ಕಲ್ಲಂಗಡಿಯಂತೆಯೇ ಅತಿ ಹೆಚ್ಚು ನೀರಿನಾಂಶವನ್ನು ಹೊಂದಿರುವ ಹಣ್ಣು ಕರ್ಬೂಜ . ಹೊರಗಿನಿಂದ ಬೂದು, ಹಸಿರು ಮಿಶ್ರಿತ ಸಿಪ್ಪೆ ಹಾಗೂ ಕಿತ್ತಳೆ ಬಣ್ಣದ ತಿರುಳಿನೊಂದಿಗೆ ಕೂಡಿರುತ್ತದೆ.
ಬೇಸಿಗೆಯ ದಾಹವನ್ನು ದೂರ ಮಾಡುವ ವಿಶೇಷ ಗುಣ ಈ ಹಣ್ಣು. ಈ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ 6, ಪೊಟ್ಯಾಶಿಯಂ, ಬೀಟಾ ಕ್ಯಾರೋಟೀನ್, ಕಬ್ಬಿಣ, ಮ್ಯಾಂಗನೀಸ್, ಫೋಲಿಕ್ ಆಮ್ಲ ಮತ್ತು ಅಧಿಕ ನಾರಿನಂಶ ಹಾಗೂ ಇತರ ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ.
ಈ ಹಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚಿದ್ದರೂ ಕ್ಯಾಲೋರಿಯು ಕಡಿಮೆ ಇರುವ ಕಾರಣದಿಂದಾಗಿ ಕೊಬ್ಬಿನಾಂಶ ಹೆಚ್ಚಿಸದೆ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ಇದರ ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಅವುಗಳೆಂದರೆ,
ಕಿಡ್ನಿ ಸಮಸ್ಯೆ ನಿವಾರಣೆ:
ಮೂತ್ರ ಕೋಶದಲ್ಲಿ ಕಲ್ಲಿರುವವರು ಈ ಹಣ್ಣಿನ ರಸ ಕುಡಿಯಬೇಕು. ಈ ಹಣ್ಣಿನ ಬೀಜದ ತಿರುಳು ಮೂತ್ರಪಿಂಡ ಮತ್ತು ಯಕೃತ್ತಿನ ತೊಂದರೆಗಳ ನಿವಾರಣೆಗೆ ಉಪಯುಕ್ತ. ಈ ಹಣ್ಣನ್ನು ಕಿಡ್ನಿ ಸಮಸ್ಯೆ ಇರುವವರಿಗೆ ಕೊಟ್ಟರೆ ಅತ್ಯುತ್ತಮ. ಹಾಗಾಗಿ ಇದು ಮೂತ್ರಕೋಶದ ಸಂಬಂಧಿ ಕಾಯಿಲೆ ಮತ್ತು ಇತರ ಅಪಾಯಕಾರಿ ಕಾಯಿಲೆ ಬರದಂತೆ ತಡೆಯುತ್ತವೆ. ಅಲ್ಲದೆ ಮಲಬದ್ದಿತೆ ಇರುವವರು ಈ ಹಣ್ಣನ್ನು ಸೇವಿಸುವುದು ಒಳ್ಳೆಯದು
ಕ್ಯಾನ್ಸರ್ ರೋಗ ತಡೆಗಟ್ಟಲು:
ಕ್ಯಾನ್ಸರ್ ಬರುವುದರಿಂದ ರಕ್ಷಣೆ ಒದಗಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಹಾಗೂ ಬೀಟಾ ಕ್ಯಾರೋಟೀನ್ ಎಂಬ ಆಂಟಿ ಆಕ್ಸಿಡೆಂಟ್, ಇದು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಹುದಾದ ಫ್ರೀ ರ್ಯಾಡಿಕಲ್ ಎಂಬ ಕಣಗಳನ್ನು ಹಿಮ್ಮೆಟ್ಟಿಸುವ ಗುಣವನ್ನು ಹೊಂದಿದ್ದು, ಈ ಮೂಲಕ ದೇಹದ ಜೀವಕೋಶಗಳಿಗೆ ಈ ಕಣಗಳು ಹಾನಿ ಮಾಡುವುದರಿಂದ ರಕ್ಷಿಸುತ್ತದೆ. ಈ ಹಾನಿ ಮುಂದುವರೆದರೆ ಕ್ಯಾನ್ಸರ್ ಗೂ ತಿರುಗಬಹುದು. ಕ್ಯಾನ್ಸರ್ ಕಾಯಿಲೆ ಇರುವವರು ಈ ಹಣ್ಣನ್ನು ದಿನಾಲು ತಿನ್ನುವುದು ಉತ್ತಮ.
