ಜನಪ್ರಿಯ ಡ್ರೈಫ್ರುಟ್ಸ್ ಎಂದೇ ಖ್ಯಾತಿ ಪಡೆದುಕೊಂಡಿರುವ ಖರ್ಜೂರ ಆರೋಗ್ಯ ಗಣಿ ಎಂದೇ ಕರೆಯಿಸಿಕೊಂಡಿರುವ ಆಹಾರ ಪದಾರ್ಥವಾಗಿದೆ. ಅದ್ಭುತವಾದ ಪೌಷ್ಟಿಕಾಂಶ ಗುಣಗಳನ್ನು ಹೊಂದಿರುವ ಖರ್ಜೂರ ಶಕ್ತಿಯನ್ನೊದಗಿಸುವ ಸಾಮರ್ಥ್ಯ ಪಡೆದುಕೊಂಡಿದೆ.
ರಂಜಾನ್ ಮಾಸದಲ್ಲಿ ಖರ್ಜೂರದ ಬೇಡಿಕೆ ವಿಪರೀತವಾಗಿರುತ್ತದೆ. ಇದಕ್ಕೆ ಕಾರಣ ಇದು ಉಪವಾಸದ ಸಮಯದಲ್ಲಿ ನೀಡುವ ಅದ್ಭುತ ಶಕ್ತಿ ಹಾಗಿರುತ್ತದೆ. ಪೌಷ್ಟಿಕಾಂಶಗಳ ಗಣಿಯಾಗಿರುವ ಸಿಹಿ ಖರ್ಜೂರ ನೈಸರ್ಗಿಕ ಸಕ್ಕರೆಯನ್ನು ಒಳಗೊಂಡಿದೆ. ಸಕ್ಕರೆಯ ಬದಲಿಗೆ ನೀವು ಡೇಟ್ಸ್ ಅಥವಾ ಖರ್ಜೂರವನ್ನು ನಿಮ್ಮ ಮೆಚ್ಚಿನ ಅಡುಗೆಗಳಿಗೆ ಬಳಸಬಹುದು. ಇದರಿಂದ ಕ್ಯಾಲೋರಿಯನ್ನು ಸರಿಯಾದ ಪ್ರಮಾಣದಲ್ಲಿಟ್ಟುಕೊಳ್ಳಬಹುದಾಗಿದೆ.
ರೈತರು ಖರ್ಜೂರವನ್ನು ಚಳಿಗಾಲದ ಆರಂಭದಲ್ಲಿ ಕೊಯ್ಲು ಮಾಡುತ್ತಾರೆ. ಈ ಸಮಯದಲ್ಲಿ ಖರ್ಜೂರ ತಾಜಾ ರುಚಿಯನ್ನು ಹೊಂದಿರುತ್ತವೆ. ಹಾಗಾಗಿ ರಂಜಾನ್ ಉಪವಾಸದ ಸಮಯದಲ್ಲಿ ಈ ಒಣಹಣ್ಣಿಗಿದೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ.
ಹೆಚ್ಚಿನವರಿಗೆ ಡೇಟ್ಸ್ ಒಣರೂಪದಲ್ಲೇ ಲಭ್ಯವಾಗುತ್ತದೆ ಇದನ್ನು ಹೆಚ್ಚುಕಾಲ ಸ್ಟೋರ್ ಮಾಡಿಡಬಹುದು. ಖರ್ಜೂರ ಸೇವನೆಯೊಂದಿಗೆ ಉಪವಾಸವಕ್ಕೆ ಅಂತ್ಯಹಾಡುವುದು ರಂಜಾನ್ ಉಪವಾಸಗಳಲ್ಲಿ ವಾಡಿಕೆಯ ಪದ್ಧತಿಯಾಗಿದೆ. ಹದೀಸ್ ಸಾಹಿತ್ಯದಲ್ಲಿ, ಅಲ್ಲಾಹನ ಸಂದೇಶವಾಹಕರು ಉಪವಾಸವನ್ನು ತ್ಯಜಿಸುವ ಸಮಯದಲ್ಲಿ ಖರ್ಜೂರವನ್ನು ಸೇವಿಸುವುದು ಆಧ್ಯಾತ್ಮಿಕ ಮಹತ್ವವವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
ಉಪವಾಸವನ್ನು ತ್ಯಜಿಸುವಾಗ ಮೊದಲು ಖರ್ಜೂರವನ್ನು ಏಕೆ ಸೇವಿಸಲಾಗುತ್ತದೆ?
ಉಪವಾಸದ ಸಮಯದಲ್ಲಿ ದೇಹದಲ್ಲಿ ಕಡಿಮೆ ಬ್ಲಡ್ ಶುಗರ್, ತಲೆನೋವು, ಆಲಸ್ಯ ತಲೆದೋರಬಹುದು ಈ ಸಮಯದಲ್ಲಿ ಖರ್ಜೂರ ಸೇವಿಸುವುಪದು ದೇಹಕ್ಕೆ ಶಕ್ತಿಯನ್ನೊದಗಿಸುತ್ತವೆ ಎಂಬುದು ಆಹಾರ ಪರಿಣಿತರ ವಾದವಾಗಿದೆ.
ಖರ್ಜೂರದಲ್ಲಿ ಕಂಡುಬರುವ ಪೋಷಕಾಂಶಗಳು ಉಪವಾಸದ ಸಮಯದಲ್ಲಿನ ಹಸಿವನ್ನು ನಿವಾರಿಸುತ್ತದೆ. ಖರ್ಜೂರವು ಜೀರ್ಣಕ್ರಿಯೆಗೆ ಕೂಡ ಸಹಾಯ ಮಾಡುತ್ತದೆ ಅಂತೆಯೇ ದೀರ್ಘಕಾಲದವರೆಗೆ ಏನನ್ನೂ ತಿನ್ನದೇ ಒಮ್ಮೆಲೆ ಆಹಾರ ಸೇವಿಸುವಾಗ ಉಂಟಾಗುವ ಹೊಟ್ಟೆಯ ಅಸ್ವಸ್ಥತೆಗೂ ಖರ್ಜೂರ ಸೂಕ್ತವಾದುದಾಗಿದೆ. ಖರ್ಜೂರವು ಪ್ರಾಚೀನ ಹಣ್ಣುಗಳಲ್ಲಿ ಒಂದಾಗಿದೆ ಮತ್ತು ಅವುಗಳ ಕೃಷಿಯು ಸುಮಾರು 8,000 ವರ್ಷಗಳ ಹಿಂದಿನದು ಎಂದು ಇತಿಹಾಸಕಾರರು ನಂಬುತ್ತಾರೆ.
ಖರ್ಜೂರವು ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಒಂದಾಗಿ ಕೂಡ ಸೇವಿಸಬಹುದು. ಇವುಗಳನ್ನು ನಿತ್ಯ ಸೇವಿಸುವುದರಿಂದ ಆರೋಗ್ಯವನ್ನು ಸುಧಾರಿಕೊಳ್ಳಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ತಾಜಾ ಖರ್ಜೂರವು 100 ಗ್ರಾಂಗೆ ಸುಮಾರು 157 ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ಒಣ ಖರ್ಜೂರವು 100 ಗ್ರಾಂಗೆ 300 ಕ್ಕಿಂತ ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುತ್ತದೆ.