ಬೆಂಗಳೂರು: ಮೈಕ್ರಾನ್ ಫೌಂಡೇಶನ್ ಮತ್ತು ಯುನೈಟೆಡ್ ವೇ ಆಫ್ ಹೈದರಾಬಾದ್ (ಯುಡಬ್ಲ್ಯಎಚ್) ಪಾಲುದಾರಿಕೆ ಮಾಡಿಕೊಂಡಿದ್ದು, ಈ ಸಹಯೋಗದ ಮೂಲಕ ಭಾರತದ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಗಳ 60 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಆ ಮೂಲಕ ಅರ್ಹ ವಿದ್ಯಾರ್ಥಿಗಳು ಶೈಕ್ಷಣಿಕ ಉತ್ಕೃಷ್ಟತೆ ಸಾಧಿಸಲು ಮತ್ತು ಉಜ್ವಲ ಭವಿಷ್ಯ ಹೊಂದಲು ದಾರಿ ಮಾಡಿಕೊಡಲಾಗುತ್ತದೆ. ಈ ವಿದ್ಯಾರ್ಥಿವೇತನಗಳನ್ನು ಯೂನಿವರ್ಸಿಟಿ ರಿಸರ್ಚ್ ಅಲೈಯನ್ಸ್ ಮೈಕ್ರಾನ್ (ಯುಆರ್ಎಎಂ) ಉಪಕ್ರಮದ ಭಾಗವಾಗಿ ನೀಡಲಾಗುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು, ಅವರು ಆಯ್ಕೆ ಮಾಡಿದ ಅಧ್ಯಯನ ಕ್ಷೇತ್ರದಲ್ಲಿ ಮುಂದುವರಿಯಲು ಮತ್ತು ವೃತ್ತಿಜೀವನದ ಪ್ರಯಾಣವನ್ನು ಪ್ರಾರಂಭಿಸಲು ಈ ಯೋಜನೆ ಸಹಾಯ ಮಾಡುತ್ತದೆ.
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದ ಬಿ.ಟೆಕ್ (ಬ್ಯಾಚುಲರ್ ಆಫ್ ಟೆಕ್ನಾಲಜಿ) ಮೂರನೇ ಸೆಮಿಸ್ಟರ್ ಮತ್ತು ಎಂ.ಟೆಕ್ (ಮಾಸ್ಟರ್ ಆಫ್ ಟೆಕ್ನಾಲಜಿ) ಮೊದಲ ವರ್ಷದ ವಿದ್ಯಾರ್ಥಿಗಳಿಗಾಗಿ ಈ ವಿದ್ಯಾರ್ಥಿವೇತನವನ್ನು ಒದಗಿಸಲಾಗುತ್ತದೆ. ವಿದ್ಯಾರ್ಥಿ ವೇತನ ಸ್ವೀಕರಿಸುವ 60 ವಿದ್ಯಾರ್ಥಿಗಳಲ್ಲಿ 16 ಮಹಿಳೆಯರು ಮತ್ತು 10 ವಿಕಲಚೇತನ (ಪಿಡಬ್ಲ್ಯೂಡಿ) ವರ್ಗದ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ. ವಿದ್ಯಾರ್ಥಿವೇತನ ಯೋಜನೆಯು ಮೈಕ್ರಾನ್ನ ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರತಿಭಾವಂತರನ್ನು ಪೋಷಿಸುವ ಬದ್ಧತೆಯನ್ನು ತೋರಿಸುತ್ತದೆ.
