ಮಂಗಳೂರು : “ಕಳೆದ ಒಂದು ದಶಕದಿಂದ ಸಮುದಾಯದ ದುರ್ಬಲ ವರ್ಗದ ಸಬಲೀಕರಣಕ್ಕಾಗಿ ಮೈಕಲ್ ಡಿ ಸೊಜಾ ಅವರು ನೀಡುತ್ತಿರುವ ಆರ್ಥಿಕ ನೆರವು ಸಮಾಜದಲ್ಲಿ ಭರವಸೆಯನ್ನು ಹುಟ್ಟು ಹಾಕಿದೆ. ವಸತಿರಹಿತರಿಗೆ ವಸತಿ, ದುರ್ಬಲ ವರ್ಗದವರಿಗೆ ದುಬಾರಿ ಚಿಕಿತ್ಸಾವೆಚ್ಚ ಮತ್ತು ಉನ್ನತ ಶಿಕ್ಷಣ ವಂಚಿತರಿಗೆ ಬಡ್ಡಿರಹಿತ ಶಿಕ್ಷಣ ಸಾಲ ನೀಡುತ್ತಾ ಬಂದಿರುವ ಮೈಕಲ್ ಡಿ ಸೊಜಾ ಕುಟುಂಬ ನಮಗೆಲ್ಲ ಪ್ರೇರಣೆ. ಅವರ ಸಾಮಾಜಿಕ ದೂರದೃಷ್ಟಿಯ ಯೋಜನೆಗಳು ದುರ್ಬಲ ವರ್ಗವನ್ನು ಮೇಲೆತ್ತುವಲ್ಲಿ ಸಹಕಾರಿ” ಎಂದು ಮಂಗಳೂರು ಬಿಷಪ್ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನಾ ಅಭಿಪ್ರಾಯಪಟ್ಟರು.
ಅನಿವಾಸಿ ಭಾರತೀಯ ಉದ್ಯಮಿ ಹಾಗೂ ವಿಶನ್ ಕೊಂಕಣಿ ಪ್ರವರ್ತಕರಾಗಿರುವ ಮೈಕಲ್ ಡಿಸೋಜಾ ಮತ್ತು ಕುಟುಂಬದವರಿಂದ ಸಿಒಡಿಪಿಯಲ್ಲಿ ಸ್ಥಾಪಿಸಲ್ಪಟ್ಟ ‘ಎಜುಕೇರ್ ಎಂಡೋಮೆಂಟ್ ಫಂಡ್’ ಅನ್ನು ಮಂಗಳೂರು ಉದ್ಘಾಟಿಸಿ ಬಿಷಪ್ ಮಾತನಾಡುತ್ತಿದ್ದರು.
ನಂತೂರಿನ ಸಿಒಡಿಪಿ ಸಭಾಂಗಣದಲ್ಲಿ ಸೋಮವಾರ ದೀಪ ಬೆಳಗಿಸಿ ಸಾಂಕೇತಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಬಡ್ಡಿರಹಿತ ಸಾಲ ರೂಪದ ನೆರವನ್ನು ಹಸ್ತಾಂತರಿಸಿದ ಬಿಷಪ್ ಎಡುಕೇರ್ ಕಾರ್ಯಕ್ರಮದ ರೂವಾರಿ ಮೈಕಲ್ ಡಿ ಸೊಜಾ ಪತ್ನಿ ಶ್ರೀಮತಿ ಫ್ಲಾವಿಯಾ ಡಿ ಸೊಜಾ, ಪುತ್ರಿ ಶ್ರೀಮತಿ ನಿಶಾ ಡಿ ಸೊಜಾ ಹಾಗೂ ಕಾರ್ಯಕ್ರಮದ ಸಲಹೆಗಾರರಾಗಿರುವ ವಂ| ವಲೆರಿಯನ್ ಡಿ ಸೊಜಾ, ಸ್ಟೀಫನ್ ಪಿಂಟೊ, ಓಸ್ವಲ್ಡ್ ರೊಡ್ರಿಗಸ್, ಹೆನ್ರಿ ಡಿ ಸೊಜಾ ಮತ್ತು ಲೈನಲ್ ಆರಾನ್ಹಾ ಇವರಿಗೆ ಶಾಲು ಹೊದೆಸಿ, ಗಿಡ ನೀಡಿ ಸನ್ಮಾನ ಮಾಡಿದರು.
