ಪೊಲೀಸರೆಂದರೆ ಯಾವಾಗಲೂ ಖಡಕ್ ಆಗಿರುವವರು, ಸದಾ ತಮ್ಮ ಡ್ಯೂಟಿಯಲ್ಲಿ ತೊಡಗಿರುವವರು ಎಂಬ ಅಲೋಚನೆ ಜನರಲ್ಲಿದೆ ಆದರೆ ಇದರ ಹೊರತಾಗಿಯೂ ಇಲ್ಲೊಬ್ಬ ಪೊಲೀಸ್ ಇನ್ಸ್ಪೆಕ್ಟರ್ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಹೊಸೂರು ರಸ್ತೆಯ ಬಳಿ ಇರುವ ಬಂಡೆಪಾಳ್ಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಲ್ ವೈ ರಾಜೇಶ್ ತಮ್ಮ ವ್ಯಾಪ್ತಿಯಲ್ಲಿ ಮಾಡುತ್ತಿರುವ ಸಮಾಜಮುಖಿ ಕಾರ್ಯ ಅಪಾರ ಜನ ಮೆಚ್ಚುಗೆಗೆ ಕಾರಣವಾಗಿದೆ.
ತನ್ನ ಸ್ಟೇಶನ್ ವ್ಯಾಪ್ತಿಯಲ್ಲಿ ಅನೇಕ ಹುಡುಗರು ಎಸ್ ಎಸ್ ಎಲ್ ಸಿ ಫೇಲಾದ ನಂತರ ಅಡ್ಡ ದಾರಿ ಹಿಡಿಯುತ್ತಿದ್ದದ್ದನ್ನು ಗಮನಿಸಿದ ಇನ್ಸ್ಪೆಕ್ಟರ್ ರಾಜೇಶ್ ಅವರಿಗೆಲ್ಲ ಸರಿಯಾದ ಮಾರ್ಗದರ್ಶನ ಮಾಡುವ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫೇಲಾದ ಸುಮಾರು 70 ಮಕ್ಕಳನ್ನು ಸೇರಿಸಿ ಅವರು ಪೂರಕ ಪರೀಕ್ಷೆಗೆ ಕೂರಲು ತರಬೇತಿ ತರಗತಿಗಳನ್ನು ನಡೆಸಲು ವ್ಯವಸ್ಥೆ ಮಾಡಿ ಆ ಹುಡುಗರ ಉಜ್ವಲ ಭವಿಷ್ಯಕ್ಕೆ ನೆರವಾಗುತ್ತಿದ್ದಾರೆ. ಆ ವ್ಯಾಪ್ತಿಯಲ್ಲಿಯೇ ಲಭ್ಯವಿದ್ದ ಉತ್ತಮ ಶಿಕ್ಷಕರ ನೆರವಿನಿಂದ ಆ ಮಕ್ಕಳಿಗೆಲ್ಲ ವಿಶೇಷ ಪಾಠ ದೊರಕುವಂತೆ ಮಾಡಿ ಆರು ವಿಷಯಗಳಲ್ಲಿಯೂ ಫೇಲ್ ಆಗಿದ್ದ ಕೆಲ ಮಕ್ಕಳು ಪೂರಕ ಪರೀಕ್ಷೆಯಲ್ಲಿ ಪಾಸ್ ಆಗುವಂತೆ ಮಾಡಿರುವ ಕೀರ್ತಿ ಇನ್ಸ್ಪೆಕ್ಟರ್ ರಾಜೇಶ್ ಗೆ ಸಲ್ಲುತ್ತದೆ.
