ಇತ್ತೀಚೆಗೆ ದಂಡುಪಾಳ್ಯ ಖ್ಯಾತಿಯ ನಿದೇರ್ಶಕ ಶ್ರೀನಿವಾಸ ರಾಜು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಹೊಸ ಸಿನಿಮಾ ’ಕೃಷ್ಣಂ ಪ್ರಣಯ ಸಖಿ ’ ಟೈಟಲ್ ಅನೌನ್ಸ್ ಮಾಡಿದ್ದರು. ಈ ಸಿನಿಮಾದಲ್ಲಿ ಮಲಯಾಳಿ ಬೆಡಗಿ ಮಾಳವಿಕಾ ನಾಯರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಜತೆಗೆ ಇನ್ನೊಬ್ಬ ನಾಯಕಿಯ ಅವಶ್ಯತೆಯೂ ಇದ್ದು, ಅದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ನಿರ್ದೇಶಕರು ಹೇಳಿದ್ದರು. ಈಗ ಆ ಎರಡನೇ ನಾಯಕಿಯಾಗಿ ‘ಗಟ್ಟಿಮೇಳ’ ಸೀರಿಯಲ್ನಲ್ಲಿ ಖಳನಾಯಕಿಯಾಗಿ ಗುರುತಿಸಿಕೊಂಡಿದ್ದ ಶರಣ್ಯಾ ಶೆಟ್ಟಿ ಆಯ್ಕೆಯಾಗಿದ್ದಾರೆ.
ನಟ ಗಣೇಶ್ ಅವರ ಹುಟ್ಟುಹಬ್ಬದಂದು ‘ಕೃಷ್ಣಂ ಪ್ರಣಯ ಸಖಿʼ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿತ್ತು. ಮೊದಲ ಪೋಸ್ಟರ್ ಲುಕ್ನಿಂದಲೇ ಗಣೇಶ್ ಅಭಿಮಾನಿಗಳ ಗಮನ ಸೆಳೆದಿದ್ದರು. ಗಣೇಶ್ ಅಭಿನಯದ 41ನೇ ಸಿನಿಮಾಗೆ ‘ಕೃಷ್ಣಂ ಪ್ರಣಯ ಸಖಿ’ ಎಂದು ಟೈಟಲ್ ಇಡಲಾಗಿದೆ. ಈ ಪೋಸ್ಟರ್ನಲ್ಲಿ ಗಣೇಶ್ ಮನೆ ಕೆಲಸ ಮಾಡುವ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಶರಣ್ಯಾ ಅವರು ಪ್ರಿಯಾಂಕಾ ಉಪೇಂದ್ರ ಅಭಿನಯದ ‘1980’ ಚಲನಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದರು ಮತ್ತು ‘ಹುಟ್ಟು ಹಬ್ಬದ ಶುಭಾಶಯಗಳು’, ‘ಪೆಂಟಗನ್’, ‘ರವಿ ಬೋಪಣ್ಣ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದಕ್ಕಿಂತಲೂ ಮುನ್ನ ಅವರು ಕಿರುತೆಯಲ್ಲಿ ಸಕ್ರಿಯರಾಗಿದ್ದರು. ಇದೀಗ ’ಕೃಷ್ಣಂ ಪ್ರಣಯ ಸಖಿ ’ ಸಿನಿಮಾದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ.
’ಕೃಷ್ಣಂ ಪ್ರಣಯ ಸಖಿ ’ ಚಿತ್ರದಲ್ಲಿ ಸುಧಾರಾಣಿ, ಸಾಧು ಕೋಕಿಲ ಮತ್ತು ಗಿರಿ ಶಿವಣ್ಣ ಪ್ರಮುಖ ಪಾತ್ರಗಳಲ್ಲಿದ್ದಾರೆ. ತ್ರಿಶೂಲ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.