ಖ್ಯಾತ ನಟ ಕಿರಣ್ ರಾಜ್ ಅವರನ್ನು ‘ಕನ್ನಡತಿ’ ಸೀರಿಯಲ್ನಲ್ಲಿ ನೋಡಿ ಜನರು ಇಷ್ಟಪಟ್ಟರು. ಸಾಫ್ಟ್ ವ್ಯಕ್ತಿತ್ವದ ಪ್ರೇಮಿಯಾಗಿ ಅವರು ಗಮನ ಸೆಳೆದರು. ಆದರೆ ಈಗ ‘ರಾನಿ’ ಸಿನಿಮಾದಲ್ಲಿ ಅವರ ಗೆಟಪ್ ಸಂಪೂರ್ಣ ಬದಲಾಗಿದೆ. ತುಂಬ ಮಾಸ್ ಆಗಿ ಅವರು ಜನರ ಮುಂದೆ ಬರುತ್ತಿದ್ದಾರೆ.
ಈಗ ‘ರಾನಿ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಅದರಲ್ಲಿ ಕಿರಣ್ ರಾಜ್ ಅವರನ್ನು ನೋಡಿದ ಎಲ್ಲರಿಗೂ ಅಚ್ಚರಿ ಆಗಲಿದೆ. ‘ನಾವು ಸೀರಿಯಲ್ನಲ್ಲಿ ನೋಡಿದ ಕಿರಣ್ ರಾಜ್ ಇವರೇನಾ’ ಎಂಬ ಪ್ರಶ್ನೆ ಮೂಡುವ ರೀತಿಯಲ್ಲಿ ಅವರು ಅವತಾರ ತಾಳಿದ್ದಾರೆ.
‘ರಾನಿ’ ಸಿನಿಮಾಗೆ ಗುರುತೇಜ್ ಶೆಟ್ಟಿ ಅವರು ನಿರ್ದೇಶನ ಮಾಡಿದ್ದಾರೆ. ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ್ ಹೆಗ್ಡೆ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಪಾತ್ರವರ್ಗದಲ್ಲಿ ಕಿರಣ್ ರಾಜ್, ರವಿಶಂಕರ್, ಬಿ. ಸುರೇಶ, ಉಗ್ರಂ ಮಂಜು, ಯಶ್ ಶೆಟ್ಟಿ, ಮೈಕೋ ನಾಗರಾಜ್, ಉ್ರಗಂ ರವಿ, ಧರ್ಮಣ್ಣ ಮುಂತಾದವರು ಇದರಲ್ಲಿ ಇದ್ದಾರೆ.
ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿರುವುದರಿಂದ ಕಿರಣ್ ರಾಜ್ ಅವರ ಅಭಿಮಾನಿಗಳು ಈ ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಟೀಸರ್ ನೋಡಿದ ಬಳಿಕ ಆ ನಿರೀಕ್ಷೆ ಅಭಿಮಾನಿಗಳಲ್ಲಿ ಡಬಲ್ ಆಗಿದೆ.
ಒಂದು ಅಂಡರ್ವರ್ಲ್ಡ್ ಕಥೆಯನ್ನು ‘ರಾನಿ’ ಸಿನಿಮಾದಲ್ಲಿ ತೋರಿಸಲಾಗಿದೆ. ಅದ್ದೂರಿ ಮೇಕಿಂಗ್, ಮೈ ನವಿರೇಳಿಸುವ ಆ್ಯಕ್ಷನ್, ಖಡಕ್ ಆದ ಡೈಲಾಗ್ಗಳು ಈ ಟೀಸರ್ನಲ್ಲಿ ಹೈಲೈಟ್ ಆಗಿವೆ. ಅಪ್ಪಟ ಮಾಸ್ ಹೀರೋ ಆಗಿ ಕಿರಣ್ ರಾಜ್ ಅವರು ಫೈಟಿಂಗ್ ದೃಶ್ಯಗಳಲ್ಲಿ ಆರ್ಭಟಿಸಿದ್ದಾರೆ.
ಈ ಚಿತ್ರಕ್ಕೆ ಮಣಿಕಾಂತ್ ಖದ್ರಿ ಅವರು ಸಂಗೀತ ನೀಡಿದ್ದಾರೆ. ಸಚಿನ್ ಬಸ್ರೂರು ಅವರ ಹಿನ್ನೆಲೆ ಸಂಗೀತ ಇದಕ್ಕೆ ನೀಡಿದ್ದಾರೆ. ರಾಘವೇಂದ್ರ ಬಿ. ಕೋಲಾರ ಅವರು ಛಾಯಾಗ್ರಹಣ ಮಾಡಿದ್ದಾರೆ. ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಗಿರೀಶ್ ಹೆಗ್ಡೆ ಕೆಲಸ ಮಾಡಿದ್ದಾರೆ. ವಿನೋದ್ ಅವರ ಸಾಹಸ ನಿರ್ದೇಶನ, ಎ. ಸತೀಶ್ ಕಲಾ ನಿರ್ದೇಶನ, ಉಮೇಶ್ ಆರ್.ಬಿ. ಅವರ ಸಂಕಲನ ‘ರಾನಿ’ ಚಿತ್ರಕ್ಕಿದೆ. ಸಕ್ಕತ್ ಕ್ಯೂರಿಯಾಸಿಟಿ ಹುಟ್ಟಿಸಿರುವ ಈ ಸಿನಿಮಾದಲ್ಲಿ ಕಿರಣ್ ರಾಜ್ ಅವರ ಅಭಿನಯ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.