ಸುಮಾರು 20ರಿಂದ 25 ದಿನ ಬೆಳಗ್ಗಿನಿಂದ ಸಂಜೆವರೆಗೂ ಆ ಮಕ್ಕಳಿಗೆ ಮಾರ್ಗದರ್ಶನ ಪಾಠಗಳನ್ನು ಮಾಡಿಸಿ ಅವರಿಗೆ ಅಲ್ಲೇ ಊಟದ ವ್ಯವಸ್ಥೆಯನ್ನು ಮಾಡಿಸಿ ಅವರೆಲ್ಲರೂ ಪೂರಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರು ಹೇಗಿರಬೇಕೆಂದು ಪ್ರೆರಣಾದಾಯಿ ಘಟನೆಗಳ ಹೇಳಿ ತಿಳುವಳಿಕೆ ಕೊಡುವ ಪ್ರಯತ್ನವನ್ನು ಮಾಡುವ ಮೂಲಕ ಫೇಲ್ ಆಗಿದ್ದ ಕೆಲ ಮಕ್ಕಳು ಪೂರಕ ಪರೀಕ್ಷೆಯಲ್ಲಿ ಪಾಸ್ ಆಗಿ ಈಗ ಪದವಿ ಪೂರ್ವ ತರಗತಿಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ರಾಜೇಶ್ ಮತ್ತು ಅವರ ಸಂಗಡಿಗರು ಮಾಡುತ್ತಿರುವ ಈ ಒಂದು ದೊಡ್ಡ ಕಾರ್ಯ ನಮ್ಮ ಸಮಾಜಕ್ಕೆ ಇಂದಿನ ಅಗತ್ಯವಾಗಿದ್ದು ಇದು ಉತ್ತಮ ಸಮಾಜವನ್ನು ಕಟ್ಟುವಲ್ಲಿ ಸಹಾಕಾರಿಯಾಗಬಹುದು.
ದರ್ಪಣದ ಮೂಲಕ ಅಭಿಪ್ರಾಯ ಸಂಗ್ರಹ:
ಇನ್ಸ್ಪೆಕ್ಟರ್ ರಾಜೇಶ್ ತನ್ನ ಸ್ಟೇಷನ್ನಿಗೆ ಬರುವ ಪ್ರತಿಯೊಬ್ಬರ ಅಭಿಪ್ರಾಯ ಪಡೆಯುವ “ದರ್ಪಣ” ಎಂಬ ಕಾರ್ಯಕ್ರಮವನ್ನು ಸಹ ಪ್ರಾರಂಭಿಸಿದ್ದಾರೆ. ತನ್ನ ಸ್ಟೇಶನ್ ಗೆ ಬಂದಾಗ ನಾಗರಿಕರಿಗೆ ಸಿಕ್ಕ ಪೊಲೀಸರ ವರ್ತನೆ ಹೇಗಿತ್ತು, ಒಟ್ಟು ಪೊಲೀಸ್ ಸ್ಟೇಷನ್ ನ ವಾತಾವರಣದಿಂದ ಆ ನಾಗರಿಕರಿಗೆ ಏನು ಅನಿಸಿದೆ ಎಂಬ ವಿಚಾರದಲ್ಲಿ ಸುಮಾರು ಐದಾರು ಪ್ರಶ್ನೆಗಳ ಗಳನ್ನು ಹೊಂದಿರುವ ಪ್ರಶ್ನಾವಳಿಯ ಮೂಲಕ ಅನುಭವವನ್ನು ತಿಳಿಯುವ ಪ್ರಯತ್ನವಿದು. ಇದರ ಆಧಾರದ ಮೇಲೆ ಪ್ರತಿ 15 ದಿನಗಳಿಗೆ ಒಮ್ಮೆ ಉತ್ತಮ ಸಿಬ್ಬಂದಿಯನ್ನು “Star of the Fortnight” ಎಂದು ಗುರುತಿಸಿ ಆ ಸಿಬ್ಬಂದಿಯ ಫೋಟೋವನ್ನು ಸ್ಟೇಷನ್ ನಲ್ಲಿ ಹಾಕಿ ಅವರ ಬೆನ್ನು ತಟ್ಟುವ ವಿಶಿಷ್ಟ ಪ್ರಯತ್ನವನ್ನು ಇನ್ಸ್ಪೆಕ್ಟರ್ ರಾಜೇಶ್ ಮಾಡಿದ್ದಾರೆ.