ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಲು ಇಂದೇ ಕೊನೆಯ ದಿನವಾಗಿದೆ. ಒಂದು ವೇಳೆ ನೀವಿನ್ನೂ ಲಿಂಕ್ ಮಾಡಿಸದಿದ್ದರೆ, ಈಗಲೇ ಲಿಂಕ್ ಮಾಡಿಸಿ, ಇಲ್ಲವಾದಲ್ಲಿ ಪಾನ್ಕಾರ್ಡ್ ಅಮಾನ್ಯವಾಗಲಿದೆ.
ಕಳೆದ ಮೂರು ತಿಂಗಳಲ್ಲಿ ಆದಾಯ ತೆರಿಗೆ ಇಲಾಖೆಯು ಹಲವು ಬಾರಿ ದಿನಾಂಕವನ್ನು ವಿಸ್ತರಣೆ ಮಾಡಿತ್ತು. ಬಳಿಕ 2023ರ ಜೂನ್ 30ರ ವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು. ಇದೀಗ ಪ್ಯಾನ್- ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲು ಇಂದೇ ಕೊನೆಯ ದಿನವಾಗಿದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಸದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.
ಸದ್ಯ ಲಿಂಕ್ ಮಾಡಿಸಲು 1000 ರೂ. ಫೈನ್ ಇದೆ. ಮುಂದಿನ ದಿನಗಳಲ್ಲಿ ಲಿಂಕ್ ಮಾಡಿಸಲು ಹತ್ತು ಸಾವಿರ ಫೈನ್ ಬೀಳುವ ಸಾಧ್ಯತೆ ಇದೆ. 80 ವರ್ಷ ಮೇಲ್ಪಟ್ಟವರು ಹಾಗೂ ನಾನ್ ರೆಸಿಡೆಂಟ್ ಆಫ್ ಇಂಡಿಯನ್ಸ್ ಆಧಾರ್-ಪ್ಯಾನ್ ಲಿಂಕ್ ಮಾಡಿಸಬೇಕಾಗಿಲ್ಲ.
ಕೆಲವರಲ್ಲಿ ಪ್ಯಾನ್-ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ ಎಂಬ ಗೊಂದಲವಿದೆ ಆದ್ದರಿಂದ ಮೊದಲಿಗೆ ಲಿಂಕ್ ಆಗಿದೆಯೇ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಿ. ಲಿಂಕ್ ಆಗದೇ ಇದ್ದರೆ ಇಂದೇ ಲಿಂಕ್ ಮಾಡಿಸಿ.
ಪ್ಯಾನ್-ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ ಎಂದು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ:
https://eportal.incometax.gov.in/iec/foservices/#/pre-login/link-aadhaar-status
ಲಿಂಕ್ ಆಗಿಲ್ಲ ಎಂದಾದರೆ ಆಧಾರ್-ಪ್ಯಾನ್ ಲಿಂಕ್ ಮಾಡಲು ಈ ವಿಧಾನ ಅನುಸರಿಸಿ:
*ಮೊದಲು www.incometax.gov.in ನಲ್ಲಿ ಅಧಿಕೃತ ಆದಾಯ ತೆರಿಗೆ ಇ-ಫೈಲಿಂಗ್ ವೆಬ್ಸೈಟ್ಗೆ ಭೇಟಿ ನೀಡಿ.
*ನಿಮ್ಮ ಲಾಗಿನ್ ಮಾಹಿತಿಯನ್ನು ಬಳಸಿಕೊಂಡು ಆದಾಯ ತೆರಿಗೆ ಪೋರ್ಟಲ್ಗೆ ಲಾಗ್ ಇನ್ ಮಾಡಿ.
*ಪಾಪ್-ಅಪ್ ವಿಂಡೋ ಕಾಣಿಸುತ್ತದೆ. ಇಲ್ಲದಿದ್ದರೆ, ಮೆನು ಬಾರ್ನಿಂದ ಪ್ರೊಫೈಲ್ ಸೆಟ್ಟಿಂಗ್ಗಳಲ್ಲಿ ಹುಡುಕಿ ‘ಲಿಂಕ್ ಆಧಾರ್’ ಆಯ್ಕೆಯನ್ನು ಆರಿಸಿ.
*ಹೊಸ ವಿಂಡೋ ಕಾಣಿಸುತ್ತದೆ. ಅಲ್ಲಿ ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ವಿವರಗಳು, ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
*ಮಾಹಿತಿಯನ್ನು ಫೀಡ್ ಮಾಡಿದ ನಂತರ, ‘ನನ್ನ ಆಧಾರ್ ವಿವರಗಳನ್ನು ವ್ಯಾಲಿಡೇಟ್ ಮಾಡಲು ನಾನು ಒಪ್ಪುತ್ತೇನೆ’ ಎನ್ನುವ ಆಯ್ಕೆಯನ್ನು ಆರಿಸಿ.
*ಈಗ ‘ಮುಂದುವರಿಸಿ’ ಬಟನ್ ಕ್ಲಿಕ್ ಮಾಡಿ.
*ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
*ಸ್ಕ್ರೀನ್ ನಲ್ಲಿನ ಖಾಲಿ ಜಾಗಗಳನ್ನು ಭರ್ತಿ ಮಾಡಿ ಮತ್ತು ‘ವ್ಯಾಲಿಡೇಟ್’ ಬಟನ್ ಒತ್ತಿರಿ.
*ನೀವು ದಂಡವನ್ನು ಪಾವತಿಸಿದ ನಂತರ, ನಿಮ್ಮ ಪ್ಯಾನ್-ಆಧಾರ್ ಲಿಂಕ್ ಆಗುತ್ತದೆ.