ರೋಗ ನಿರೋಧಕ ಶಕ್ತಿ ಹೆಚ್ಚಳ:
ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಯಿಂದ ನಮ್ಮ ದೇಹಕ್ಕೆ ಈ ಹಣ್ಣು ಸೇವಿಸುವುದರಿಂದ ಹೆಚ್ಚಿನ ಪ್ರಮಾಣದ ಬಿಳಿರಕ್ತಕಣಗಳನ್ನು ಉತ್ಪತ್ತಿಸಲು ಸಾಧ್ಯವಾಗುತ್ತದೆ. ರೋಗದ ವಿರುದ್ಧ ಹೋರಾಡುವ ಶಕ್ತಿ ಈ ಕರ್ಬುಜ ಹಣ್ಣಿನಲ್ಲಿದೆ.
ಜೀರ್ಣಶಕ್ತಿಗೆ ಸಹಕಾರಿ:
ಜೀರ್ಣಕ್ರಿಯೆಯಲ್ಲಿ ಏನಾದರು ತೊಂದರೆ ಇದ್ದಲ್ಲಿ ಕರ್ಬೂಜ ಹಣ್ಣು ಸೇವಿಸಬೇಕು . ಆಗ ಜೀರ್ಣಕ್ರಿಯೆ ಸರಾಗವಾಗುತ್ತದೆ. ಕರ್ಬೂಜದಲ್ಲಿರುವ ನೀರಿನಂಶ ಜೀರ್ಣಕ್ರಿಯೆಗೆ ನೆರವು ನೀಡುತ್ತದೆ. ಇದರಲ್ಲಿರುವ ಖನಿಜಾಂಶವು ದೇಹದಲ್ಲಿನ, ಅದರಲ್ಲೂ ಮುಖ್ಯವಾಗಿ ಜಠರದಲ್ಲಿ ಜೀರ್ಣಕ್ರಿಯೆಗೆ ತಡೆಯೊಡ್ಡುವ ಆಮ್ಲೀಯತೆ (ಅಸಿಡಿಟಿ) ಯನ್ನು ನಿವಾರಿಸುತ್ತದೆ. ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಬೇಸಿಗೆಯಲ್ಲಿ ಇದರ ಉಪಯೋಗ ಎಲ್ಲರಿಗೂ ಅಗತ್ಯವಿರುತ್ತದೆ.
ಗರ್ಭಿಣಿಯರಿಗೆ ಉತ್ತಮ:
ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹಕ್ಕೆ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲದ ಅಗತ್ಯವಿರುತ್ತದೆ. ಈ ಹಣ್ಣಿನಲ್ಲಿ ಫೋಲಿಕ್ ಆಮ್ಲ ಉತ್ತಮ ಪ್ರಮಾಣದಲ್ಲಿದ್ದು ಗರ್ಭಿಣಿಯ ದೇಹಕ್ಕೆ ಅಗತ್ಯ ಪೋಷಣೆ ಒದಗಿಸಲು ಸಹಾಯ ಮಾಡುತ್ತದೆ. ಗರ್ಭಿಣಿಯಾಗಬಯಸುವ ಮಹಿಳೆಯರಲ್ಲಿ ಒಂದು ವೇಳೆ ಗರ್ಭನಾಳದ ತೊಂದರೆ ಇದ್ದು ಗರ್ಭ ನಿಲ್ಲದೇ ಇದ್ದರೆ ಈ ಹಣ್ಣಿನ ಸೇವನೆಯಿಂದ ಗರ್ಭ ನಿಲ್ಲುವ ಸಾಧ್ಯತೆ ಹೆಚ್ಚುತ್ತದೆ. ಬಾಣಂತಿಯರು ಈ ಹಣ್ಣನ್ನು ಸೇವಿಸಿದರೆ. ಎದೆಹಾಲಿನ ಉತ್ಪತ್ತಿ ಕೂಡಾ ಹೆಚ್ಚಿಸಲು ಕೂಡ ಸಹಾಯಕವಾಗುತ್ತದೆ.
