ಪ್ರತಿಯೊಬ್ಬರಿಗೂ ಜೀವನದಲ್ಲಿ ಸಂತೋಷವು ವಿಭಿನ್ನವಾಗಿ ಕಾಣಸಿಗುತ್ತದೆ. ಆದರೆ ಜೀವನದಲ್ಲಿ ಹಲವಾರು ಬದಲಾವಣೆಗಳು, ಅಭ್ಯಾಸಗಳು ನಿಮ್ಮನ್ನು ಹೆಚ್ಚು ಸಂತೋಷದಾಯಕ ಮಾರ್ಗಕ್ಕೆ ಕರೆದೊಯ್ಯುವ ಹಾಗೆ ನಾವು ನೋಡಿಕೊಳ್ಳಬೇಕು.
ಬದುಕೆಂದ ಮೇಲೆ ಸುಖ –ದುಃಖ ಸಹಜ ಅಲ್ಲವೇ? ಆದರೆ ನಮಗೆ ಸಮಸ್ಯೆಗಳು ಬಂದಾಗ ಅಥವಾ ಒಬ್ಬಂಟಿ ಎನಿಸಿದಾಗ, ಒತ್ತಡವನ್ನು ನಿರ್ವಹಿಸಲು ಸಾಧ್ಯವಾಗದಿರುವಂಥ ಅನೇಕ ಸ್ಥಿತಿಗಳಲ್ಲಿ ಕುಗ್ಗಿ ಹೋಗುತ್ತೇವೆ. ಅಂಥ ಒತ್ತಡದ ಸ್ಥಿತಿಗಳಲ್ಲಿ ಬಹಳಷ್ಟು ಜನರು ಖಿನ್ನತೆಗೆ ಜಾರುತ್ತಾರೆ.
ಹೊಸ ಅಭ್ಯಾಸಗಳು ಮತ್ತು ದಿನಚರಿಗಳನ್ನು ರಚಿಸುವುದು ಮೊದ ಮೊದಲು ಕಷ್ಟಕರ ಎನಿಸಬಹುದು. ಆದರೆ ಸಾಮಾನ್ಯವಾಗಿ ಸರಳವಾದ ಜೀವನಶೈಲಿಯ ಬದಲಾವಣೆಗಳು ನಮ್ಮ ಮಾನಸಿಕ ಆರೋಗ್ಯದ ಮೇಲೆ ಆಳವಾದ ಪ್ರಭಾವವನ್ನು ಬೀರತ್ತದೆ ಎಂದು ಟೆಕ್ಸಾಸ್ A&M ವಿಶ್ವವಿದ್ಯಾನಿಲಯದ ಮಾನಸಿಕ ಮತ್ತು ಮೆದುಳಿನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಜೋಶುವಾ ಹಿಕ್ಸ್ ಅವರು ವಿವರಿಸುತ್ತಾರೆ.
ಈ ಹಿನ್ನೆಲೆಯಲ್ಲಿ ನಿಮ್ಮ ಬದುಕನ್ನು ಸಂತೋಷವಾಗಿಟ್ಟುಕೊಳ್ಳಲು ನಿಮ್ಮ ಮನಸ್ಸು ಮತ್ತು ದೇಹದ ಆರೈಕೆಯನ್ನು ಈ ಕೆಳಗಿನ ರೀತಿಯಲ್ಲಿ ಇರಲು ಪ್ರಯತ್ನಿಸಿ.
1. ಕೃತಜ್ಞತೆಯನ್ನು ಅಭ್ಯಾಸ ಮಾಡಿ: ಕೃತಜ್ಞತಾ ಭಾವವು ಹಲವು ರೀತಿಯಲ್ಲಿ ನಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಕೃತಜ್ಞರಾಗಿರುವುದರಿಂದ ನಾವು ಧನಾತ್ಮಕವಾಗುತ್ತೇವೆ. ಕೃತಜ್ಞತೆಯನ್ನು ಅಭ್ಯಾಸ ಮಾಡುವುದರಿಂದ ಜನರು ಹೆಚ್ಚು ಸಕಾರಾತ್ಮಕ ಭಾವನೆಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ.