ಐಐಟಿ ದೆಹಲಿ, ಐಐಐಟಿ ಬೆಂಗಳೂರು, ಐಐಟಿ ಗಾಂಧಿನಗರ, ಐಐಟಿ ಹೈದರಾಬಾದ್, ಬಿಟ್ಸ್ ಪಿಲಾನಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ, ಸುರತ್ಕಲ್, ಇಂದಿರಾ ಗಾಂಧಿ ದೆಹಲಿ ಮಹಿಳಾ ತಾಂತ್ರಿಕ ವಿಶ್ವವಿದ್ಯಾಲಯ (ಐಜಿಡಿಟಿಯುಡಬ್ಲ್ಯೂ), ಎನ್ಐಟಿ ತಿರುಚ್ಚಿ ಮತ್ತು ಜೆಎನ್ಟಿಯುಎಚ್ ಕಾಲೇಜ್ ಆಫ್ ಇಂಜಿನಿಯರಿಂಗ್ ಸೇರಿದಂತೆ ಭಾರತದ ಕೆಲವು ಪ್ರಮುಖ ಸಂಸ್ಥೆಗಳ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ.
ಆಯ್ಕೆ ಪ್ರಕ್ರಿಯೆಯ ಕುರಿತು ರಾಷ್ಟ್ರ ವ್ಯಾಪಿ ಕಾಲೇಜು ಮಟ್ಟದ ಪ್ರಚಾರಗಳನ್ನು ನಡೆಸಲಾಗಿದ್ದು, ಕ್ಯಾಂಪಸ್ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ತಲುಪಲಾಗಿತ್ತು. ಆದ್ದರಿಂದ ರಾಷ್ಟ್ರದಾದ್ಯಂತ 494 ಸಂಸ್ಥೆಗಳಿಂದ 2,677 ಅರ್ಜಿಗಳು ಬಂದಿದ್ದವು. ತಾಂತ್ರಿಕ ಮೌಲ್ಯಮಾಪನದ ಜೊತೆಗೆ ಪೂರ್ವನಿರ್ಧರಿತ ಆಯ್ಕೆಯ ಮಾನದಂಡಗಳ ಆಧಾರದ ಮೇಲೆ ಯುಡಬ್ಲೂಎಚ್ ನಿಖರವಾದ ವಿಮರ್ಶಾ ಪ್ರಕ್ರಿಯೆಯನ್ನು ಅನುಸರಿಸಿ 60 ಅಸಾಧಾರಣ ಅಭ್ಯರ್ಥಿಗಳನ್ನು ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಿದೆ. ಈ ಹಂತದಲ್ಲಿ ಪ್ರತಿಯೊಬ್ಬರೂ ತಮ್ಮ ಅಧ್ಯಯನದ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮತ್ತು ಭರವಸೆಯನ್ನು ತೋರಿದ್ದಾರೆ. ಪ್ರತಿ ವಿದ್ಯಾರ್ಥಿಗೆ ₹ 80,000 ಮೌಲ್ಯದ ಸ್ಕಾಲರ್ಶಿಪ್ಗಳು ಲಭಿಸುತ್ತಿದ್ದು, ಅದರಿಂದ ಅವರ ಆರ್ಥಿಕ ಹೊರೆ ನಿವಾರಣೆಯಾಗಲಿದೆ. ಅವರು ಹೊಸ ಚೈತನ್ಯದೊಂದಿಗೆ ಅವರ ಶೈಕ್ಷಣಿಕ ಆಕಾಂಕ್ಷೆಗಳನ್ನು ಪೂರ್ಣಗೊಳಿಸಲು ಈ ವಿದ್ಯಾರ್ಥಿವೇತನ ಅನುವು ಮಾಡಿಕೊಡುತ್ತದೆ.
