಾಚಾರ್ಯರ ಸಮಾಧಿಯಿದೆ. ನಾಥ ಸಂಪ್ರದಾಯ ಗೋರಖನಾಥ, ಮತ್ಯೇಂದ್ರನಾಥರ ಪ್ರಭಾವ ಕರ್ನಾಟಕದಲ್ಲಿರುವ ಆದಿಚುಂಚನಗಿರಿ ಸಂಸ್ಥಾನವು ಸಹ ಇದೇ ನಾಥ ಪರಂಪರೆಗೆ ಸೇರಿದ್ದು ಎಂದು ಇಲ್ಲಿ ಸ್ಮರಿಸಬಹುದು.
ವೀರಶೈವ ಧರ್ಮದ ಪ್ರಭಾವವೂ ಕೆಲಮಟ್ಟಿಗೆ ಉತ್ತರಭಾರತದ ಮೇಲಾಗಿರುವುದು ಕಂಡುಬರುತ್ತದೆ. ಕನ್ನಡನಾಡಿನ ವೀರಶೈವ ಸಂತರ ವಿಚಾರ ಧಾರೆಯನ್ನು ಉತ್ತರ ಭಾರತಕ್ಕೆ ಹರಿಸಿದವರು ವಾಸ್ತವವಾಗಿ ಮಹಾರಾಷ್ಟ್ರದ ಸಂತರು, ಪಂಢರಪುರಕ್ಕೆ ಸಮೀಪದಲ್ಲೇ ಬಿಜಾಪುರದಲ್ಲಿ ನಡೆದ ಬಸವಣ್ಣ ಮುಂತಾದವರ ವಿಚಾರಕ್ರಾಂತಿ, ಭಕ್ತಿಯ ಆಂದೋಲನದ ಕಾವು ಮಹಾರಾಷ್ಟ್ರದ ಸಂತರಿಗೆ ತಟ್ಟಿರಲೂ ಸಾಧ್ಯ. ಕಬೀರನ ವಿಚಾರಧಾರೆಗಳು ಮತ್ತು ಕರ್ನಾಟಕದ ಶಿಶುನಾಳ ಶರೀಫರ ವಿಚಾರಗಳಲ್ಲಿ ಸಾಮ್ಯತೆಗಳು ಕಂಡು ಬರುತ್ತವೆ.
ಒಂದು ಬಗೆಯಲ್ಲಿ ಭಾರತದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿ ಹಿಂದಿ ಪ್ರಚಾರ ಚಳವಳಿಗೂ ಪ್ರೇರಣೆ ನೀಡಿತು. ದಕ್ಷಿಣ ಭಾರತದಲ್ಲಿ ಹಿಂದಿಯನ್ನು ಕಲಿಯುವುದು ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳ ಉತ್ಪನ್ನವಾಗಿ ಪರಿಣಮಿಸಿ ರಾಷ್ಟ್ರೀಯ ಜಾಗೃತಿಯನ್ನು ಉಂಟು ಮಾಡುವುದರಲ್ಲಿ ಸಾಕಷ್ಟು ಯಶಸ್ವಿಯಾಯಿತು. ಖಾದಿ ಪ್ರಚಾರ ಹಿಂದಿ ಪ್ರಚಾರ ಮುಂತಾದವು ದೇಶಸೇವೆಯ, ದೇಶಭಕ್ತಿಯ ಅಭಿವ್ಯಕ್ತಿಯ ಅಂಗಗಳೆನಿಸಿಕೊಂಡವು. ಸ್ವಾತಂತ್ರ್ಯದ ಅನಂತರ ಹಿಂದಿ ಭಾಷೆಗೆ ಸರ್ಕಾರದಿಂದ ಅಧಿಕೃತ ಸ್ಥಾನಮಾನಗಳು ದೊರೆತು . ಅದು ಜನಸಾಮಾನ್ಯರ ಭಾಷೆಯಾಗಿ, ವ್ಯಾವಹಾರಿಕ ಸಂಪರ್ಕ ಮಾಧ್ಯಮವಾಗಿ ಜನತೆಯನ್ನು ಆಕರ್ಷಿಸಿತು. ಇಂಗ್ಲಿಷರ ವಿರುದ್ಧ ಸಿಡಿದೆದ್ದ ಭಾರತೀಯರಿಗೆ ಹಿಂದಿ ಒಂದು ವಿಧದಲ್ಲಿ ಸ್ವಾವಲಂಬನೆಯ ಮಂತ್ರವಾಗಿ ಪರಿಣಮಿಸಿತು. ವ್ಯಾಪಕವಾದ ಪ್ರಚಾರ ಚಳವಳಿಯಿಂದಾಗಿ ಹಿಂದಿ ಜನತೆಯ ಮಟ್ಟಕ್ಕೆ ತಾನೇ ಇಳಿದು ಬಂದು ಜನಪ್ರಿಯವಾಯಿತು.
