ಬೆಂಗಳೂರು : ಸ್ಯಾಮ್ಸಂಗ್ ಆರ್ & ಡಿ ಇನ್ಸ್ಟಿಟ್ಯೂಟ್ ಇಂಡಿಯಾ – ಬೆಂಗಳೂರು (ಎಸ್ಆರ್ಐ-ಬಿ) ಸಂಸ್ಥೆಯು ಬೆಂಗಳೂರಿನ ಗಾರ್ಡನ್ ಸಿಟಿ ಯೂನಿವರ್ಸಿಟಿ (ಜಿಸಿಯು) ಜೊತೆಗಿನ ಸಹಭಾಗಿತ್ವದಲ್ಲಿ ‘ಸ್ಯಾಮ್ಸಂಗ್ ಸ್ಟುಡೆಂಟ್ ಇಕೋಸಿಸ್ಟಮ್ ಫಾರ್ ಇಂಜಿನಿಯರ್ಡೇ ಡೇಟಾ (ಎಸ್ಇಇಡಿ) ಲ್ಯಾಬ್’ ಅನ್ನು ಸ್ಥಾಪಿಸಿದ್ದು, ಈ ಲ್ಯಾಬ್ ನಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಎಐ /ಎಂಎಲ್ ಹಾಗೂ ಡೇಟಾ ಇಂಜಿನಿಯರಿಂಗ್ ಕುರಿತು ಅಧ್ಯಯನ ಮಾಡಲು ಒಂದು ಉತ್ತಮ ಅವಕಾಶ ಒದಗಿಸುತ್ತಿದೆ.
ಈ ಲ್ಯಾಬ್ನಲ್ಲಿ ಜಿಸಿಯುನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಎಸ್ಆರ್ಐ-ಬಿಯ ಹಿರಿಯ ಇಂಜಿನಿಯರ್ಗಳ ಜೊತೆಗೆ ನೈಸರ್ಗಿಕ ಭಾಷಾ ತಿಳುವಳಿಕೆ (ನ್ಯಾಚುರಲ್ ಲ್ಯಾಂಗ್ವೇಜ್ ಅಂಡರ್ ಸ್ಟಾಂಡಿಂಗ್), ಮಾತು ಮತ್ತು ಪಠ್ಯ ಗುರುತಿಸುವಿಕೆ (ಸ್ಪೀಚ್ ಆಂಡ್ ಟೆಕ್ಷ್ಟ್ ರೆಕಗ್ನಿಷನ್) ಮತ್ತು ಯಂತ್ರ ಕಲಿಕೆಯಂತಹ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಂಟಿ ಯೋಜನೆಗಳ ಮೂಲಕ ವಿಶೇಷ ಕಲಿಕೆಯ ಅನುಭವವನ್ನು ಪಡೆಯಲಿದ್ದಾರೆ.
ಸ್ಯಾಮ್ಸಂಗ್ ಈಗಾಗಲೇ ಕರ್ನಾಟಕದಲ್ಲಿ ಎರಡು ಮತ್ತು ತಮಿಳುನಾಡಿನಲ್ಲಿ (ವಿಐಟಿ-ವೆಲ್ಲೋರ್ ಮತ್ತು ವಿಐಟಿ-ಚೆನ್ನೈ) ತಲಾ ಎರಡು ಲ್ಯಾಬ್ ಗಳು ಸೇರಿದಂತೆ ಒಟ್ಟು ನಾಲ್ಕು ಎಸ್ಇಇಡಿ ಲ್ಯಾಬ್ಗಳನ್ನು ಪ್ರಾರಂಭಿಸಿದೆ. ಈ ಮೂಲಕ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಐ ಮತ್ತು ಡೇಟಾ-ಸಂಬಂಧಿತ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ.
ಈ ಕುರಿತು ಮಾತನಾಡಿದ ಎಸ್ಆರ್ಐ-ಬಿನ ಮುಖ್ಯ ತಂತ್ರಜ್ಞಾನ ಅಧಿಕಾರಿ ಮೋಹನ್ ರಾವ್ ಗೋಲಿ ಅವರು, “ತಂತ್ರಜ್ಞಾನ ಕ್ಷೇತ್ರವು ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಸಮಯದಲ್ಲಿ ನಾವಿದ್ದೇವೆ. ನಾವು ಸ್ಥಳೀಯ ಸಂಸ್ಥೆಗಳ ಜೊತೆ ಸಹಯೋಗ ಮಾಡಿಕೊಂಡು ಇಲ್ಲಿನ ಪ್ರತಿಭೆಗಳನ್ನು ಬೆಳೆಸುವ ಮತ್ತು ಆ ಮೂಲಕ ಭಾರತೀಯ ಇಂಜಿನಿಯರ್ಗಳು / ಭಾಷಾ ಶಾಸ್ತ್ರಜ್ಞರನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತೇವೆ. ಈ ಯೋಜನೆಯ ಮೂಲಕ ಅವರನ್ನೆಲ್ಲಾ ಉದ್ಯಮಕ್ಕೆ ಸಿದ್ಧರನ್ನಾಗಿ ಮಾಡುವುದು ಮಾತ್ರವಲ್ಲದೆ ಭವಿಷ್ಯದ ಗೇಮ್ ಚೇಂಜರ್ ಗಳನ್ನಾಗಿ ಮಾಡುವ ಉದ್ದೇಶ ಹೊಂದಿದ್ದೇವೆ. ಗಾರ್ಡನ್ ಸಿಟಿ ವಿಶ್ವವಿದ್ಯಾನಿಲಯದ ಜೊತೆಗಿನ ನಮ್ಮ ಪಾಲುದಾರಿಕೆಯು ನಮ್ಮ ಪ್ರಯತ್ನಗಳಿಗೆ ಮತ್ತಷ್ಟು ಶಕ್ತಿ ತುಂಬಲಿದೆ ಮತ್ತು ಭಾರತದಲ್ಲಿ ಹೊಸ ರೀತಿಯ ಉತ್ಪನ್ನಗಳನ್ನು ರಚಿಸುವ ನಿಟ್ಟಿನಲ್ಲಿ ವಿಶಿಷ್ಟ ಅವಕಾಶಗಳನ್ನು ಒದಗಿಸಲಿದೆ” ಎಂದು ಹೇಳಿದರು.