ಈ ಕುರಿತು ಮಾತನಾಡಿದ ಮೈಕ್ರಾನ್ ಕಾರ್ಯನಿರ್ವಾಹಕ ಉಪಾಧ್ಯಕ್ಷ, ಮುಖ್ಯ ಜನರ ಅಧಿಕಾರಿ ಮತ್ತು ಮೈಕ್ರಾನ್ ಫೌಂಡೇಶನ್ನ ಅಧ್ಯಕ್ಷ ಎಪ್ರಿಲ್ ಅರ್ನ್ಜೆನ್, “ಮೈಕ್ರಾನ್ ಫೌಂಡೇಶನ್ ತಮ್ಮ ಜೀವನವನ್ನು ಉತ್ಕೃಷ್ಟಗೊಳಿಸಲು ಬಯಸುವ ವಿದ್ಯಾರ್ಥಿಗಳಿಗೆ ಅವರ ಇಷ್ಟದ ಅಧ್ಯಯನ ಮುಂದುವರಿಸಲು ಮತ್ತು ವೃತ್ತಿಜೀವನದ ಅನ್ವೇಷಣೆಯಲ್ಲಿ ನೆರವಾಗಲು ಬದ್ಧವಾಗಿದೆ” ಎಂದು ಹೇಳಿದರು. ಮಾತು ಮುಂದುವರಿಸುತ್ತಾ, “ಯುಆರ್ಎಎಂ ಸ್ಕಾಲರ್ಶಿಪ್ ಕಾರ್ಯಕ್ರಮದಂತಹ ಉಪಕ್ರಮಗಳ ಮೂಲಕ ಮತ್ತು ಯುಡಬ್ಲ್ಯೂಎಚ್ ನಂತಹ ಪಾಲುದಾರರೊಂದಿಗೆ ಕೆಲಸ ಮಾಡುವುದರ ಮೂಲಕ ಉನ್ನತ ಶಿಕ್ಷಣ ಒದಗಿಸಿ ವಿದ್ಯಾರ್ಥಿಗಳನ್ನು ಭವಿಷ್ಯದ ತಂತ್ರಜ್ಞಾನ ವೃತ್ತಿಜೀವನಕ್ಕೆ ಸಿದ್ಧಪಡಿಸಲಾಗುತ್ತದೆ ಮತ್ತು ಭಾರತದಾದ್ಯಂತ ಇರು ಜನ ಸಮುದಾಯಗಳ ಮೇಲೆ ಈ ಯೋಜನೆ ಶಾಶ್ವತವಾದ ಪರಿಣಾಮವನ್ನು ಬೀರುತ್ತದೆ ಎಂದು ನಾವು ನಂಬುತ್ತೇವೆ” ಎಂದು ಹೇಳಿದರು.
ಮೈಕ್ರೋನ್ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದ್ ರಾಮಮೂರ್ತಿ ಮಾತನಾಡಿ, “ನಮ್ಮ ಯುಆರ್ಎಎಂ ವಿದ್ಯಾರ್ಥಿವೇತನಗಳು ವೈವಿಧ್ಯತೆಯನ್ನು ಉತ್ತೇಜಿಸಲು ಮತ್ತು ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವ ಕಡೆಗಿನ ನಮ್ಮ ನಮ್ಮ ಗಮನವನ್ನು ಒತ್ತಿಹೇಳುತ್ತವೆ” ಎಂದು ಹೇಳಿದರು. ಮಾತು ಮುಂದುವರಿಸಿ, “ಭಾರತದೊಳಗಿನ ಪ್ರತಿಭೆಯ ಸಂಪತ್ತಿನ ಭಾಗವಾದ ಈ ವಿದ್ಯಾರ್ಥಿಗಳು ತಂತ್ರಜ್ಞಾನ ಉದ್ಯಮದ ಕ್ರಿಯಾತ್ಮಕ ವಿಕಸನಕ್ಕೆ ಅನುಗುಣವಾಗಿ ಸೆಮಿಕಂಡಕ್ಟರ್ ಪವರ್ಹೌಸ್ ಆಗಿ ಭಾರತದ ಅಭಿವೃದ್ಧಿಯ ಮುಂಚೂಣಿಯಲ್ಲಿರುತ್ತಾರೆ” ಎಂದು ಹೇಳಿದರು.
