ಉಡುಪಿ : ಎಂ.ಸಿ.ಸಿ. ಬ್ಯಾಂಕ್ ಬ್ರಹ್ಮಾವರ, ಕುಂದಾಪುರ ಮತ್ತು ಉಡುಪಿ ಶಾಖೆಗಳ ಸಂಯುಕ್ತಾಶ್ರಯದಲ್ಲಿ ಬ್ರಹ್ಮಾವರ ಶಾಖೆಯ ಆವರಣದಲ್ಲಿ ದೀಪಾವಳಿ ಆಚರಿಸಲಾಯಿತು.
ಎಂಸಿಸಿ ಬ್ಯಾಂಕ್ ಬ್ರಹ್ಮಾವರ ಶಾಖೆಯ ಸಿಬ್ಬಂದಿಗಳು ಹಾಡಿದ ಪ್ರಾರ್ಥನಾ ಗೀತೆಯೊಂದಿಗೆ ಸಂಭ್ರಮಾಚರಣೆ ಆರಂಭವಾಯಿತು.
ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಇವರು ವೇದಿಕೆಯಲ್ಲಿರುವ ಅತಿಥಿಗಳೊಂದಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದೀಪಾವಳಿ ಆಚರಣೆಯ ಮಹತ್ವವನ್ನು ಒತ್ತಿ ಹೇಳಿದರು. ಹಬ್ಬವು ಜನರಲ್ಲಿ ಸಹೋದರತ್ವದ ಮನೋಭಾವವನ್ನು ಬೆಳೆಸುತ್ತದೆ ಎಂದು ಹೇಳಿ ಬ್ಯಾಂಕಿಗೆ ನಿರಂತರ ಬೆಂಬಲ ನೀಡಿದ ಗ್ರಾಹಕರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಈಶ್ವರ ಮಲ್ಪೆ ಇವರನ್ನು ಅಧ್ಯಕ್ಷರಾದ ಅನಿಲ್ ಲೋಬೊ ಇವರು ಅವರ ಸಾಧನೆ ಮತ್ತು ಸಮಾಜ ಸೆವೆಗೆ ನೀಡಿದ ಕೊಡುಗೆಗಳಿಗಾಗಿ ಸನ್ಮಾನಿಸಿದರು.
ವೇದಿಕೆಯಲ್ಲಿದ್ದ ಇನ್ನೋರ್ವ ಅತಿಥಿಗಳಾದ ಶ್ರೀ ಬಿ.ಎನ್.ಶಂಕರ್ ಅವರು ತಮ್ಮ ಭಾಷಣದಲ್ಲಿ ಎಂಸಿಸಿ ಬ್ಯಾಂಕ್ ಬ್ರಹ್ಮಾವರ ಶಾಖೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಬಕ್ರೀದ್ ಸೇರಿದಂತೆ ವಿವಿಧ ಆಚರಣೆಗಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪಿ.ಎ. ಹೆಗ್ಡೆ ಉಪಸ್ಥಿತರಿದ್ದು ಬ್ಯಾಂಕಿನ ಮುಂದಿನ ಯಶಸ್ಸಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಬ್ರಹ್ಮಾವರದ ಉದ್ಯಮಿ ಶ್ರೀಧರ್, ಕುಂದಾಪುರ ಶಾಖಾ ವ್ಯವಸ್ಥಾಪಕಿ ಜ್ಯೋತಿ ಬರೆಟ್ಟೊ ಮತ್ತು ಉಡುಪಿ ಶಾಖಾ ವ್ಯವಸ್ಥಾಪಕರಾದ ಶ್ರೀ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.
ಶಾಖೆಯ ನಿರ್ದೇಶಕರಾದ ಎಲ್ರಾಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು. ಕುಂದಾಪುರ ಶಾಖೆಯ ಪ್ರಬಂಧಕಿ ಜ್ಯೋತಿ ಬರೆಟ್ಟೊ ವಂದಿಸಿ, ಬ್ರಹ್ಮಾವರ ಶಾಖಾ ಪ್ರಬಂಧಕ ಓವಿನ್ ರೆಬೆಲ್ಲೊ ನಿರೂಪಿಸಿದರು. ಕಾರ್ಯಕ್ರಮದ ನಂತರ ಕುಂದಾಪುರದ ಎಸ್.ಪಿ. ಮ್ಯೂಸಿಕಲ್ ಮತ್ತು ಅಂಪಾರು ಯುನಿಕ್ ಡ್ಯಾನ್ಸ್ ಅಕಾಡೆಮಿಯಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.