ಮೈಕಲ್ ಡಿಸೋಜಾ ಕುಟುಂಬದ ಪರವಾಗಿ ರೂ. 75 ಲಕ್ಶದ ಚೆಕ್ಕನ್ನು ಬಿಷಪರಿಗೆ ಹಸ್ತಾಂತರಿ ಮಾತನಾಡಿದ ಮೈಕಲ್ ಡಿ ಸೊಜಾ ಪುತ್ರಿ ಶ್ರೀಮತಿ ನಿಶಾ ಡಿಸೋಜಾ ಮಾತನಾಡಿ “ಸಮುದಾಯದ ದುರ್ಬಲ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುವ ನಿಟ್ಟಿನಲ್ಲಿ 10 ವರ್ಷಗಳಿಗಾಗಿ ಆರಂಭಿಸಿದ ಯೋಜನೆಯನ್ನು ಮುಂದುವರಿಸುತ್ತಿರುವ ಬಗ್ಗೆ ಖುಷಿ ಇದೆ. ನೆರವು ಮತ್ತು ಪ್ರೀತಿ ಹಂಚುವ ಗುಣ ನಮ್ಮ ತಂದೆ ತಾಯಿಯಿಂದ ಕಲಿತಿದ್ದೇವೆ. ನಮಗೆ ಶಕ್ಯವಿದ್ದಷ್ಟು ನೆರವಾಗುವ ಗುಣವನ್ನು ಮೈಗೂಡಿಸಿಕೊಂಡರೆ ಸಶಕ್ತ ಸಮಾಜ ರೂಪುಗೊಳುವುದರಲ್ಲಿ ಎರಡು ಮಾತಿಲ್ಲ” ಎಂದರು.
ಪ್ರಸಕ್ತ ಸಾಲಿನಲ್ಲಿ ಎಂಬಿಬಿಎಸ್, ಇಂಜಿನಿಯರಿಂಗ್ ಸೇರಿದಂತೆ ಪಿಯುಸಿಯಿಂದ ಮೇಲ್ಪಟ್ಟು ಉನ್ನತ ಶಿಕ್ಷಣಕ್ಕಾಗಿ 84 ಮಂದಿಗೆ ಆರ್ಥಿಕ ನೆರವು ನೀಡಲಾಗಿದೆ. ಮೈಕಲ್ ಡಿಸೋಜಾರವರು ಕಳೆದ 11 ವರ್ಷಗಳಿಂದ ಈ ಆರ್ಥಿಕ ನೆರವನ್ನು ನೀಡುತ್ತಿದ್ದು, ಈವರೆಗೆ 3300 ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಪ್ರಸಕ್ತ ಸಾಲಿನಿಂದ ಈ ಯೋಜನೆಯನ್ನು ಸಿಒಡಿಪಿ ಮೂಲಕ ನಿರ್ವಹಣೆ ಮಾಡಲಾಗುತ್ತದೆ.” ಎಂದು ಪ್ರಾಸ್ತಾವಿಕ ಸ್ವಾಗತ ಭಾಷಣದಲ್ಲಿ ಸಿಒಡಿಪಿಯ ನಿರ್ದೇಶಕರಾದ ವಂ. ವಿನ್ಸೆಂಟ್ ಡಿಸೋಜಾ ವಿವರಿಸಿದರು.
ರಿಚರ್ಡ್ ಅಲ್ವಾರಿಸ್ ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕಿ ರೀನಾ ಡಿಕೋಸ್ತಾ ವಂದಿಸಿದರು.