2. ಬೆಳಗಿನ ದಿನಚರಿಯನ್ನು ಬದಲಾಯಿಸಿ: ಮನಸ್ಸು-ದೇಹವನ್ನ ಖುಷಿಯಾಗಿ ಇಟ್ಟುಕೊಳ್ಳಲು ಬೆಳಗಿನ ವ್ಯಾಯಾಮ ಮಾಡುವುದು, ಸ್ಪೂರ್ತಿದಾಯಕ ಬರಹಗಳನ್ನು ಓದುವುದು ಮತ್ತು ಈ ದಿನದ ಗುರಿ ಉದ್ದೇಶಗಳನ್ನು ಹೊಂದಿಸುವುದು ಮುಂತಾದವುಗಳನ್ನು ರೂಢಿಸಿಕೊಳ್ಳಬೇಕು.
3. ಸಂತೋಷ ನೀಡುವ ಕೆಲಸಗಳ ಪಟ್ಟಿ ಮಾಡಿ: ನಿಮಗೆ ಸಂತೋಷವನ್ನು ತರುವ ಚಟುವಟಿಕೆಗಳ ಪಟ್ಟಿಯನ್ನು ತಯಾರಿಸಿಕೊಂಡು, ಪ್ರತಿದಿನ ಆ ಚಟುವಟಿಕೆಗಳಲ್ಲಿ ಒಂದನ್ನು ಮಾಡುವ ಹಾಗೆ ನೋಡಿಕೊಳ್ಳಿ.
4. ವ್ಯಾಯಾಮ ಮಾಡಿ: ವ್ಯಾಯಾಮವು ನಮ್ಮ ದೇಹಕ್ಕೆ ಒಳ್ಳೆಯದು ಆದರೆ ಅದು ನಮ್ಮ ಮನಸ್ಸಿಗೆ ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ? ಹೌದು, ವ್ಯಾಯಾಮವು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂಬುದಾಗಿ ಸಂಶೋಧನೆಯು ಸತತವಾಗಿ ಹೇಳುತ್ತಿರುತ್ತದೆ.
ನಿಯಮಿತ ವ್ಯಾಯಾಮವು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ಸುದೀರ್ಘ ವಾಕಿಂಗ್ ಮಾಡಲು ಪ್ರಯತ್ನಿಸಿ. ಅಲ್ಲದೇ ನೃತ್ಯ ಅಥವಾ ಯೋಗವನ್ನೂ ನೀವು ಪ್ರಯತ್ನಿಸಬಹುದು. ಅದರಿಂದ ನಿಮ್ಮ ಮನಸ್ಸು ಸದಾ ಖುಷಿಯಾಗಿರುತ್ತದೆ.
5. ಹೈಡ್ರೇಟೆಡ್ ಆಗಿರಿ: ನಿರ್ಜಲೀಕರಣವು ನಿಮ್ಮ ಮನಸ್ಥಿತಿ ಮತ್ತು ಅರಿವಿನ ಪ್ರಕ್ರಿಯೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಸಾಕಷ್ಟು ನೀರು ಕುಡಿಯುವುದನ್ನು ಅಭ್ಯಾಸ ಮಾಡಿ.
6. ಪ್ರಕೃತಿಯಲ್ಲಿ ಕಾಲ ಕಳೆಯಿರಿ : ಹೊರಾಂಗಣದಲ್ಲಿ ಕಾಲ ಕಳೆಯುವುದು ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸಬಹುದು. ನಾವು ಪ್ರಕೃತಿ ಮಧ್ಯೆ ಇದ್ದಾಗ ನಮ್ಮ ಬಗ್ಗೆ ಮತ್ತು ನಮ್ಮ ಸಮಸ್ಯೆಗಳನ್ನು ಮರೆತುಬಿಡುತ್ತೇವೆ. ಉದ್ಯಾನವನದಲ್ಲಿ ಸರಳವಾದ ವಾಕಿಂಗ್ ಮಾಡಿ ಅಥವಾ ಹತ್ತಿರದ ನಿಸರ್ಗ ತಾಣಗಳಿಗೆ ಭೇಟಿ ನೀಡುವುದು ಮುಂತಾದವುಗಳನ್ನು ಮಾಡಬಹುದು.
7. ಮೆಡಿಟೇಶನ್ : ಧ್ಯಾನವನ್ನು ಆಗಾಗ ಮಾಡುತ್ತಿರಬೇಕು. ಇದು ನಿಮಗೆ ಜಾಗರೂಕರಾಗಿರಲು ಮತ್ತು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ.
ಹೀಗೆ ನಿಮ್ಮ ಮನಸ್ಸನ್ನು ಮೊದಲು ಖುಷಿಪಡಿಸಿ ನಿಮ್ಮ ಜೀವನ ಸದಾ ಸಂತೋಷದಲ್ಲಿರುವ ಹಾಗೆ ನೋಡಿಕೊಳ್ಳಿ.