ಉತ್ತರ ಭಾರತದಲ್ಲಿ ಸಾಕಷ್ಟು ವ್ಯಾಪ್ತಿ ಹಾಗೂ ಪ್ರೋತ್ಸಾಹಗಳು ದೊರಕಿದ ಕಾರಣದಿಂದಾಗಿ ಹಿಂದೀ ಸಾಹಿತ್ಯದಲ್ಲಿ ಭಾರತದ ತತ್ಕಾಲೀನ ಪರಿಸ್ಥಿತಿಯ ಎಲ್ಲ ಅಂಶಗಳೂ ಪ್ರತಿಫಲಿಸತೊಡಗಿದವು. ಸ್ವಾತಂತ್ರ್ಯ ಚಳುವಳಿಯ ಸಾಹಿತ್ಯದಲ್ಲಿ ಗೋಚರವಾಗತೊಡಗಿದವು. ದೇಶಪ್ರೇಮಕ್ಕೆ ಸಂಬಂಧಿಸಿದ ಗೀತೆಗಳು ಯಾವುದೇ ಭಾಷಾಭೇದವಿಲ್ಲದೆ ನಾಡಿನಾದ್ಯಂತ ಎಲ್ಲ ಮುಖಗಳೂ ಕೋಟಿ ಕೋಟಿ ಕಂಠಗಳಿಂದ ಮೊಳಗತೊಡಗಿದವು. ಪ್ರೇಮಚಂದರಂಥ ಲೇಖಕರ ಕೈಯಲ್ಲಿ ಹಿಂದಿ ಸಾಹಿತ್ಯ ರಾಷ್ಟ್ರವ್ಯಾಪ್ತಿಯನ್ನೇ ಗಳಿಸಿಕೊಂಡಿತು. ಕೇವಲ ಆದರ್ಶವನ್ನೇ ಎತ್ತಿಹಿಡಿಯುತ್ತಿದ್ದ ಸಾಹಿತ್ಯದಲ್ಲಿ ನೈಜತೆಯ ಉಸಿರನ್ನು ತುಂಬಿ ಸಾಹಿತ್ಯದಲ್ಲಿ ಮಣ್ಣಿನ ವಾಸನೆ ಮೂಡಿಸಿದವರೇ ಪ್ರೇಮಚಂದರು. ಸಾಮಾಜಿಕ ಕಾದಂಬರಿಗಳಲ್ಲಿ ಸಮಾಜ ಮತ್ತು ದೇಶಪ್ರೇಮ, ವಿಧವಾ ವಿವಾಹ, ಏರುಪೇರಾದ ಮದುವೆಗಳು, ವರದಕ್ಷಿಣೆ, ಬಡತನ ಶ್ರೀಮಂತಿಕೆಗಳ ವೈಪರೀತ್ಯ ಇವೇ ಮೊದಲಾಗಿ ಪ್ರೇಮಚಂದ್ ಮುಟ್ಟದ ರಾಷ್ಟ್ರೀಯ ಸಮಸ್ಯೆಯೆ ಇಲ್ಲವಾಗಿ ಕನ್ನಡ ಜನತೆಯನ್ನೂ ಆತ ಆಕರ್ಷಿಸಿದ್ದು ಸಹಜವೇ ಆಯಿತು. ಬಂಕಿಮಚಂದ್ರರಂತೆ ಪ್ರೇಮಚಂದರೂ ಕನ್ನಡಿಗರಿಗೆ ಪ್ರಿಯರಾದರು ಶರಚ್ಚಂದ್ರ, ಠಾಕೂರ್ ಮುಂತಾದವರ ಕೃತಿಗಳು ಹಿಂದಿ ಮೂಲಕವಾಗಿಯೇ ಕನ್ನಡಕ್ಕೆ ಇಳಿದಿದ್ದು.