ದೇಶದಲ್ಲಿ 9 ವರ್ಷದಿಂದ 13 ವರ್ಷ ವಯೋಮಿತಿಯ ಮಕ್ಕಳು ಸ್ಮಾರ್ಟ್ಫೋನ್ ಬಳಕೆ ಮಾಡುತ್ತಿದ್ದಾರೆ. ಮಕ್ಕಳು 3 ಗಂಟೆಗಿಂತಲೂ ಹೆಚ್ಚಿನ ಅವಧಿಯನ್ನೂ ಸ್ವಾರಸ್ಯಕರ ಲೋಕವನ್ನ ವಿಕ್ಷಿಸುವುದರಲ್ಲೆ ಕಳೆಯುತ್ತಾರೆ. ಕೊರೊನಾ ಅವಧಿಯಲ್ಲಿ ಆನ್ಲೈನ್ ಕ್ಲಾಸ್ ಕಾರಣಕ್ಕಾಗಿ ಸ್ಮಾರ್ಟ್ಫೋನ್ ಮೊರೆಹೋದ ಮಕ್ಕಳು ನಂತರದ ದಿನಗಳಲ್ಲಿ ಮೊಬೈಲ್ ದಾಸರಾಗಿದ್ದಾರೆ.
ಸ್ಮಾರ್ಟ್ಫೋನ್ ಪ್ರಪಂಚಕ್ಕೆ ನಿಮ್ಮ ಪುಟ್ಟ ಕಂದಮ್ಮ ಕಾಲಿಟ್ಟ ಕೂಡಲೇ ಅಲ್ಲಿರುವ ಸ್ವಾರಸ್ಯಕರ ಲೋಕ ಅವರ ಕಣ್ಣಿಗೆ ಕಾಣುತ್ತದೆ. ಒಮ್ಮೆ ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಹೋದರೆ ಸಾಕು ಆಮೇಲೆ ಅವರು ಅದನ್ನು ಮರಳಿಸುವ ಮಾತೇ ಇರುವುದಿಲ್ಲ.
ಇಂದಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ಸ್ಮಾರ್ಟ್ಫೋನ್ ಚಟಕ್ಕೆ ಬಲಿಯಾಗುತ್ತಿದ್ದಾರೆ. ಎಲ್ಲಾ ವಿಷಯದಲ್ಲಿ ಪುಟ್ಟ ಮಕ್ಕಳು ಅಪ್ಪ ಅಮ್ಮನನ್ನೇ ಅನುಕರಿಸುತ್ತವೆ. ಇನ್ನೀಗ ಸ್ಮಾರ್ಟ್ಫೋನ್ ಚಟದಲ್ಲೂ ಮಕ್ಕಳು ಪೋಷಕರನ್ನೇ ಅವಲಂಬಿಸಿವೆ ಎಂಬುದರಲ್ಲಿ ಸುಳ್ಳಿಲ್ಲ. ಮಕ್ಕಳ ಮುಂದೆ ನಾವು ಫೋನ್ ಹಿಡಿದು ಕೂತಂತೆಲ್ಲಾ ಅವರಿಗೆ ಕೂಡ ಈ ವಿಷಯದ ಮೇಲೆ ಆಸಕ್ತಿ ಬೆಳೆಯುತ್ತದೆ. ಇನ್ನು ಹೆಚ್ಚಿನ ಪೋಷಕರು ಮಕ್ಕಳಿಗೆ ಫೋನ್ ನೀಡಿ ಅವರಿಗೆ ಅದರ ಹುಚ್ಚು ಹಿಡಿಸಿಬಿಡುತ್ತಾರೆ.
ಸ್ಮಾರ್ಟ್ಫೋನ್ಗಳು ಯೂಟ್ಯೂಬ್, ಸಾಮಾಜಿಕ ಜಾಲತಾಣ, ಮತ್ತು ಸಾಕಷ್ಟು ವ್ಯಸನಕಾರಿ ಗೇಮಿಂಗ್ ಅಪ್ಲಿಕೇಶನ್ಗಳನ್ನು ನೀಡುತ್ತವೆ. ಗ್ರಾಫಿಕ್ಸ್ ಆಕರ್ಷಕವಾಗಿರುವುದರಿಂದ ಮತ್ತು ಅವುಗಳನ್ನು ಕಾರ್ಯನಿರತವಾಗಿರುವಂತೆ ಮತ್ತು ಪರದೆಯ ಮೇಲೆ ಅಂಟಿಕೊಂಡಿರುವುದರಿಂದ ಮಕ್ಕಳು ದೀರ್ಘ ಗಂಟೆಗಳ ಕಾಲ ಆಟಗಳನ್ನು ಆಡಲು ಆನಂದಿಸುತ್ತಾರೆ ಹಾಗೂ ಅದಕ್ಕೆ ಬೇಗನೇ ಮರುಳಾಗುತ್ತಾರೆ.