ಜಿಸಿಯುನಲ್ಲಿರುವ ಲ್ಯಾಬ್ ನಲ್ಲಿ ಜಾಗತಿಕ ಭಾಷೆಗಳಲ್ಲಿ ಟೆಕ್ಷ್ಟ್/ಸ್ಪೀಚ್ ಡೇಟಾ ಜನರೇಷನ್, ಎಂಜಿನಿಯರಿಂಗ್ (ಕ್ಯುರೇಶನ್, ಲೇಬಲಿಂಗ್, ಮತ್ತು ಇತ್ಯಾದಿ), ಡೇಟಾ ಮ್ಯಾನೇಜ್ಮೆಂಟ್ ಮತ್ತು ಆರ್ಕೈವಲ್ ಒಳಗೊಂಡು ಡೇಟಾ ಉತ್ಪನ್ನಗಳನ್ನು ರಚಿಸುವ ಎಐ ಮತ್ತು ಮಲ್ಟಿ ಲಿಂಗ್ವಲ್, ಡೇಟಾ- ಕೇಂದ್ರಿತ ಯೋಜನೆಗಳನ್ನು ಕಾರ್ಯಗತಗೊಳಿಸುವ ಮೂಲಕ ಭಾಷಾಶಾಸ್ತ್ರಜ್ಞರ ಸಾಮರ್ಥ್ಯಗಳನ್ನು ಹೊರ ಹಾಕುವ ಕೆಲಸ ಮಾಡಲಿದೆ.
ಈ ಕುರಿತು ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕುಲಪತಿ ಡಾ. ಜೋಸೆಫ್ ವಿ.ಜಿ. ಅವರು, “ವಿಶ್ವವಿದ್ಯಾಲಯಗಳು ಭವಿಷ್ಯದ ಉದ್ಯೋಗಿಗಳನ್ನು ಬೆಳೆಸಲು ಮತ್ತು ಹೊಸ ಸಂಶೋಧಕರನ್ನು ಸಿದ್ಧಗೊಳಿಸಲು ಕೈಗಾರಿಕೆಗಳ ಜೊತೆಗಿನ ಸಹಯೋಗ ಬಹಳ ಮುಖ್ಯವಾಗಿದೆ. ಎಸ್ಇಇಡಿ (ಸ್ಟೂಡೆಂಟ್ ಇಕೋಸಿಸ್ಟಮ್ ಫಾರ್ ಇಂಜಿನಿಯರ್ಡ್ ಡೇಟಾ) ಕಾರ್ಯಕ್ರಮಕ್ಕಾಗಿ ಸ್ಯಾಮ್ಸಂಗ್ ಜೊತೆಗಿನ ನಮ್ಮ ಪಾಲುದಾರಿಕೆಯು ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಪಾಲಿಸಿ ಜೊತೆಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುತ್ತದೆ. ಈ ಸಹಯೋಗವು ಸ್ಯಾಮ್ಸಂಗ್ನ ಉದ್ಯಮ-ಶಿಕ್ಷಣ ಸಂಬಂಧಗಳನ್ನು ಬಲಪಡಿಸುವುದರ ಜೊತೆಗೆ ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನವನ್ನು ಒದಗಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಇದು ಎರಡೂ ಸಂಸ್ಥೆಗಳ ಮಹತ್ವದ ಹೆಜ್ಜೆಯಾಗಿದೆ” ಎಂದು ಹೇಳಿದರು.
ಎಸ್ಆರ್ಐ-ಬಿ ಮತ್ತು ಜಿಸಿಯು ನಡುವಿನ ಸಹಯೋಗದಲ್ಲಿ ಮೂಡಿ ಬಂದಿರುವ ಎಸ್ಇಇಡಿ ಲ್ಯಾಬ್ 1,500 ಚದರ ಅಡಿಗಳಲ್ಲಿ ಹರಡಿದ್ದು, 5 ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ. ಈ ಲ್ಯಾಬ್ ಸ್ಯಾಮ್ ಸಂಗ್ ಜೊತೆಗಿನ ಸಹಯೋಗದಲ್ಲಿ ಡೇಟಾ ಸೆಟ್ ಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಲು ಅತ್ಯಾಧುನಿಕ ಮೂಲಸೌಲಭ್ಯಗಳನ್ನು ಹೊಂದಿದೆ. ಲ್ಯಾಬ್ ದೊಡ್ಡ ಪ್ರಮಾಣದ ಡೇಟಾವನ್ನು ಸಂಗ್ರಹಿಸಲು, ಪ್ರೊಸೆಸ್ ಮಾಡಲು ಮತ್ತು ಆರ್ಕೈವ್ ಮಾಡಲು ದೃಢವಾದ ಬ್ಯಾಕೆಂಡ್ ಮೂಲಸೌಕರ್ಯವನ್ನು ಹೊಂದಿದೆ ಮತ್ತು ಸುಮಾರು 30 ಜನರಿಗೆ ಕಾರ್ಯ ನಿರ್ವಹಿಸುವ ಅವಕಾಶ ಕಲ್ಪಿಸುತ್ತದೆ.