ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನಗೆದ್ದು ಮಿಂಚಿದ್ದ, ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಜೂನ್ 30ರಂದು ಲಾಸೆನ್ನಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ ಎರಡು ಡೈಮಂಡ್ ಲೀಗ್ ಗೆದ್ದ ಕೀರ್ತಿಗೆ ನೀರಜ್ ಚೋಪ್ರಾ ಭಾಜನರಾಗಿದ್ದಾರೆ.
ಸ್ನಾಯು ಸೆಳೆತದ ಸಮಸ್ಯೆಯಿಂದ ಮೂರು ಸ್ಪರ್ಧೆಗಳಿಂದ ದೂರ ಉಳಿದಿದ್ದ 25ರ ಪ್ರಾಯದ ನೀರಜ್ ಚೋಪ್ರಾ, ಸ್ವಿಜರ್ಲೆಂಡ್ನ ಲಾಸೆನ್ ಡೈಮಂಡ್ ಲೀಗ್ನ 5ನೇ ಪ್ರಯತ್ನದಲ್ಲಿ 87.66 ಮೀಟರ್ ದೂರ ಜಾವೆಲನ್ ಎಸೆಯುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲಿ ಫೌಲ್ ಮಾಡಿದ್ದ ನೀರಜ್ ಚೋಪ್ರಾ, ಎರಡನೇ ಪ್ರಯತ್ನದಲ್ಲಿ 83.52 ಮೀಟರ್, ಮೂರನೇ ಪ್ರಯತ್ನದಲ್ಲಿ 85.04 ಮೀಟರ್ ಜಾವೆಲಿನ್ ಎಸೆದಿದ್ದರು. ಇನ್ನು ನಾಲ್ಕನೇ ಪ್ರಯತ್ನ ಫೌಲ್ ಆಯಿತು.
ಐದನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 87.66 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ಮೊದಲ ಸ್ಥಾನಕ್ಕೆ ಲಗ್ಗೆಯಿಟ್ಟರು. ಬಳಿಕ ಆರನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 84.15 ಮೀಟರ್ ದೂರ ಎಸೆಯುವ ಮೂಲಕ ತಮ್ಮ ಕೊನೆಯ ಪ್ರಯತ್ನವನ್ನು ಮುಗಿಸಿದರು.
ಜರ್ಮನಿಯ ಜುಲಿಯನ್ ವೆಬರ್ ಅವರು 87.03 ಮೀಟರ್ ದೂರ ಜಾವೆಲಿನ್ ಎಸೆದು ನೀರಜ್ ಚೋಪ್ರಾ ಪ್ರಬಲ ಪೈಪೋಟಿ ನೀಡಿದರು. ಆ ಮೂಲಕ ಜುಲಿಯನ್ ವೆಬರ್ ಬೆಳ್ಳಿ ಪದಕ ಪಡೆದುಕೊಂಡರು. ಇನ್ನು ಜೆಕ್ ಗಣರಾಜ್ಯದ ಜಾಕೋಬ್ ವಡ್ಲೆಜ್ (86.13 ಮೀಟರ್) ಕಂಚಿನ ಪದಕಕ್ಕೆ ಸಮಾಧಾನ ಪಟ್ಟರು.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 87.58 ಮೀಟರ್ ದೂರ ಎಸೆದು ಜಾವೆಲಿನ್ ಚಿನ್ನದ ಪದಕ ಗೆದ್ದು ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ನಿರ್ಮಿಸಿದ್ದ ನೀರಜ್ ಚೋಪ್ರಾ, ಕಳೆದ ಮೇ 5ರಂದು ನಡೆದಿದ್ದ ದೋಹಾ ಡೈಮಂಡ್ ಲೀಗ್ನಲ್ಲಿ 88.67 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಜಯಿಸಿದ್ದರು. 2022ರ ಆಗಸ್ಟ್ನಲ್ಲಿ ನೀರಜ್ ಚೋಪ್ರಾ ತಮ್ಮ ಚೊಚ್ಚಲ ಡೈಮಂಡ್ ಲೀಗ್ ಪದಕ ಗೆದ್ದಿದ್ದರು.