ಮಕ್ಕಳು ಸ್ಮಾರ್ಟ್ಫೋನ್ಗಳಲ್ಲಿ ಇತ್ತೀಚೆಗೆ ಹೆಚ್ಚು ಆಡುವುದೇ ಗೇಮ್ಸ್ಗಳನ್ನು. ಈ ಗೇಮ್ಸ್ಗಳು ಒಂದರಿಂದ ಒಂದು ಆಸಕ್ತಿಕರವಾಗಿದ್ದು ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಕಣ್ಣಿಗೆ, ಮೆದುಳಿಗೆ, ಬೆರಳುಗಳಿಗೆ ಇದರಿಂದ ಕೆಟ್ಟ ಪರಿಣಾಮ ಇದ್ದೇ ಇದೆ. ಆದರೆ ಮಕ್ಕಳಿಂದ ಫೋನ್ ಅನ್ನು ಬಲವಂತವಾಗಿ ಕಸಿದುಕೊಳ್ಳುವುದು ಅವರಲ್ಲಿ ಹಠ ಪ್ರವೃತ್ತಿಯನ್ನು ಇನ್ನಷ್ಟು ಹೆಚ್ಚಿಸಬಹುದು ಹಾಗಾಗಿ ಅವರಿಗೆ ಸಮಾಧಾನದಿಂದ ತಿಳಿಹೇಳಬೇಕು.
ನಮ್ಮ ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ, ಸದೃಢರಾಗಿ, ವಿವೇಕಯುತರಾಗಿ ಬೆಳೆಯುವಲ್ಲಿ ಪೋಷಕರ ಪಾತ್ರ ಹಿರಿದಾದುದು.
ಮಕ್ಕಳು ಫೋನ್ ಬಿಟ್ಟು ನಿಮ್ಮೊಂದಿಗೆ ಬೆರೆಯಬೇಕು ಎಂದಾದರೆ ಮೊದಲು ಅವರ ಮುಂದೆ ನೀವು ಸ್ಮಾರ್ಟ್ಫೋನ್ ಬಳಸುವುದನ್ನು ಕಡಿಮೆ ಮಾಡಬೇಕು. ಅವರೊಂದಿಗೆ ಬೇರೆ ಬೇರೆ ಆಟಗಳನ್ನು ಆಡುವುದು, ಹೊರಗಿನ ಪ್ರಪಂಚದೊಂದಿಗೆ ಬೆರೆಯುವಂತೆ ಮಾಡುವುದು, ಅಕ್ಕಪಕ್ಕದ ಮನೆಯ ಮಕ್ಕಳೊಂದಿಗೆ ಆಟವಾಡುವಂತೆ ಮಾಡುವುದು ಮೊದಲಾದ ಚಟುವಟಿಕೆಗಳನ್ನು ಮಾಡಬೇಕು. ಕ್ರಿಯಾತ್ಮಕ ಅಂಶಗಳನ್ನು ಬೆಳೆಸಲು ಮಕ್ಕಳನ್ನು ಒಂದಿಲ್ಲೊಂದು ಕೆಲಸಗಳಲ್ಲಿ ಬ್ಯುಸಿಯಾಗಿಸರಬೇಕು. ಆಟಪಾಠಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಲಿವಿಂಗ್ ರೂಮ್ನಲ್ಲಿ ಮಾತ್ರ ಫೋನ್ಗಳನ್ನು ಬಳಸಲು ಪ್ರಯತ್ನಿಸಿ ಮತ್ತು ಅಡುಗೆಮನೆಯಲ್ಲಿ ಮತ್ತು ಮಲಗುವ ಕೋಣೆಯ ಆವರಣದಲ್ಲಿ ಮೊಬೈಲ್ ಫೋನ್ಗಳನ್ನು ಬಳಸದಂತೆ ಪೋಷಕರು ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳಬೇಕು. ಮಗುವಿನ ಸಾಧನದ ಬಳಕೆಯನ್ನು ಮೇಲ್ವಿಚಾರಣೆ ಮಾಡಿ ಮತ್ತು ಪೋಷಕರ ನಿಯಂತ್ರಣ ಸಾಫ್ಟ್ವೇರ್ ಅನ್ನು ಬಳಸಿಕೊಂಡು ಅನುಚಿತ ವಿಷಯವನ್ನು ನಿರ್ಬಂಧಿಸಬೇಕು. ಸ್ಮಾರ್ಟ್ಫೋನ್ಗಳ ಸೀಮಿತ ಬಳಕೆ, ಗೇಮ್ಸ್ಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಿ. ಈ ವಿಷಯಕ್ಕೆ ಸಂಬಂಧಪಟ್ಟ ಕೆಲವೊಂದು ಘಟನೆಗಳನ್ನು ಅವರಿಗೆ ತಿಳಿಸಿಕೊಡುವುದು. ಮಕ್ಕಳು ತಮ್ಮೊಂದಿಗೆ ಆಡಲು ಬೆರೆಯಲು ಜನರ ಕೊರತೆ ಕಂಡಾಗ ತಮಗೆ ಆನಂದ ನೀಡುವ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಾಗಾಗಿ ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದು ಅವರೊಂದಿಗೆ ಆಟವಾಡುವುದು ಪೋಷಕರ ಜವಾಬ್ದಾರಿಯಾಗಿದೆ.