ಯುನೈಟೆಡ್ ವೇ ಆಫ್ ಹೈದರಾಬಾದ್ನ ಸಿಇಓ ರೇಖಾ ಶ್ರೀನಿವಾಸನ್, “ಈ ಯುಆರ್ಎಎಂ ಸ್ಕಾಲರ್ಶಿಪ್ ಉಪಕ್ರಮದ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ನೆರವು ಒದಗಿಸಲು ಮೈಕ್ರಾನ್ ಫೌಂಡೇಶನ್ನೊಂದಿಗೆ ಕೆಲಸ ಮಾಡಲು ನಾವು ಸಂತೋಷಪಡುತ್ತೇವೆ. ಈ ವಿದ್ಯಾರ್ಥಿವೇತನಗಳು ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಲು, ಅವರು ಆಯ್ಕೆ ಮಾಡಿದ ಕೋರ್ಸ್ಗಳಲ್ಲಿ ಮುಂದುವರಿಯಲು ಮತ್ತು ಅವರು ಬಯಸುವ ವೃತ್ತಿಯನ್ನು ಪಡೆಯುವ ಅವಕಾಶ ಹೊಂದಲು ಬೆಂಬಲ ನೀಡಲಿದೆ. ವಿದ್ಯಾರ್ಥಿವೇತನ ಕಾರ್ಯಕ್ರಮದ ಮೂಲಕ, ನಾವು ಎಲ್ಲಾ ವಿದ್ಯಾರ್ಥಿಗಳಿಗೆ ನ್ಯಾಯಯುತ ವೇದಿಕೆಯನ್ನು ರಚಿಸುವ ಗುರಿಯನ್ನು ಹೊಂದಿದ್ದೇವೆ” ಎಂದು ಹೇಳಿದರು.
ಯುಆರ್ಎಎಂ ಭಾರತೀಯ ವಿಶ್ವವಿದ್ಯಾನಿಲಯಗಳ ಜೊತೆ ದೃಢವಾದ ಪಾಲುದಾರಿಕೆಯನ್ನು ಸಾಧಿಸಲು ಒಂದು ಸಂಯೋಜಿತ ಚೌಕಟ್ಟನ್ನು ನಿರ್ಮಿಸಿದೆ. ಆ ಮೂಲಕ ದೇಶದಲ್ಲಿನ ಕೆಲವು ಅತ್ಯುತ್ತಮ ಮನಸ್ಸುಗಳೊಂದಿಗೆ ಸೇರಿಕೊಂಡು ಸಂಶೋಧನೆ, ನಾವೀನ್ಯತೆ ಮತ್ತು ಸಹಯೋಗವನ್ನು ಸಾಧಿಸಲು ಗಮನಹರಿಸುತ್ತದೆ. ಮೂಲಭೂತವಾಗಿ, ಸಹಯೋಗವು ಶೈಕ್ಷಣಿಕ ಸಂಸ್ಥೆಗಳು ಮತ್ತು ಪ್ರಮುಖ ಅಧ್ಯಾಪಕ ತಜ್ಞರು, ಸುಧಾರಿತ ಸಂಶೋಧನಾ ಪ್ರಯೋಗಾಲಯಗಳು, ವಿದ್ಯಾರ್ಥಿ ಸಮುದಾಯಗಳು, ಉದ್ಯಮ ಸಂಘಗಳು, ಸ್ಟಾರ್ಟ್ಅಪ್ಗಳು ಮತ್ತು ಸರ್ಕಾರಿ ಏಜೆನ್ಸಿಗಳನ್ನು ಹೆಚ್ಚಿನ ಸಂಶೋಧನೆ ಮಾಡುವ ಸಲುವಾಗಿ, ಶಿಕ್ಷಣ ಒದಗಿಸಲು ಮತ್ತು ನಾವೀನ್ಯತೆ ಸಾಧಿಸಲು ಒಟ್ಟುಗೂಡಿಸುತ್ತದೆ.