ಮಧುಮೇಹ ಸಮಸ್ಯೆ:
ವೈದ್ಯರು ಮಧುಮೇಹಿಗಳಿಗೆ ಸ್ವಲ್ಪ ಕಹಿಯಾದ ಕರ್ಬೂಜ ಹಣ್ಣಿನ ರಸವನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ. ಏಕೆಂದರೆ ಇದು ಮಧುಮೇಹಿಗಳ ದೇಹದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಬೇರೆ ಹಣ್ಣಿನ ಜ್ಯೂಸನ್ನು ಕುಡಿಯುವುದಕ್ಕಿಂತ ಮದುವೆಗಳು ಇದರ ಜ್ಯೂಸನ್ನು ಕುಡಿಯುವುದು ಒಳ್ಳೆಯದು.
ಸೌಂದರ್ಯಕ್ಕೆ ಸಹಕಾರಿ:
ಒಂದು ಮಧ್ಯಮ ಗಾತ್ರದ ಖರ್ಬೂಜದ ಹಣ್ಣಿನ ಕಾಲುಭಾಗದ ತಿರುಳು, ಮೂರು ಸ್ಟ್ರಾಬೆರಿ ಹಣ್ಣು, ಒಂದು ದೊಡ್ಡ ಚಮಚ ಓಟ್ಸ್, ಸ್ವಲ್ಪ ಜೇನುತುಪ್ಪ ಸೇರಿಸಿ ಚೆನ್ನಾಗಿ ಬೆರೆಸಿ ಲೇಪನ ತಯಾರಿಸಿಕೊಂಡು ಮುಖ, ಕುತ್ತಿಗೆ, ಕೈ ಕಾಲುಗಳಿಗೆ ಹಚ್ಚಿ ಸುಮಾರು ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಂಡರೆ, ಚರ್ಮ ಪೋಷಕಾಂಶಗಳನ್ನು ಪಡೆದು ಕೋಮಲತೆ ಮತ್ತು ಕಾಂತಿ ಪಡೆಯುವಂತೆ ಮಾಡುತ್ತದೆ.
ಕಣ್ಣಿನ ಆರೋಗ್ಯಕ್ಕೆ :
ಉತ್ತಮ ದೃಷ್ಟಿ ಕಾಪಾಡಿಕೊಳ್ಳಲು ಬೀಟಾ ಕೆರೋಟಿನ್ ಎಂಬ ಅಂಶ ಇದರಲ್ಲಿದೆ. ಈ ಬೀಟಾ ಕೆರೊಟಿನ್ ಗಳು ವಿಟಮಿನ್ ಎ ಆಗಿ ಮಾರ್ಪಾಡಾಗಿ ಕಣ್ಣಿನ ಪೊರೆ ಮತ್ತು ದೃಷ್ಟಿ ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಕಣ್ಣಿನ ಸಮಸ್ಯೆ ಬಂದ ಮೇಲೆ ಅನ್ನೋದಕ್ಕಿಂತ ಮೊದಲಿಂದಲೇ ಹಣ್ಣನ್ನು ಸೇವನೆ ಮಾಡುವುದು ಉತ್ತಮ.